Asianet Suvarna News Asianet Suvarna News

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಹಾಕಿಕೊಂಡಿರುವ ಬಿಜೆಪಿಯು ಇದು ಈಡೇರಬೇಕಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಒಗ್ಗಟ್ಟಾಗಿ ಹೋಗುವಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. 

Karnataka Assembly Election 2023 BS Yediyurappa and V Somanna should go Together for the Election gvd
Author
First Published Mar 2, 2023, 9:22 PM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಮಾ.02): ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಳೆಯ ಮೈಸೂರು ಭಾಗದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಗುರಿ ಹಾಕಿಕೊಂಡಿರುವ ಬಿಜೆಪಿಯು ಇದು ಈಡೇರಬೇಕಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ವಸತಿ ಸಚಿವ ವಿ.ಸೋಮಣ್ಣ ಒಗ್ಗಟ್ಟಾಗಿ ಹೋಗುವಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ರಾಜ್ಯದ ನಾಲ್ಕು ದಿಕ್ಕಿನಿಂದ ಆರಂಭವಾಗಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಮಾ.1 ರಂದು (ಬುಧವಾರ) ಮಲೆಮಹದೇಶ್ವರ ಬೆಟ್ಟದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಚಾಲನೆ ಸಿಕ್ಕಿದೆ. 

ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಆದರೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಗೈರಾಗಿದ್ದು ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. 14 ತಿಂಗಳ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನಾನಂತರ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸೋಮಣ್ಣ ಅವರು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. 

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ನಂತರ ರಾಯಚೂರು, ಅಲ್ಲಿಂದ ಕೊಡಗಿಗೆ ಸ್ಥಳಾಂತರಿಸಲಾಗಿತ್ತು. ಕೆಲವು ತಿಂಗಳ ನಂತರ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಲಾಯಿತು. ಇನ್ನು ಮುಂದೆ ಎಲ್ಲವೂ ಸರಿ ಹೋಯಿತು ಎನ್ನುವಾಗ ಮತ್ತೆ ಸಮಸ್ಯೆ ಆರಂಭವಾಯಿತು. ಕೆಆರ್‌ಐಡಿಎಲ್‌ ಅಧ್ಯಕ್ಷರಾಗಿರುವ ಎಂ. ರುದ್ರೇಶ್‌ ಸ್ಥಳೀಯರಲ್ಲ. ಅಂದರೆ ರಾಮನಗರದವರು. ಅವರನ್ನು ಚಾಮರಾಜನಗರ ಕ್ಷೇತ್ರದಲ್ಲಿ ಅಭ್ಯರ್ಥಿ ಎಂಬಂತೆ ಬಿಂಬಿಸಿ ಗೊಂದಲ ಮೂಡಿಸಲಾಗುತ್ತಿದೆ. ಇದರ ಹಿಂದೆ ಪ್ರಭಾವಿಗಳು ಇದ್ದಾರೆ ಎಂಬುದು ಸೋಮಣ್ಣ ಅವರ ಗುಮಾನಿ. ಹೀಗಾಗಿ ಅಸಮಾಧಾನಗೊಂಡಿದ್ದರು. ಕಾಂಗ್ರೆಸ್‌ ಸೇರಬಹುದು ಎಂದು ಹೇಳಲಾಗಿತ್ತು. 

ಇದು ಗೊತ್ತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೆಂಗಳೂರಿನಲ್ಲಿ ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ, ಸಮಾಧಾನಪಡಿಸಿದ್ದರು. ಎಲ್ಲವೂ ಸರಿ ಹೋಯಿತು ಎಂಬಂತಿರುವಾಗ ಮತ್ತೆ ವಿಜಯ ಸಂಕಲ್ಪ ಯಾತ್ರೆಯ ಉಸ್ತುವಾರಿಯನ್ನು ತಮ್ಮ ಬದಲಿಗೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ವಹಿಸಿರುವುದು ಸೋಮಣ್ಮ ಅವರ ಕಣ್ಣನ್ನು ಕೆಂಪಗಾಗಿಸಿದೆ. ಮನವೊಲಿಸಲು ವರಿಷ್ಠರು ಎಷ್ಟೇ ಪ್ರಯತ್ನ ಮಾಡಿದರೂ ಯಾತ್ರೆಯ ಚಾಲನೆ ಕಾಲಕ್ಕೆ ಗೈರಾಗಿ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ. ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಬಿಜೆಪಿಗೆ ಸದ್ಯಕ್ಕೆ ಹಾಸನ ಹಾಗೂ ಮಂಡ್ಯದಲ್ಲಿ ತಲಾ ಒಂದು, ಮೈಸೂರಿನಲ್ಲಿ- 3, ಚಾಮರಾಜನಗರದಲ್ಲಿ -2 (ಬಿಎಸ್ಪಿಯಿಂದ ಬಂದಿರುವ ಎನ್‌. ಮಹೇಶ್‌ ಸೇರಿ) ಶಾಸಕರಿದ್ದಾರೆ.

ಬಿಜೆಪಿ ಎಷ್ಟೇ ಪ್ರಯತ್ನ ಮಾಡಿದರೂ ಇದನ್ನು ಹೆಚ್ಚಿಸುವ ಅವಕಾಶ ಇರುವುದು ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ. ಆದರೆ ಅಲ್ಲಿ ಪ್ರತಿ ಚುನಾವಣೆಯಲ್ಲೂ ಗೊಂದಲದಿಂದಾಗಿ ಪಕ್ಷಕ್ಕೆ ಹಿನ್ನೆಡೆಯಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆಯೇ ಪೈಪೋಟಿ. ಹನೂರಿನಲ್ಲಿ ಮಾತ್ರ ತ್ರಿಕೋನ ಹೋರಾಟ ನಡೆಯುತ್ತದೆ. ಹೀಗಿರುವಾಗ ನಾಯಕರಲ್ಲಿ ಗೊಂದಲ ಉಂಟಾದರೆ ಇದರ ಲಾಭ ಕಾಂಗ್ರೆಸ್‌ಗೆ ಆಗುತ್ತದೆ ಎಂಬ ಆತಂಕ ಬಿಜೆಪಿಯಲ್ಲಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಯಡಿಯೂರಪ್ಪ ಪ್ರಭಾವ ಇದ್ದ ಸಂದರ್ಭದಲ್ಲೂ ಹನೂರಿನಲ್ಲಿ ಪಕ್ಷದ ಅಭ್ಯರ್ಥಿ 2008ರಲ್ಲಿ 4100 ಸಾವಿರ ಮತ ಪಡೆದಿದ್ದರು. ಜಿಪಂನಲ್ಲಿ ಖಾತೆ ತೆರೆದಿರಲಿಲ್ಲ. ಸೋಮಣ್ಣ ಚುನಾವಣಾ ಉಸ್ತುವಾರಿ ವಹಿಸಿಕೊಂಡ ಬಳಿಕ 2010 ಜಿಪಂ ಚುನಾವಣೆ ಬಳಿಕ ಜಿಪಂನಲ್ಲಿ ಪ್ರಮುಖ ಪ್ರತಿಪಕ್ಷವಾಯಿತು. ಕಳೆದ ಜಿಪಂನಲ್ಲಿ ಹನೂರು ಕ್ಷೇತ್ರದಲ್ಲೇ 4 ಸ್ಥಾನ ಗಳಿಸಿತು. ಚಾಮರಾಜನಗರ ತಾಪಂನಲ್ಲಿ ಹೆಚ್ಚಿನ ಸ್ದಾನ ಪಡೆದರೂ ಮೀಸಲಾತಿ ಪರಿಣಾಮ ಅಧಿಕಾರ ಕೈತಪ್ಪಿತು. ಬಿಜೆಪಿ ಶಾಸಕರಿರುವ, ಯಡಿಯೂರಪ್ಪ ಪ್ರಭಾವ ದಟ್ಟವಾಗಿರುವ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಒಂದು ಸ್ಥಾನ ಮಾತ್ರ ಪಡೆಯಿತು.

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ಸಹಕಾರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಚಾಮುಲ್‌, ಹಾಪ್‌ ಕಾಮ್ಸ್‌, ಟಿಎಪಿಸಿಎಂಎಸ್‌, ಚಾಮರಾಜನಗರ ಮತ್ತು ಗುಂಡ್ಲುಪೇಟೆ ಎಪಿಎಂಸಿಯಲ್ಲಿ ಅಧಿಕಾರ ಹಿಡಿದಿದೆ. ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ 1200 ಕೋಟಿ ಯೋಜನೆಗೆ ಬಜೆಟ್‌ ನಲ್ಲಿ ಸೇರಿಸಿಲ್ಲ. ಜಿಲ್ಲಾಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ ಮತ್ತು ನನ್ನ ಪ್ರಭಾವ ಕುಗ್ಗಿಸಿ, ಗೊಂದಲ ನಿರ್ಮಾಣ ಮಾಡಲು ರುದ್ರೇಶ್‌ ಕಳುಹಿಸಲಾಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಹೆಸರೇಳಿಕೊಂಡು ಪ್ರಚಾರ ಮಾಡುತ್ತಿದ್ದರೂ ಪಕ್ಷದ ವರಿಷ್ಠರು ಕಡಿವಾಣ ಹಾಕಲು ಮುಂದಾಗಿಲ್ಲ ಎಂದು ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿ ವಿಜಯ ಸಂಕಲ್ಪ ಯಾತ್ರೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios