ರಾಮ ಆಯ್ತು, ಈಗ ಕಾಂಗ್ರೆಸ್‌ನಿಂದ ಹನುಮನೂ ಬಂಧಿ: ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸ್ ಈ ಹಿಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ಬಂಧಿಸಲು ಯತ್ನಿಸಿತ್ತು. ಈಗ ಶ್ರೀರಾಮನ ಪರಮಭಕ್ತ ಹನುಮನನ್ನೂ ‘ಬಂಧಿ’ಸುವ ಸಂಕಲ್ಪ ಮಾಡಿದೆ.
ಹೊಸಪೇಟೆ (ಮೇ.03): ‘ಕಾಂಗ್ರೆಸ್ ಈ ಹಿಂದೆ ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನನ್ನು ಬಂಧಿಸಲು ಯತ್ನಿಸಿತ್ತು. ಈಗ ಶ್ರೀರಾಮನ ಪರಮ ಭಕ್ತ ಹನುಮನನ್ನೂ ‘ಬಂಧಿ’ಸುವ ಸಂಕಲ್ಪ ಮಾಡಿದೆ. ನಾನಿಂದು ಹನುಮನಿಗೆ ನಮನ ಸಲ್ಲಿಸಲು ಹನುಮನ ಈ ಪುಣ್ಯ ಭೂಮಿಗೆ ಬಂದಿದ್ದು, ಇದು ನನ್ನ ಸೌಭಾಗ್ಯ ಎಂದುಕೊಂಡಿದ್ದೇನೆ. ವಿಪರ್ಯಾಸದ ಸಂಗತಿಯೆಂದರೆ ಈ ಸಮಯದಲ್ಲಿಯೇ ಕಾಂಗ್ರೆಸ್ ಹನುಮನಿಗೆ ಜೈಕಾರ ಹಾಕುವವರನ್ನು ‘ಬಂಧಿ’ಸಲು ಹೊರಟಿದೆ. ಮುಂದೆ ಇದರ ಪರಿಣಾಮವನ್ನು ಅವರು ಎದುರಿಸಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಕ್ಷ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸಿರುವ ಮೋದಿ, ಮಂಗಳವಾರ ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಹೊಸಪೇಟೆ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಬಳಿಕ, ಕಲಬುರಗಿಯಲ್ಲಿ ಬೃಹತ್ ರೋಡ್ ಶೋ ನಡೆಸಿ, ಬಿಜೆಪಿ ಪರ ಮತಯಾಚಿಸಿದರು. ಈ ವೇಳೆ ಹೊಸಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಪರ ಪ್ರಚಾರ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮೋದಿ ಸರ್ಪವಾದ್ರೆ ಡೇಂಜರ್ರೇ, ಅವರದು ಸಂತೆ ಭಾಷಣ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ನಿಷೇಧ ಭರವಸೆಯನ್ನು ಪ್ರಸ್ತಾಪಿಸಿದ ಮೋದಿ, ‘ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಿದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಬಜರಂಗಿ’ಯನ್ನು ಬಂಧಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಈ ಹಿಂದೆ ಪ್ರಭು ಶ್ರೀರಾಮ ಚಂದ್ರನನ್ನು ಬಂಧನದಲ್ಲಿಡಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಈಗ ಶ್ರೀರಾಮನ ಭಕ್ತ ಹನುಮನನ್ನು ‘ಬಂಧಿ’ಸುವ ಸಂಕಲ್ಪ ಮಾಡಿದೆ. ‘ಜೈ ಬಜರಂಗ ಬಲಿ’ ಎಂದು ಘೋಷಣೆ ಕೂಗುವವರನ್ನು ಬಂಧಿಸಲು ಹೊರಟಿದೆ.
ಬಿಜೆಪಿಗೆ ಸಹಕರಿಸಿದರೆ ಮುಂದಿನ ಪ್ರಧಾನಿಯೂ ಮೋದಿ: ಅಮಿತ್ ಶಾ
ಕಾಂಗ್ರೆಸ್ ಮುಂದೆ ಇದರ ಪರಿಣಾಮವನ್ನು ಎದುರಿಸಲಿದೆ. ನಾನು ಹನುಮಂತನ ಪುಣ್ಯ ಭೂಮಿಗೆ ನನ್ನ ನಮನ ಸಲ್ಲಿಸಲು ಬಂದಿರುವ ಈ ಸಮಯದಲ್ಲಿಯೇ ಕಾಂಗ್ರೆಸ್ ಹನುಮನಿಗೆ ಜೈಕಾರ ಹಾಕುವವರನ್ನು ಬಂಧಿಸುವ ಮಾತನ್ನಾಡಿದೆ. ಇದೆಂತಂಹ ವಿಪರ್ಯಾಸ’ ಎಂದು ವಿಷಾದಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.