ದಾವಣಗೆರೆ: ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ರಾಜ್ಯದ ನಾಲ್ಕು ಕಡೆಯಿಂದ ಕೈಗೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮದ ಐತಿಹಾಸಿಕ ಕಾರ್ಯಕ್ರಮ ನಡೆಯುವ ದಾವಣಗೆರೆಯಲ್ಲಿ ಗುರುವಾರ ಹಂದರಗಂಬ ಹಾಗೂ ಭೂಮಿಪೂಜೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್ ನೆರವೇರಿಸಿದರು.
ದಾವಣಗೆರೆ (ಮಾ.17) : ರಾಜ್ಯದ ನಾಲ್ಕು ಕಡೆಯಿಂದ ಕೈಗೊಂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮದ ಐತಿಹಾಸಿಕ ಕಾರ್ಯಕ್ರಮ ನಡೆಯುವ ದಾವಣಗೆರೆಯಲ್ಲಿ ಗುರುವಾರ ಹಂದರಗಂಬ ಹಾಗೂ ಭೂಮಿಪೂಜೆಯನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್(Nalin kumar kateel) ನೆರವೇರಿಸಿದರು.
ನಗರದ ಜಿಎಂಐಟಿ ಕಾಲೇಜು ಬಳಿ ಸುಮಾರು 400 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ವಿಶಾಲ ವೇದಿಕೆ, ಪೆಂಡಾಲ್ ನಿರ್ಮಾಣ ಕಾಮಗಾರಿಗೆ ಶಾಸೊತ್ರೕಕ್ತವಾಗಿ ಹಾಲು-ತುಪ್ಪ ಎರೆದು ನಳಿನ್ ಕುಮಾರ ಕಟೀಲ್ ಪೂಜೆ ನೆರವೇರಿಸಿ ವಿಧ್ಯುಕ್ತವಾಗಿ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ನಳಿನ್ ಕಟೀಲ್, ಬಿಜೆಪಿಗೆ ಅದೃಷ್ಟದ ನೆಲವಾದ ದಾವಣಗೆರೆಯಲ್ಲಿ ಐತಿಹಾಸಿಕ ಸಮಾರಂಭಕ್ಕಾಗಿ ಶುಭ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಇಡೀ ಸಮಾವೇಶವು ನಿರ್ವಿಘ್ನವಾಗಿ ನಡೆಯಲಿ. ದಾವಣಗೆರೆಗೆ ಅತ್ಯಂತ ದೊಡ್ಡ, ಸವಾಲಿನ ಕಾರ್ಯಕ್ರಮ ನೀಡಲಾಗಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್ ಕುಮಾರ್ ಕಟೀಲ್
ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ವೈ.ದೇವೇಂದ್ರಪ್ಪ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ, ಪ್ರೊ.ಎನ್.ಲಿಂಗಣ್ಣ, ಜಿ.ಸೋಮಶೇಖರ ರೆಡ್ಡಿ, ಅರುಣಕುಮಾರ ಪೂಜಾರಿ, ಜಿ.ಎಚ್.ಅಶ್ವತ್ಥ ರೆಡ್ಡಿ, ಆರ್.ಶಂಕರ್, ವಿಪ ಸದಸ್ಯ ಹೇಮಲತಾ ಕೊಪ್ಪಳ, ಕೆ.ಎಸ್.ನವೀನ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಸಂಘದ ರಾಜೇಶ್, ಸೋಮಲಿಂಗಪ್ಪ, ಶಿವಲಿಂಗಪ್ಪ, ಸುಧಾ ಜಯರುದ್ರೇಶ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಟಿ.ಶ್ರೀನಿವಾಸ ದಾಸಕರಿಯಪ್ಪ, ಬಿ.ಎಸ್.ಜಗದೀಶ, ಬಿ.ಪಿ.ಹರೀಶ ಗೌಡ, ಎಂ.ಬಸವರಾಜ ನಾಯ್ಕ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ, ಕೇಶವ ಪ್ರಸಾದ ಇತರರಿದ್ದರು. ಪ್ರಮೀಳಾ ನಲ್ಲೂರು ವಂದೇಮಾತರಂ ಹಾಡಿದರು.
ಸಮಾವೇಶ ಸ್ಥಳದಲ್ಲಿ ನಾಗರಹಾವು ಪ್ರತ್ಯಕ್ಷ
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ(PM Narendra Modi)ಭಾಗವಹಿಸುವ ಮಾ.25ರ ಸಮಾವೇಶದ ಹಂದರಗಂಬ ಪೂಜಾ ಸ್ಥಳದ ಪೆಂಡಾಲ್ ಬಳಿ ಗುರುವಾರ ಬೆಳಿಗ್ಗೆ ದೈತ್ಯ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಸಮಾರಂಭಕ್ಕಾಗಿ ಹಂದರಗಂಬ ಪೂಜೆ ಮಾಡಿದ ಸ್ಥಳಕ್ಕೆ ಕೂಗಳತೆ ದೂರದಲ್ಲಿ ಭೂಮಿಪೂಜೆ ಸಮಾರಂಭಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ವೇದಿಕೆ ಹಿಂಭಾಗದಲ್ಲಿ ಹೊಲದ ನೆಲದ ಬಿರುಕಿನಲ್ಲಿದ್ದ ಹುತ್ತದಿಂದ ಮೈ ತುಂಬಾ ಪೊರೆ ಬಂದಿದ್ದ ದೊಡ್ಡ ಗಾತ್ರದ ನಾಗರಹಾವೊಂದು ಹುತ್ತದೊಳಗೆ ಹೋಗಲು ಪ್ರಯತ್ನಿಸಿ, ವಿಫಲವಾಯಿತು. ಕಡೆಗೆ ಬಿಲದಿಂದ ದೂರ ಸಾಗಿತು. ಸುಮಾರು 400 ಎಕರೆ ಪ್ರದೇಶದ ಪೈಕಿ 40 ಎಕರೆಯಲ್ಲಿ ಪೆಂಡಾಲ್ ಅಳವಡಿಸಲು ನೆಲ ಸಮತಟ್ಟು ಮಾಡಲಾಗುತ್ತಿದೆ. ಅದೇ ನೆಲದಲ್ಲೇ ಹಾವಿನ ಹುತ್ತವೂ ನೆಲಸಮವಾಗಿರುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಪೆಂಡಾಲ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಬರುವ ಕೆಲವೇ ನಿಮಿಷಗಳ ಮೊದಲು ಈ ಘಟನೆ ನಡೆಯಿತು. ಹಾವಿಗೆ ಯಾವುದೇ ರೀತಿಯ ಹಾನಿ ಮಾಡದೇ, ಅದರ ಪಾಡಿಗೆ ಅದು ಹರಿದು ಹೋಗಲು ಪಕ್ಷದ ಮುಖಂಡರು, ಕಾರ್ಯಕರ್ತರು ಅನುವು ಮಾಡಿಕೊಟ್ಟರು.
ಇಂದು ಹೊನ್ನಾಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮನ