ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ನಾವು ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಳಗಾವಿ (ಮಾ.06): ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ನಾವು ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ. ಹೇಗೆ ಇರುತ್ತವೆ ಎನ್ನುವುದು ಮುಖ್ಯವಾಗುತ್ತದೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಂಭಾಪುರಿ, ಉಜ್ಜಯಿನಿ, ಕಾಶಿ, ಶ್ರೀಶೈಲ ಸೇರಿದಂತೆ ನಮ್ಮ ಪಂಚ ಪೀಠದ ಶ್ರೀಗಳು ಇಡೀ ದೇಶಕ್ಕೆ ಶಕ್ತಿ ನೀಡುತ್ತಾ ಬಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನಾವು ನೆಮ್ಮದಿಯಾಗಿ ಬದುಕುತ್ತಿದ್ದೇವೆ. ನಾವು ಈ ಧರ್ಮ ಪೀಠಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗಬೇಕು. ಈ ಸಮಾಜಕ್ಕೆ ಈ ಪೀಠಗಳ ಮಾರ್ಗದರ್ಶನ ಅಗತ್ಯವಿದ್ದು, ನಾವು ಈ ಮಠಗಳಿಗೆ ಪ್ರೋತ್ಸಾಹ ನೀಡಬೇಕು. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಹೇಳಿದರು.

ಮನುಷ್ಯನಿಗೆ ಧರ್ಮ, ದೇವರು ಬೇಕು. ಇಲ್ಲದಿದ್ದರೆ ಜೀವನ ಹಾಗೂ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಬದುಕಿಗೆ ಅರ್ಥವೂ ಇರುವುದಿಲ್ಲ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು ಬಣ್ಣ, ಶಿವನಿಗಿಂತ ಶ್ರೇಷ್ಠವಾದ ದೇವರು, ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ. ಧರ್ಮ ಇಂದು ನಮ್ಮನ್ನೆಲ್ಲ ಇಲ್ಲಿ ಸೇರಿಸಿದೆ. ನಾವು ಇಂತಹ ದೇವಾಲಯದಲ್ಲಿ ಕೂತು ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ನಿಮ್ಮ ಭಾಗ್ಯ. ಸಚಿವ ಸಂಪುಟ ಸಭೆ ಇದ್ದರೂ ಅದನ್ನು ಸಂಜೆಗೆ ನಿಗದಿ ಮಾಡಿ ಎಂದು ಹೇಳಿ ಈ ಕಾರ್ಯಕ್ರಮಕ್ಕೆ ಬಂದಿರುವೆ ಎಂದು ಹೇಳಿದರು.

ಅಜ್ಜಯ್ಯನವರ ಪರಮ ಭಕ್ತ

ಪ್ರಭಾಕರ್ ಕೋರೆ ಅವರು ಕೂಡ ರಾಜ್ಯದಲ್ಲಿ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದಾರೆ. ನಾನು ಇಲ್ಲಿಗೆ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಬಂದಿಲ್ಲ. ಶ್ರೀಗಳು ಈ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸ ತಿಳಿದು ಬಂದಿದ್ದೇನೆ. ಅವರು ಹೇಳಿದಂತೆ ನಾನು ವೀರ ಗಂಗಾಧರೇಶ್ವರ ಅಜ್ಜಯ್ಯನವರ ಪರಮ ಭಕ್ತ. ಅವರ ಮಾರ್ಗದರ್ಶನದಲ್ಲಿ ನಾನು ಹೆಜ್ಜೆ ಹಾಕುತ್ತಿದ್ದೇನೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶ ನೀಡಿದ್ದಾರೆ. ನಾವು ಅದೇ ತತ್ವದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಗುರುಗಳನ್ನು ಕಂಡರೆ ಡಿ.ಕೆ.ಶಿವಕುಮಾರ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ಕಂಡರೆ ನಾನು ವೈಯಕ್ತಿಕವಾಗಿ ಇಷ್ಟಪಡುತ್ತೇನೆ. ಡಿ.ಕೆ.ಶಿವಕುಮಾರ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಾರೈಸಿದರು.