ಸುಳ್ಳು ಗ್ಯಾರಂಟಿ, ಓಲೈಕೆಯೇ ‘ಕೈ’ ನೀತಿ, ಕಾಂಗ್ರೆಸ್ಸಿನ ಭರವಸೆಗಳು ಹಾಸ್ಯಾಸ್ಪದ: ರಾಜೀವ್‌ ಚಂದ್ರಶೇಖರ್‌

ಮೋದಿಯವರು ಹೇಳುವಂತೆ ಉತ್ತಮ ಕೆಲಸ ಹಾಗೂ ಸಾರ್ವಜನಿಕ ಸೇವೆ ನಮ್ಮ ಮುಖ್ಯ ಉದ್ದೇಶ. ಮೋದಿ ತಮ್ಮ ಕಾರ್ಯವೈಖರಿ ಹಾಗೂ ಕೊಟ್ಟಮಾತನ್ನು ಉಳಿಸಿಕೊಂಡಿರುವುದನ್ನು ಕಳೆದ 9 ವರ್ಷಗಳಿಂದ ದೇಶದ ಜನ ನೋಡಿದ್ದಾರೆ. 

Karnataka Election 2023 Union Minister Rajeev Chandrasekhar Exclusive Interview gvd

ಸಂದರ್ಶನ: ರಾಜೀವ್‌ ಚಂದ್ರಶೇಖರ್‌, ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ

ಬೆಂಗಳೂರು (ಮೇ.06): ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಕರ್ನಾಟಕ ಮೂಲದ ರಾಜ್ಯಸಭೆ ಸದಸ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ರಾಜೀವ್‌ ಚಂದ್ರಶೇಖರ್‌ ಪ್ರಸಕ್ತ ಚುನಾವಣೆಯ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅವರು ಈ ಸಲದ ಚುನಾವಣೆಯ ಕುರಿತು ತಮ್ಮ ಅನಿಸಿಕೆಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ರಾಜ್ಯ ಚುನಾವಣೆ ಬಗ್ಗೆ ನಿಮ್ಮ ಅನಿಸಿಕೆ ಏನು, ಯಾರು ಗೆಲ್ಲಬಹುದು?
ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಐತಿಹಾಸಿಕ ಗೆಲುವಿನತ್ತ ದಾಪುಗಾಲಿಡುತ್ತಿದೆ. ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ‘ಈ ಬಾರಿ ನಿರ್ಧಾರ, ಬಹುಮತ ಬಿಜೆಪಿ ಸರ್ಕಾರ’ ಎನ್ನುವ ಕರೆಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವ ಸಂಪೂರ್ಣ ವಿಶ್ವಾಸವಿದೆ. ನಮ್ಮ ಪ್ರಚಾರವು ನೇರವಾಗಿ ಮತದಾರರ ಮಟ್ಟದಲ್ಲಿ, ಮಾಧ್ಯಮ ಹಾಗೂ ಸಾಮಾಜಿಕ ತಾಣಗಳಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ರಾಜ್ಯಾದ್ಯಂತ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ನಾನು 2018ರ ಚುನಾವಣೆಯಲ್ಲೂ ಕೆಲಸ ಮಾಡಿದ್ದೆ. ಈ ಬಾರಿಯೂ ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಸೇರಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಕರ್ನಾಟಕದ ಸಮಗ್ರಾಭಿವೃದ್ಧಿಗೆ ನಮ್ಮ ಪಕ್ಷದ ಪರಿಶ್ರಮ ಮುಂದುವರಿಯಲಿದೆ ಎನ್ನುವುದನ್ನು ನಿಸ್ಸಂದೇಹವಾಗಿ ಹೇಳಬಲ್ಲೆ.

ರಾಜ್ಯ ರಾಜಕೀಯಕ್ಕೆ ಬರುವ ಆಸೆ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

* ಬಿಜೆಪಿಯ ಪ್ರಚಾರದ ಆಯಾಮಗಳೇನು? ಕರ್ನಾಟಕದ ಮತದಾರರು ಆಡಳಿತದಲ್ಲಿರುವ ಪಕ್ಷವನ್ನೇ ಮುಂದುವರಿಸುವುದು ತೀರಾ ಅಪರೂಪ.
ಮೋದಿಯವರು ಹೇಳುವಂತೆ ಉತ್ತಮ ಕೆಲಸ ಹಾಗೂ ಸಾರ್ವಜನಿಕ ಸೇವೆ ನಮ್ಮ ಮುಖ್ಯ ಉದ್ದೇಶ. ಮೋದಿ ತಮ್ಮ ಕಾರ್ಯವೈಖರಿ ಹಾಗೂ ಕೊಟ್ಟಮಾತನ್ನು ಉಳಿಸಿಕೊಂಡಿರುವುದನ್ನು ಕಳೆದ 9 ವರ್ಷಗಳಿಂದ ದೇಶದ ಜನ ನೋಡಿದ್ದಾರೆ. ಕಳೆದ 3 ವರ್ಷದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಬಗ್ಗೆಯೂ ಜನರಿಗೆ ಖುಷಿ ಇದೆ. ಇಂದು ಕರ್ನಾಟಕ ಹಾಗೂ ಇಡೀ ಭಾರತದಲ್ಲಿ, ಜನರಿಗೆ ತಾವು ನಂಬಿಕೆ ಇಡಬಹುದಾಂತಹ, ತಮ್ಮ ಉಜ್ವಲ ಭವಿಷ್ಯಕ್ಕೆ ನೆರವಾಗುವಂತಹ ನಾಯಕರು ಹಾಗೂ ಸರ್ಕಾರಗಳು ಬೇಕಿವೆ. ಕಳೆದ ಮೂರುವರೆ ವರ್ಷದಲ್ಲಿ ನಮ್ಮ ಕೆಲಸ, ಭ್ರಷ್ಟಾಚಾರದ ವಿರುದ್ಧ ನಮ್ಮ ನಿರಂತರ ಹೋರಾಟದ ರಿಪೋರ್ಚ್‌ ಕಾರ್ಡ್‌ ಮತದಾರರ ಮುಂದಿದೆ. ಆಡಳಿತ ಪರ ಅಲೆ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ ಅವರು ಈ ಎಲ್ಲಾ ಗುಣಗಳ ಪ್ರತಿನಿಧಿಯಾಗಿದ್ದು, ನಮ್ಮೆಲ್ಲರನ್ನು ಮುನ್ನಡೆಸುತ್ತಿದ್ದಾರೆ. ಇನ್ನು, ಕರ್ನಾಟಕದ ಮತದಾರರು ಆಡಳಿತದಲ್ಲಿರುವ ಪಕ್ಷಗಳನ್ನು ಮುಂದುವರಿಸುವುದು ತೀರಾ ಅಪರೂಪ ಎನ್ನುವುದರ ಬಗ್ಗೆ ಹೇಳುವುದಾದರೆ, ಕಳೆದ 65 ವರ್ಷದಲ್ಲಿ ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಅಥವಾ ಎರಡೂ ಪಕ್ಷಗಳು ಒಟ್ಟಿಗೆ ರಾಜ್ಯವನ್ನು ಆಳಿವೆ. ಈ ಎರಡೂ ಪಕ್ಷಗಳು ತಮ್ಮನ್ನು ಮುಂದುವರಿಸುವಂತಹ ಯಾವುದೇ ಸಾಧನೆ ಮಾಡಿಲ್ಲ. ಮೊದಲೆಲ್ಲಾ ಜನರಿಗೆ ಆಯ್ಕೆಗಳೇ ಇರಲಿಲ್ಲ. ಆದರೆ ಈಗ ಮೋದಿ ಹಾಗೂ ಬಿಜೆಪಿ ಇದೆ.

* ಕಾಂಗ್ರೆಸ್‌ ಪಕ್ಷವೂ ಪ್ರಬಲವಾದ ಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?
ಕಾಂಗ್ರೆಸ್‌ ಪಕ್ಷದಲ್ಲೂ ಹಲವು ಜನಪ್ರಿಯ ನಾಯಕರಿದ್ದಾರೆ. ಆದರೆ ಕರ್ನಾಟಕ ಅಥವಾ ಭಾರತದ ಭವಿಷ್ಯದ ದೃಷ್ಟಿಯಿಂದ ನೋಡಿದಾಗ ಕಾಂಗ್ರೆಸ್‌ಗೆ ಹೆಚ್ಚು ಮಹತ್ವವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅವರ ರಾಜಕೀಯವು 65 ವರ್ಷಗಳ ಹಿಂದೆ ಹೇಗಿತ್ತೋ, ಈಗಲೂ ಹಾಗೇ ಇದೆ. 70, 80ರ ದಶಕದ ರಾಜಕೀಯವನ್ನೇ ಈಗಲೂ ಮಾಡುತ್ತಿದ್ದಾರೆ. ಸುಳ್ಳು, ನಕಲಿ ಗ್ಯಾರಂಟಿಗಳು, ಒಲೈಕೆ ಮಾಡುವುದೇ ಉತ್ತಮ ತಂತ್ರ ಎಂದು ಯಾರೋ ಅವರಿಗೆ ಸಲಹೆ ನೀಡಿದ್ದಾರೆ ಅನಿಸುತ್ತದೆ. ಅವರು ಅದನ್ನೇ ಮಾಡುತ್ತಿದ್ದಾರೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವು ಪ್ರತಿನಿತ್ಯ ಬರೀ ಸುಳ್ಳಿನ ಸುರಿಮಳೆ ಸುರಿಸಿ ಮತದಾರರನ್ನು ಸೆಳೆಯಬಹುದು ಅಂದುಕೊಳ್ಳುತ್ತಿದೆ ಎನ್ನುವುದನ್ನು ನೋಡಿ ಅಚ್ಚರಿಯಾಗುತ್ತಿದೆ. ಅವರ ಸುಳ್ಳಗಳ ಪಟ್ಟಿದೊಡ್ಡದಿದೆ. ರಾಹುಲ್‌, ಡಿಕೆಶಿ ಹಾಗೂ ಸಿದ್ದರಾಮಯ್ಯ ಸೇರಿ ಎಲ್ಲರೂ ಈ ಸುಳ್ಳುಗಳನ್ನೇ ಬಳಸಿಕೊಳ್ಳಲು ಯೋಜನೆ ಹಾಕಿದ್ದಾರೆ. ಅವು ಹಾಸ್ಯಾಸ್ಪದ ಹಾಗೂ ನಾಚಿಕೆಯಿಲ್ಲದ ಭರವಸೆಗಳು. ಕರ್ನಾಟದ ಬುದ್ಧಿವಂತ ಮತದಾರರ ಮುಂದೆ ಇವೆಲ್ಲಾ ನಡೆಯುವುದಿಲ್ಲ. ಇವುಗಳ ಜೊತೆಗೆ ಕಾಂಗ್ರೆಸ್‌ನ ಪ್ರಚಾರ ತಂತ್ರವು ಇನ್ನೆರಡು ಅಂಶಗಳನ್ನು ಹೊಂದಿದೆ. ಸುಳ್ಳು ಗ್ಯಾರಂಟಿಗಳು ಹಾಗೂ ಓಲೈಕೆ. ಎರಡೂ ನೆಲಕಚ್ಚಲಿವೆ. ಏಕೆಂದರೆ ಇದು ಕಾಂಗ್ರೆಸ್‌ನ ಕುತಂತ್ರ ಕೆಲಸ ಮಾಡುತ್ತಿದ್ದ ಹಳೆಯ ಕರ್ನಾಟಕವಲ್ಲ, ಬದಲಿಗೆ ಕರ್ನಾಟಕ 2023.

* ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಹಾಗೂ ಬಿಜೆಪಿ ಸರ್ಕಾರದ ಹಲವು ನಿರ್ಧಾರಗಳನ್ನು ವಾಪಸ್‌ ಪಡೆಯುವುದಾಗಿ ಹೇಳಿದೆಯೆಲ್ಲ?
ಕಾಂಗ್ರೆಸ್‌ ಪಕ್ಷಕ್ಕೆ ಬಹಳ ಚೆನ್ನಾಗಿ ಗೊತ್ತಿದೆ, ಈ ರಾಜ್ಯದ ಜನ ಅವರನ್ನು ನಂಬುವುದಿಲ್ಲ ಹಾಗೂ ಸರ್ಕಾರ ರಚಿಸಲು ಬಿಡುವುದಿಲ್ಲ ಎಂದು. ಹೀಗಾಗಿ, ಅವರ ಪ್ರಣಾಳಿಕೆ ಅರ್ಥಹೀನವಾಗಿದೆ. ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎನ್ನುವುದನ್ನು ನೀವೇ ನೋಡುತ್ತಿದ್ದೀರಿ. ಅವರ ಪ್ರಣಾಳಿಕೆಯು ಪಕ್ಷದ ರಾಜಕೀಯ ಆಲೋಚನೆಗಳ ಒಳನೋಟವನ್ನು ಪ್ರದರ್ಶಿಸುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಕಾಂಗ್ರೆಸ್‌ಗೆ ರಾಜಕೀಯ ಎನ್ನುವುದು ಒಂದು ಆಟವಿದ್ದ ಹಾಗೆ. ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಲು ಕಾಂಗ್ರೆಸ್‌ ಪಕ್ಷ ಸಿದ್ಧವಿದೆ. ಕುರ್ಚಿಗಾಗಿ ಏನು ಬೇಕಿದ್ದರೂ ಹೇಳಿ, ಪ್ರಮಾಣ ಮಾಡುತ್ತಾರೆ. ನಾನು ಈಗಾಗಲೇ ಹಲವು ಬಾರಿ ಈ ಮಾತನ್ನು ಹೇಳಿದ್ದೇನೆ. ಕಾಂಗ್ರೆಸ್‌ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ, ಅದು ರಾಜಕೀಯ ಪಕ್ಷದ ಮುಖವಾಡದ ಹಿಂದಿರುವ ವೈಯಕ್ತಿಕ ಹಿತಾಸಕ್ತಿಗಳ ಸಂಗ್ರಹ.

ಅಮಿತ್‌ ಶಾ ಅವರು ಕಾಂಗ್ರೆಸ್‌ಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ- ರಿವರ್ಸ್‌ ಗೇರ್‌ ಪಾರ್ಟಿ. ಆ ಪಕ್ಷಕ್ಕೆ ಹಣ ಹಾಗೂ ತನ್ನ ಮತಬ್ಯಾಂಕ್‌ಗಳಾದ ಪಿಎಫ್‌ಐ ಹಾಗೂ ಎಸ್‌ಡಿಪಿಐಗಳನ್ನು ಹೊರತುಪಡಿಸಿ ಇನ್ಯಾವುದರ ಬಗ್ಗೆಯೂ ಕಾಳಜಿ ಇಲ್ಲ. ಬಜರಂಗ ದಳವನ್ನು ನಿಷೇಧ ಮಾಡುವುದಾಗಿ ಹೇಳಿರುವುದೂ ಅಷ್ಟೇ. ತನ್ನ ಮತಬ್ಯಾಂಕ್‌ ಓಲೈಕೆ ಮಾಡಲು. ಇನ್ನು ಮುಸ್ಲಿಂ ಮೀಸಲು ಮರು ಹಂಚಿಕೆ ಮಾಡುವುದಾಗಿ ಹೇಳಿರುವುದೂ ಅಷ್ಟೇ. ಇದೂ ಓಲೈಕೆ ರಾಜಕಾರಣವಲ್ಲದೇ ಇನೇನೂ ಅಲ್ಲ. ಅವರು ಕ್ರೈಸ್ತರು, ಸಿಖ್‌, ಜೈನ್‌ ಹಾಗೂ ಇನ್ನುಳಿದ ಅಲ್ಪಸಂಖ್ಯಾತರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಜಮ್ಮು-ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತರಿಗೆ ಕಾಂಗ್ರೆಸ್‌ ಪಕ್ಷ ಏನೂ ಮಾಡಲಿಲ್ಲ. ಕಾಂಗ್ರೆಸ್‌ ಒಂದು ವಿಚಿತ್ರ ಪಕ್ಷ. ಯಾವಾಗಲೂ ಬೂಟಾಟಿಕೆ ಹಾಗೂ ಕೊಟ್ಟಮಾತು ತಪ್ಪುತ್ತದೆ. ಯಾವಾಗಲೂ ರಾಜಕೀಯ ಹಾಗೂ ಅವಕಾಶವಾದಿತನವಷ್ಟೇ. 

ಜನ ಹಾಗೂ ಅಭಿವೃದ್ಧಿ ಅವರಿಗೆ ಬೇಕಿಲ್ಲ. ಉದಾಹರಣೆಗೆ, ಕಾಂಗ್ರೆಸ್‌ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಹಿಂಪಡೆಯುವುದಾಗಿ ಹೇಳುತ್ತಿದೆ. ಎನ್‌ಇಪಿ ಭಾರತದ ಯುವ ಜನಾಂಗಕ್ಕೆ ಸ್ವಾತಂತ್ರ್ಯದ ಬಳಿಕ ಸಿಕ್ಕಿರುವ ಅತಿದೊಡ್ಡ ಅವಕಾಶ. ಇದು ಯುವ ಕನ್ನಡಿಗರಿಗೆ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಸಿಗುವ ಎಲ್ಲಾ ಅವಕಾಶಗಳಿಗೆ ತಯಾರಿ ನಡೆಸಲು ನೆರವಾಗಲಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಪ್ರತಿ 4ರಲ್ಲಿ 3 ಭಾರತೀಯ ಅಥವಾ ಕನ್ನಡಿಗ ಕೌಶಲ್ಯರಹಿತನಾಗಿದ್ದ. ಆದರೆ ಎನ್‌ಇಪಿ ಯಾವುದೇ ಯುವಕ ಕೌಶಲ್ಯಗಳಿಲ್ಲದೆ ಶಾಲೆ ಬಿಡುವುದನ್ನು ತಪ್ಪಿಸುತ್ತದೆ. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ಒದಗಿಸಲಿದೆ. ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ ಒಲೈಕೆ ಮಾಡುತ್ತಾ, ಕನ್ನಡಿಗರ ಉಜ್ವಲ ಭವಿಷ್ಯವನ್ನು ಕಿತ್ತುಕೊಳ್ಳಲು ಯೋಜನೆ ರೂಪಿಸಿದೆ. ಅದೊಂದು ವಿನಾಶಕಾರಿ ಪಕ್ಷ. ಕಾಂಗ್ರೆಸ್‌ನ ರಾಜಕೀಯಕ್ಕೆ ಹೋಲಿಸಿದರೆ ನಮ್ಮ ರಾಜಕೀಯ ಸಂಪೂರ್ಣ ತದ್ವಿರುದ್ಧ. ‘ಸಬ್‌ಕಾ ಸಾಥ್‌, ಸಬ್‌ಕಾ ವಿಸಾಸ್‌’ ನಮ್ಮ ಪ್ರಧಾನಿಯವರ ಆಡಳಿತದ ಮೂಲ ಉದ್ದೇಶ. ಯಾವುದೇ ಜಾತಿ, ಧರ್ಮ, ಲಿಂಗ ಹಾಗೂ ಪ್ರದೇಶದ ಭೇದವಿಲ್ಲದೆ ಸರ್ವರಿಗೂ ಸಮಾನ ಅವಕಾಶಗಳು ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ. ನಮ್ಮ ರಾಜಕೀಯವು ಕೆಲಸ ಹಾಗೂ ಡಬಲ್‌ ಅಭಿವೃದ್ಧಿಯ ಕಡೆಗೆ ಮುಖ ಮಾಡಿದೆ.

* ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ- ನಿಮ್ಮ ಅನಿಸಿಕೆ ಏನು?
ನಮ್ಮ ಪ್ರಧಾನ ಮಂತ್ರಿಗಳನ್ನು ನಮ್ಮ ಊರು, ಬೆಂಗಳೂರಿಗೆ ಸ್ವಾಗತಿಸಲು ನಮಗೆ ಬಹಳ ಹೆಮ್ಮೆಯಾಗುತ್ತಿದೆ. ಅವರು ಇಲ್ಲಿ 2 ದಿನಗಳ ಕಾಲ ಇರಲಿದ್ದು, ನಮ್ಮೆಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಅವರಿಗೆ ಬೆಂಗಳೂರು ಹಾಗೂ ಬೆಂಗಳೂರಿಗರನ್ನು ಕಂಡರೆ ಅಪಾರ ಪ್ರೀತಿ. ಬೆಂಗಳೂರು ಒಂದು ಜಾಗತಿಕ ನಗರ. ಈ ದೇಶದ ಭವಿಷ್ಯವನ್ನು ಅದು ಪ್ರತಿನಿಧಿಸುತ್ತದೆ. ಕನ್ನಡಿಗರ ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಂಗಳೂರು ಸಾರುತ್ತದೆ. ಬೆಂಗಳೂರನ್ನು ಆಧುನಿಕ ಜಾಗತಿಕ ನಗರವನ್ನಾಗಿ ಅಭಿವೃದ್ಧಿ ಮಾಡಬೇಕು ಎನ್ನುವ ಮಹತ್ಷಾಕಾಂಕ್ಷೆಯನ್ನು ಮೋದಿ ಹೊಂದಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ, ಕೇವಲ ತಮ್ಮ ಸ್ವಹಿತಾಸಕ್ತಿಗಾಗಿ ನಗರವನ್ನು ಹಾಳುಗೆಡವಿದ ಕಾಂಗ್ರೆಸ್‌ ಶಾಸಕರನ್ನು ಕಿತ್ತೊಗೆಯಬೇಕಿದೆ. ಪ್ರಧಾನಿ ಅವರ 2 ದಿನಗಳ ರೋಡ್‌ ಶೋವನ್ನು 10 ಲಕ್ಷಕ್ಕೂ ಹೆಚ್ಚಿನ ಜನರು ವೀಕ್ಷಿಸಲಿದ್ದಾರೆ.

* ಈ ಚುನಾವಣೆಯಲ್ಲಿ ಜೆಡಿಎಸ್‌ ಪ್ರಮುಖ ಪಾತ್ರ ವಹಿಸಲಿದೆಯೇ?
ಅಸ್ಥಿರತೆ ಹಾಗೂ ಸಮಿಶ್ರ ಸರ್ಕಾರಗಳನ್ನು ನೋಡಿ ನೋಡಿ ರಾಜ್ಯದ ಬೇಸತ್ತಿದ್ದಾರೆ. ಜನ ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರದ ಕೆಲಸಗಳನ್ನು ನೋಡಿದ್ದು, ಮುಂದಿನ 5 ವರ್ಷವೂ ಬಿಜೆಪಿಯೇ ಆಡಳಿತದಲ್ಲಿ ಇರಬೇಕು, ಸ್ಥಿರ ಹಾಗೂ ಡಬಲ್‌ ವೇಗದಲ್ಲಿ ಅಭಿವೃದ್ಧಿ ಕೆಲಸಗಳು ಆಗಬೇಕು, ಜೀವನ ಗುಣಮಟ್ಟಹೆಚ್ಚಾಗಬೇಕು ಎಂದು ಅಪೇಕ್ಷಿಸುತ್ತಿದ್ದಾರೆ.

ಬಿಜೆಪಿಯದು ಸಿಂಗಲ್‌ ಡ್ರೈವರ್‌ ಡಬಲ್‌ ಎಂಜಿನ್‌ ಸರ್ಕಾರ, ಕರ್ನಾಟಕದಿಂದ ದೇಶಕ್ಕೇ ಮೆಸೇಜ್‌: ಸುಧೀಂದ್ರ ಕುಲಕರ್ಣಿ

* ಖರ್ಗೆ ಹಾಗೂ ಅವರ ಪುತ್ರ ಪ್ರಧಾನಿಯನ್ನು ವೈಯಕ್ತಿಕವಾಗಿ ನಿಂದಿಸಿದ್ದಾರಲ್ಲ?
ಪ್ರಧಾನಿ ಅವರನ್ನು ನಿಂದಿಸುವಷ್ಟುಕೆಳ ಹಂತದ ತಂತ್ರಗಾರಿಕೆಗೆ ಖರ್ಗೆ ಅವರಂಥ ಹಿರಿಯ ರಾಜಕಾರಣಿ ಇಳಿದಿದ್ದು ನೋಡಿ ಆಶ್ಚರ್ಯವಾಗಿದೆ. ಭಾರತೀಯ ರಾಜಕೀಯವನ್ನು ಸ್ವಚ್ಛಗೊಳಿಸಿ, ಮುಂದಿನ ಪೀಳಿಗೆಗಳಿಗೆ ಉತ್ತಮ ರಾಜಕೀಯವನ್ನು ಕಟ್ಟಿಕೊಡಲು ನಮ್ಮ ಪ್ರಧಾನಿ ದೃಢ ಸಂಕಲ್ಪ ಮಾಡಿದ್ದಾರೆ. ಮೋದಿ ಅವರ ಬಲಾಢ್ಯತೆ, ತೀರ್ಮಾನ, ಸಂಕಲ್ಪವನ್ನು ಕಂಡು ಸ್ವಹಿತಾಸಕ್ತಿಯಿಂದ ಕೂಡಿರುವ, ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಭಯ ಶುರುವಾಗಿದೆ. ಮೋದಿ ಅವರನ್ನು ನಿಂದಿಸುವವರ ಪಟ್ಟಿಯಲ್ಲಿ ಕಾಂಗ್ರೆಸ್‌ನ ಕಳ್ಳರಿಂದ ಹಿಡಿದು ಅಕ್ಕಪಕ್ಕದ ಭಯೋತ್ಪಾದಕರೂ ಇದ್ದಾರೆ. ಆದರೆ ಪ್ರಧಾನಿ ಇದ್ಯಾವುದಕ್ಕೂ ಕಿವಿಗೊಡದೆ ಇನ್ನಷ್ಟುಪರಿಶ್ರಮದೊಂದಿಗೆ ಕೆಲಸ ಮಾಡುತ್ತಾರೆ.

* ಬಿಜೆಪಿಯ ಭ್ರಷ್ಟಾಚಾರದ ರೇಟ್‌ ಕಾರ್ಡನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಹಾಗೂ 40% ಕಮಿಷನ್‌ ಬಗ್ಗೆಯೂ ಆರೋಪಿಸುತ್ತಿದೆಯಲ್ಲ?
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದು ಈ ಜಗತ್ತಿನ ಅತಿದೊಡ್ಡ ಜೋಕ್‌. ಕಾಂಗ್ರೆಸ್‌ನವರು ರಾಜಕೀಯ ಭ್ರಷ್ಟಾಚಾರದ ರೂವಾರಿಗಳು. 40% ಕಮಿಷನ್‌, ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಆರೋಪಗಳನ್ನು ಮಾಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ನಾನು ಹೇಳಿದ ಹಾಗೆ, ಕಾಂಗ್ರೆಸ್‌ನ ರಾಜಕೀಯ ಸುಳ್ಳು, ನಕಲಿ ಗ್ಯಾರಂಟಿಗಳು, ಓಲೈಕೆಯ ಹಂತಕ್ಕೆ ಇಳಿದಿದೆ. ಅವರು 65 ವರ್ಷ ಅಧಿಕಾರದಲ್ಲಿ ಇದ್ದರೂ ಜನರ ಸೇವೆ ಮಾಡುವ ಬದಲು ಲೂಟಿ ಹೊಡೆದಿದ್ದಾರೆ. ಅವರು ಜನಸೇವೆ, ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ಇಂತಹ ಸುಳ್ಳುಗಳನ್ನು ಹೇಳಿಕೊಂಡು ಮತದಾರರ ಮುಂದೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನದ್ದು ಹಳತಾದ, ಕುಟಿಲ ರಾಜಕಾರಣ. ಅವರು ಕರ್ನಾಟಕವನ್ನು ರಿವರ್ಸ್‌ ಗೇರ್‌ನಲ್ಲಿ ಹಿಂದಕ್ಕೆ ಕೊಂಡೊಯ್ಯಲು ನೋಡುತ್ತಿದ್ದಾರೆ. ಬಿಜೆಪಿ ಕರ್ನಾಟಕವನ್ನು ಉತ್ತಮ ಭವಿಷ್ಯದ ಕಡೆ ಮುನ್ನಡೆಸಲು ಎದುರು ನೋಡುತ್ತಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios