ಚಾಮರಾಜನಗರ ಉಸ್ತುವಾರಿಯಾಗಿದ್ದರೂ ಜಿಲ್ಲಾ ಕಾರ್ಯಕ್ರಮಕ್ಕೆ ಗೈರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಬೇಸರಗೊಂಡಿರುವ ಸಚಿವ ಸೋಮಣ್ಣ. 

ಚಾಮರಾಜನಗರ/ಬೆಂಗಳೂರು(ಮಾ.02): ಆಡಳಿತಾರೂಢ ಬಿಜೆ​ಪಿಯ ವಿಜ​ಯ​ಸಂಕಲ್ಪ ಯಾತ್ರೆಗೆ ಚಾಲನೆ ನೀಡಲು ಪಕ್ಷ​ದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ​ಬಿ.​ಎ​ಸ್‌.ಯಡಿಯೂರಪ್ಪ ಅವರು ಚಾಮ​ರಾ​ಜ​ನ​ಗ​ರಕ್ಕೆ ಆಗ​ಮಿ​ಸಿ​ದ್ದರೂ ಜಿಲ್ಲಾ ಉಸ್ತು​ವಾರಿ ಸಚಿವ ಸೋಮಣ್ಣ ಅವರು ಕಾರ್ಯ​ಕ್ರ​ಮ​ದಿಂದ ದೂರ​ ಉ​ಳಿ​ದ​ದ್ದು ತೀವ್ರ ಚರ್ಚೆಗೆ ಕಾರ​ಣ​ವಾ​ಗಿ​ದೆ. ಮೇಲಾಗಿ ಯಾತ್ರೆಗಾಗಿ ರಚಿಸಲಾಗಿರುವ ತಂಡದಲ್ಲಿ ಸೋಮಣ್ಣ ಅವರಿದ್ದರೂ ಗೈರು ಹಾಜರಾಗಿ ಬೆಂಗಳೂರಿನಲ್ಲೇ ಉಳಿದಿರುವುದು ನಾನಾ ವ್ಯಾಖ್ಯಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪಕ್ಷ​ದ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ವಿವಿಧ ಹುದ್ದೆ​ಗ​ಳಿ​ಗೆ ನೇಮಕಾತಿ ವೇಳೆ ತಮ್ಮನ್ನು ಕೊಂಚವೂ ಗಣನೆಗೆ ತೆಗೆದುಕೊಂಡಿಲ್ಲ. ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಅವ​ರನ್ನು ಕಳುಹಿಸಿ ಕ್ಷೇತ್ರದಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ. ಜತೆಗೆ ಹಿರಿಯ ಸಚಿವನಾಗಿದ್ದರೂ ಯಾತ್ರೆಯ ನಾಯ​ಕ​ತ್ವ​ವನ್ನು ಬೇರೆ (ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈ​ಶ್ವ​ರ​ಪ್ಪ​) ಅವರಿಗೆ ವಹಿಸಲಾಗಿದೆ ಎಂಬ ವಿಚಾ​ರ​ವನ್ನು ಮುಂದಿಟ್ಟು​ಕೊಂಡು ಸೋಮಣ್ಣ ಅವರು ವರಿ​ಷ್ಠರ ಜತೆಗೆ ಮುನಿ​ಸಿ​ಕೊಂಡಿ​ದ್ದಾರೆ. ಇದೇ ಕಾರ​ಣಕ್ಕೆ ಅವರು ವಿಜಯ ಸಂಕಲ್ಪ ಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ: ನಡ್ಡಾ

ಈ ಅಸಮಾಧಾನದ ಬಗ್ಗೆ ಗೊತ್ತಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಹು ಒತ್ತಾಯದಿಂದ ಸೋಮಣ್ಣ ಅವರನ್ನು ಕರೆದಿದ್ದರು. ಅವರು ಹೊರಡುವುದಕ್ಕೂ ಸಿದ್ಧರಾದರು. ಆದರೆ, ಕೊನೆ ಕ್ಷಣದಲ್ಲಿ ಜಿಲ್ಲೆಗೆ ಸಂಬಂಧಪಡದ ರುದ್ರೇಶ್‌ ಅವರು ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಬಗ್ಗೆ ಗೊತ್ತಾಗಿ ಕೈಬಿಟ್ಟರು ಎಂದು ತಿಳಿದು ಬಂದಿದೆ.

ಸೋಮಣ್ಣ ಜತೆಗೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರೂ ಗೈರಾ​ಗಿ​ರು​ವುದು ಅಚ್ಚರಿ ಮೂಡಿ​ಸಿ​ದೆ. ಅವರ ಗೈರಿಗೆ ಕಾರಣ ತಿಳಿದು ಬಂದಿ​ಲ್ಲ. ಚುನಾವಣೆಯ ಹೊಸ್ತಿಲಲ್ಲಿ ಈ ಬೆಳವಣಿಗೆ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಉಂಟು ಮಾಡಿದೆ.