Asianet Suvarna News Asianet Suvarna News

ರಾಜ್ಯ ರಾಜಕೀಯಕ್ಕೆ ಬರುವ ಆಸೆ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮಗೆ ನೀಡಿದ್ದ ಕ್ಷೇತ್ರಗಳ ಉಸ್ತುವಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ದಿನಗಳಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ವಾಪಸಾಗುತ್ತಾರೆ, ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ವದಂತಿಯ ನಡುವೆಯೇ ರಾಷ್ಟ್ರೀಯ ಬಿಜೆಪಿಯು ಶೋಭಾ ಕರಂದ್ಲಾಜೆ ಅವರನ್ನು ಕರ್ನಾಟಕ ವಿಧಾನಸಭಾ ಚುನಾವಣೆಯ ನಿರ್ವಹಣಾ ಸಮಿತಿ ಸಂಚಾಲಕಿಯನ್ನಾಗಿ ನೇಮಿಸಿದೆ.

Karnataka Election 2023 Union Minister Shobha Karandlaje Exclusive Interview gvd
Author
First Published May 3, 2023, 6:22 AM IST

ವಿಜಯ್‌ ಮಲಗಿಹಾಳ

ಬೆಂಗಳೂರು (ಮೇ.03): ರಾಜ್ಯ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿ ಸೈ ಎನಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಅವರ ರಾಜಕೀಯ ಜೀವನ ಇನ್ನೇನು ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದಂತೆಯೇ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಸೇರಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರರಾಗುವಂತೆ ಕೆಲಸ ಮಾಡುತ್ತಿದ್ದಾರೆ. 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮಗೆ ನೀಡಿದ್ದ ಕ್ಷೇತ್ರಗಳ ಉಸ್ತುವಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ದಿನಗಳಲ್ಲಿ ಅವರು ರಾಜ್ಯ ರಾಜಕಾರಣಕ್ಕೆ ವಾಪಸಾಗುತ್ತಾರೆ, ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂಬ ವದಂತಿಯ ನಡುವೆಯೇ ರಾಷ್ಟ್ರೀಯ ಬಿಜೆಪಿಯು ಶೋಭಾ ಕರಂದ್ಲಾಜೆ ಅವರನ್ನು ಕರ್ನಾಟಕ ವಿಧಾನಸಭಾ ಚುನಾವಣೆಯ ನಿರ್ವಹಣಾ ಸಮಿತಿ ಸಂಚಾಲಕಿಯನ್ನಾಗಿ ನೇಮಿಸಿದೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದಾಗ...

* ಪ್ರಸಕ್ತ ವಿಧಾನಸಭಾ ಚುನಾವಣೆ ಸಿದ್ಧತೆ ಹೇಗೆ ನಡೆಯುತ್ತಿದೆ?
ಈ ಚುನಾವಣೆ ನಮ್ಮ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಭರ್ಜರಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲ ನಾಯಕರು ಬೇರೆ ಬೇರೆ ಜವಾಬ್ದಾರಿ ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ.

ರಾಮ ಆಯ್ತು, ಈಗ ಕಾಂಗ್ರೆಸ್‌ನಿಂದ ಹನುಮನೂ ಬಂಧಿ: ಪ್ರಧಾನಿ ಮೋದಿ ವಾಗ್ದಾಳಿ

* ನೀವು ರಾಜ್ಯ ರಾಜಕಾರಣಕ್ಕೆ ವಾಪಸ್‌ ಬರುತ್ತೀರಿ ಎಂಬ ವದಂತಿಗಳ ನಡುವೆಯೇ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದೀರಿ? ಈ ಸ್ಥಾನದ ಕೆಲಸ ಏನು?
ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂಬುದು ಕೇವಲ ವದಂತಿ ಅಷ್ಟೇ. ನನಗೆ ಅಂಥ ಯಾವುದೇ ಉದ್ದೇಶ ಅಥವಾ ಆಸೆ ಇಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವಳಾಗಿದ್ದೇನೆ. ಅಲ್ಲಿ ಕಲಿಯುವುದಕ್ಕೆ ಬೇಕಾದಷ್ಟಿದೆ. ನಾನು ಅಲ್ಲಿಯೇ ಆರಾಮವಾಗಿದ್ದೇನೆ. ಇನ್ನು ನಮ್ಮ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ 24 ವಿಭಾಗಗಳಿವೆ. ಅನುಭವಿ ತಂಡಗಳಿವೆ. ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತಿದ್ದೇವೆ. ಎಲ್ಲ ವಿಭಾಗಗಳ ಸಮನ್ವಯ ಕಾಪಾಡಿಕೊಂಡು ಸಮಸ್ಯೆಗಳು ಉದ್ಭವಿಸಿದಾಗ ತಕ್ಷಣ ಬಗೆಹರಿಸುವ ಹೊಣೆ ನಿಭಾಯಿಸುತ್ತಿದ್ದೇನೆ.

* ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತೀರಿ?
ಮುಖ್ಯವಾಗಿ ಡಬಲ್‌ ಎಂಜಿನ್‌ ಸರ್ಕಾರ. ಅಂದರೆ ಕೇಂದ್ರ ಮತ್ತು ರಾಜ್ಯದಲ್ಲಿ ಒಟ್ಟಿಗೆ ಹೋಗುವಂಥ ಪ್ರಧಾನಿ ಮೋದಿ ಅವರ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಅವಕಾಶ ನೀಡಿ ಎಂದು ಜನರ ಬೆಂಬಲ ಕೇಳುತ್ತಿದ್ದೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೇಂದ್ರದಲ್ಲಿ ಮೋದಿ ಅವರ ನೇತೃತ್ವದ ಸರ್ಕಾರ ಸಾಕಷ್ಟುಜನಪರ ಯೋಜನೆಗಳನ್ನು ನೀಡಿದರೂ ಅವುಗಳ ಸದುಪಯೋಗ ಆಗಲಿಲ್ಲ. ಮೋದಿ ಅವರನ್ನು ಪ್ರಧಾನಿಯಾಗಿ ನೋಡುವುದನ್ನು ಬಿಟ್ಟು ಕೇವಲ ಬಿಜೆಪಿ ನಾಯಕ ಎಂಬಂತೆ ಆಗ ಸಿದ್ದರಾಮಯ್ಯ ನೋಡಿದರು. ಇದೇ ರೀತಿ ಅನೇಕ ರಾಜ್ಯಗಳಲ್ಲಿ ಆಗಿದೆ.

* ಡಬಲ್‌ ಎಂಜಿನ್‌ ಸರ್ಕಾರ ಎಂದು ಹೇಳಿದಿರಿ. ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಎಂಜಿನ್‌ ಹಿಂದೆ ಇದ್ದು ತಳ್ಳುತ್ತದೆಯೋ ಅಥವಾ ಮುಂದಿನಿಂದ ಎಳೆದೊಯ್ಯುತ್ತದೆಯೋ?
ಕರ್ನಾಟಕ ಸರ್ಕಾರವನ್ನು ಹಿಂದಿನಿಂದ ಮುಂದೆ ತಳ್ಳುವ ಕೆಲಸವನ್ನು ಮೋದಿ ಸರ್ಕಾರ ಮಾಡಲಿದೆ. ಕರ್ನಾಟಕದ ಎಂಜಿನ್‌ಗೆ ಶಕ್ತಿ ನೀಡುವ ಕೆಲಸವನ್ನು ಮೋದಿ ಮಾಡಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಎತ್ತರದ ಸ್ಥಾನದಲ್ಲಿ ನಿಲ್ಲಲು ಎಲ್ಲ ರಾಜ್ಯಗಳ ಕೊಡುಗೆಯೂ ಇರಬೇಕು ಎಂಬುದೇ ಮೋದಿ ಅವರ ಚಿಂತನೆ. ಈ ಕಾರಣಕ್ಕಾಗಿಯೇ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯತೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

* ಡಬಲ್‌ ಎಂಜಿನ್‌ ಹೆಸರಿನಲ್ಲಿ ಕರ್ನಾಟಕದ ಮೇಲೆ ಸ್ವಾಮ್ಯ ಸಾಧಿಸುವ ಹುನ್ನಾರ ಬಿಜೆಪಿಯಿಂದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ? ಉದಾಹರಣೆಗೆ ನಂದಿನಿ ಮತ್ತು ಅಮುಲ್‌ ವಿವಾದ ಇರಬಹುದು ಅಥವಾ ಹಿಂದಿ ಹೇರಿಕೆ ಇತ್ಯಾದಿ?
ನಮ್ಮ ನಂದಿನಿ ಸಂಸ್ಥೆ ಅಮುಲ್‌ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಬೇಕು. ಇವತ್ತು ಅಮುಲ್‌ ಸಂಸ್ಥೆ ಕೇವಲ ಹಾಲು, ಮೊಸರು ಅಷ್ಟೇ ಅಲ್ಲದೆ ಇತರೆ ಹತ್ತಾರು ಉತ್ಪನ್ನಗಳನ್ನು ತಯಾರಿಸಿ ಅವುಗಳನ್ನು ಮಾರುಕಟ್ಟೆಯಲ್ಲಿ ಬಲಾಢ್ಯವಾಗಿ ಬೆಳೆಸಿದೆ. ಆ ರೀತಿ ಎತ್ತರಕ್ಕೆ ನಂದಿನಿಯೂ ಏರಬೇಕು ಎಂಬ ಮಾತನ್ನು ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಅವರು ಹೇಳಿದ್ದರು. ಅವರು ಎಲ್ಲಿಯೂ ನಂದಿನಿಯನ್ನು ಅಮುಲ್‌ ಜೊತೆ ವಿಲೀನಗೊಳಿಸಬೇಕು ಎಂಬ ಮಾತನ್ನು ಹೇಳಿಲ್ಲ. ಆದರೆ, ಪ್ರತಿಪಕ್ಷಗಳು ಇದನ್ನೇ ವಿವಾದವನ್ನಾಗಿ ಮಾಡಿದವು. ಇನ್ನು ಹಿಂದಿ ಹೇರಿಕೆಯ ವಿಷಯವೂ ಅಷ್ಟೆ. ಬಿಜೆಪಿ ಯಾವತ್ತೂ ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಬೇಕು ಎಂಬ ನಿಲವನ್ನೇ ಹೊಂದಿದೆ. ಯಾವುದೇ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಹಿಂದಿಯನ್ನು ಹೇರುವ ಪ್ರಯತ್ನವನ್ನು ಬಿಜೆಪಿ ಯಾವತ್ತೂ ಪ್ರತಿಪಾದಿಸುವುದಿಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ ಅಷ್ಟೆ.

* ಹಲವು ಸಮೀಕ್ಷೆಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದಿಲ್ಲ ಎಂಬ ಅಂಶ ಹೊರಬಿದ್ದಿದೆಯಲ್ಲ?
ಇಂಥ ಸಮೀಕ್ಷೆಯನ್ನು ನಾವು ಸುಳ್ಳು ಮಾಡುತ್ತೇವೆ. ಕೆಲವು ಸಂಸ್ಥೆಗಳು ಎಲ್ಲೋ ವಿದೇಶದಲ್ಲಿ ಕುಳಿತು ಸಮೀಕ್ಷಾ ವರದಿ ಕಳುಹಿಸುತ್ತವೆ. ಗ್ರೌಂಡ್‌ ರಿಪೋರ್ಚ್‌ ನಮಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿ ಬಹುಮತ ಗಳಿಸುವುದರ ಬಗ್ಗೆ ನಮಗೆ ವಿಶ್ವಾಸವಿದೆ. ಹಿಂದೆ ಎರಡು ಬಾರಿ ಬಹುಮತದಷ್ಟುಸ್ಥಾನ ಗಳಿಸಲು ಸಾಧ್ಯವಾಗದೆ ಗೋಜಲು ಉಂಟಾಗಿತ್ತು. ಮತ್ತೆ ಅಂಥ ಗೋಜಲು ಬೇಡ.

* ಟಿಕೆಟ್‌ ಹಂಚಿಕೆಯಲ್ಲಿ ಪ್ರಯೋಗ ಮಾಡಲು ಹೋಗಿದ್ದರಿಂದ ಒಂದಷ್ಟುಗೊಂದಲ ಉಂಟಾಗಿದೆ. ಇದರಲ್ಲಿ ಯಶಸ್ವಿಯಾಗುವ ನಿರೀಕ್ಷೆ ಇದೆಯೇ?
ಖಂಡಿತಾ ಯಶಸ್ವಿಯಾಗುತ್ತೇವೆ. ಅನುಮಾನವೇ ಬೇಡ. ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಈ ರೀತಿಯ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ. ಇಲ್ಲೂ ಯಶಸ್ವಿಯಾಗುವ ವಿಶ್ವಾಸವಿದೆ. ಹಿರಿಯರು ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕು. ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆಯಬೇಕು. ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಸಹಜವಾಗಿ ಇರುವಂಥದ್ದು. ರಾಜಕಾರಣ ನಿಂತ ನೀರಾಗಬಾರದು. ಹೊಸ ನೀರು ಹರಿಯಬೇಕು. ಹೀಗಾಗಿಯೇ ಈ ಬಾರಿ 75 ಮಂದಿ ಹೊಸಬರಿಗೆ ಟಿಕೆಟ್‌ ನೀಡಲಾಗಿದೆ.

* ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳಬಹುದಿತ್ತಲ್ಲ?
ನೋಡಿ, ನಾವು ಅವರಿಬ್ಬರನ್ನೂ ಉಳಿಸಿಕೊಳ್ಳಲು ಸಾಕಷ್ಟುಪ್ರಯತ್ನ ಮಾಡಿದ್ದೇವೆ. ಇಬ್ಬರಿಗೂ ಎಲ್ಲ ಸ್ಥಾನಮಾನ ನೀಡಿದ್ದೆವು. ಏನೂ ಕಡಮೆ ಮಾಡಿರಲಿಲ್ಲ. ಶೆಟ್ಟರ್‌ ಅವರಿಗೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಪಕ್ಷದ ಕೇಂದ್ರ ನಾಯಕರು ಎಲ್ಲ ರೀತಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಮಾನ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ, ಅವರಿಗೆ ಅದು ಮನವರಿಕೆ ಆಗಲಿಲ್ಲ. ಕೇವಲ ಒಬ್ಬ ಶಾಸಕರಾಗಿಯೇ ಇರಲು ಬಯಸಿದ್ದರು.

* ಶೆಟ್ಟರ್‌ ಸೋಲಿಸಲು ಇಡೀ ಬಿಜೆಪಿಯ ರಾಷ್ಟ್ರ, ರಾಜ್ಯದ ನಾಯಕರು ಟೊಂಕಕಟ್ಟಿನಿಂತಿದ್ದಾರೆ. ಅವರು ಬಿಜೆಪಿ ತೊರೆದಿದ್ದು ಸಮಸ್ಯೆಯೇ ಅಥವಾ ಕಾಂಗ್ರೆಸ್‌ ಸೇರಿದ್ದು ಸಮಸ್ಯೆಯೇ?
ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರೆ ಬೇಸರವಾಗುತ್ತಿರಲಿಲ್ಲ. ಆದರೆ, ಶೆಟ್ಟರ್‌ ನಮ್ಮ ಪ್ರಬಲ ವಿರೋಧಿಯಾದ ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾರೆ. ಯಾರು ನಮಗೆ ಪ್ರತಿನಿತ್ಯ ಅಪಮಾನ ಮಾಡುತ್ತಾರೋ, ಯಾರು ದೇಶದ ವಿರೋಧಿಯಾಗಿ ನಡೆದುಕೊಳ್ಳುತ್ತಾರೋ, ಯಾರು ಅಲ್ಪಸಂಖ್ಯಾತರನ್ನು ಓಲೈಸುವ ಮೂಲಕ ದೇಶದಲ್ಲಿ ಭಯದ ವಾತಾವರಣಕ್ಕೆ ಕಾರಣವಾಗುತ್ತಿದ್ದಾರೋ ಅವರ ಬಳಿ ಶೆಟ್ಟರ್‌ ಹೋಗಿದ್ದು ನಮಗೆ ತೀವ್ರ ಬೇಸರ ಉಂಟು ಮಾಡಿದೆ.

* ರಾಜ್ಯ ಬಿಜೆಪಿಗೆ ಇಷ್ಟೊಂದು ಸಂಖ್ಯೆಯಲ್ಲಿ ನಾಯಕರಿದ್ದರೂ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಇಡೀ ದೇಶದ ವಿವಿಧ ಭಾಗಗಳಿಂದ ನಾಯಕರು ಬಂದಿದ್ದಾರಲ್ಲ?
ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎಲ್ಲ ರಾಷ್ಟ್ರೀಯ ನಾಯಕರು ಅಲ್ಲಿ ಹೋಗಿ ಪ್ರಚಾರ ಮಾಡುತ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ರಾಷ್ಟ್ರದ ಎಲ್ಲ ನಾಯಕರೂ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಅದು ನಮ್ಮ ಪಕ್ಷದ ಶಕ್ತಿ. ಇದರಲ್ಲಿ ಹೊಸದೇನೂ ಇಲ್ಲ. ಅದೇ ರೀತಿ ಉತ್ತರ ಪ್ರದೇಶ, ಗುಜರಾತ್‌ ರಾಜ್ಯಗಳಲ್ಲಿ ಚುನಾವಣೆ ನಡೆದಾಗ ನಮ್ಮ ರಾಜ್ಯದ ನಾಯಕರನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ.

* ಬೇಕಾದರೆ ಬಿಜೆಪಿ ಪ್ರಚಾರಕ್ಕೆ ಅಮೆರಿಕ ಅಧ್ಯಕ್ಷರನ್ನೇ ಕರೆಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ?
ಅವರ ಪಕ್ಷಕ್ಕೆ ಅವರೊಬ್ಬರೇ ಸ್ಟಾರ್‌ ಪ್ರಚಾರಕರು. ಹೀಗಾಗಿ ಅವರು ಆ ರೀತಿಯೇ ಹೇಳಬೇಕು. ಅವರ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯಿಸಲು ಬಯಸುವುದಿಲ್ಲ.

40% ಕಮಿಷನ್‌ನ ಬಿಜೆಪಿಗೆ 40 ಸೀಟು ಮಾತ್ರ ಕೊಡಿ: ರಾಹುಲ್‌ ಗಾಂಧಿ

* ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತದೆ ಎಂದು ನೀವು ಬಿಜೆಪಿಯವರು ಆರೋಪಿಸುತ್ತಿದ್ದೀರಿ. ಆದರೆ, ನಿಮ್ಮದೇ ಸರ್ಕಾರದ ವಿರುದ್ಧ ಶೇ.40ರಷ್ಟು ಭ್ರಷ್ಟಾಚಾರ ಸೇರಿದಂತೆ ಸಾಕಷ್ಟುಆಪಾದನೆಗಳು ಕೇಳಿಬಂದಿವೆಯಲ್ಲ?
ನಮ್ಮ ಮೇಲೆ ಆಪಾದನೆ ಹೊರಿಸಿದವರು ಯಾರು? ಈ ಕಾಂಗ್ರೆಸ್‌ನವರು. ಕೆಲವೇ ಕೆಲವು ಗುತ್ತಿಗೆದಾರರನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದ ಆರೋಪ ಹೊರಿಸಿದರು. ಕಾಂಗ್ರೆಸ್‌ನವರು ನಿಜವಾಗಿಯೂ ಭ್ರಷ್ಟಾಚಾರದ ಬಗ್ಗೆ ಕಾಳಜಿ ಹೊಂದಿದ್ದರೆ ಲೋಕಾಯುಕ್ತ ಮುಚ್ಚಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿದ್ದು ಯಾಕೆ ಎಂಬುದನ್ನು ವಿವರಿಸಬೇಕು. ಆಗ ಲೋಕಾಯುಕ್ತ ಸಂಸ್ಥೆ ಇದ್ದಿದ್ದರೆ ಕಾಂಗ್ರೆಸ್‌ನ ಅನೇಕರು ಜೈಲುಪಾಲಾಗುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios