ಬಿಜೆಪಿಯದು ಸಿಂಗಲ್‌ ಡ್ರೈವರ್‌ ಡಬಲ್‌ ಎಂಜಿನ್‌ ಸರ್ಕಾರ, ಕರ್ನಾಟಕದಿಂದ ದೇಶಕ್ಕೇ ಮೆಸೇಜ್‌: ಸುಧೀಂದ್ರ ಕುಲಕರ್ಣಿ

ಭಾರತದ ರಾಜಕೀಯ ರಂಗದ ವಿಭಿನ್ನ ವ್ಯಕ್ತಿತ್ವದ ಮುತ್ಸದ್ದಿ ಹಾಗೂ ಅಂಕಣಕಾರ ಸುಧೀಂದ್ರ ಕುಲಕರ್ಣಿ. ಬೆಳಗಾವಿಯ ಅಥಣಿಯಲ್ಲಿ ಜನಿಸಿ ಆರಂಭದಲ್ಲಿ ಕಮ್ಯುನಿಸಂ ಬೆನ್ನು ಬಿದ್ದವರು. ಆದರೆ, ಪಥ ಬದಲಿಸಿ ಬಿಜೆಪಿಯ ಅಂತರಂಗ ಪ್ರವೇಶಿಸಿದ್ದರು.

Karnataka Election 2023 Columnist Sudheendra Kulkarni Exclusive Interview gvd

ಎಸ್‌.ಗಿರೀಶ್‌ಬಾಬು

ಬೆಂಗಳೂರು (ಮೇ.04): ಭಾರತದ ರಾಜಕೀಯ ರಂಗದ ವಿಭಿನ್ನ ವ್ಯಕ್ತಿತ್ವದ ಮುತ್ಸದ್ದಿ ಹಾಗೂ ಅಂಕಣಕಾರ ಸುಧೀಂದ್ರ ಕುಲಕರ್ಣಿ. ಬೆಳಗಾವಿಯ ಅಥಣಿಯಲ್ಲಿ ಜನಿಸಿ ಆರಂಭದಲ್ಲಿ ಕಮ್ಯುನಿಸಂ ಬೆನ್ನು ಬಿದ್ದವರು. ಆದರೆ, ಪಥ ಬದಲಿಸಿ ಬಿಜೆಪಿಯ ಅಂತರಂಗ ಪ್ರವೇಶಿಸಿದ್ದರು. ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಲಾಲ್‌ಕೃಷ್ಣ ಅಡ್ವಾಣಿ ಅವರಂತಹ ದಿಗ್ಗಜರ ಸಾಮೀಪ್ಯ ಹೊಂದಿದ್ದವರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಪ್ರಧಾನಿ ಕಚೇರಿಯ ಕಾರ್ಯಾಚರಣೆಯ ನಿರ್ದೇಶಕರಾಗಿ (ಡೈರೆಕ್ಟರ್‌ ಆಫ್‌ ಆಪರೇಷನ್‌, ಪ್ರೈಮ್‌ ಮಿನಿಸ್ಟ​ರ್‍ಸ್ ಆಫೀಸ್‌) ಕಾರ್ಯನಿರ್ವಹಿಸಿದ್ದವರು. 

ಆನಂತರ ಅಡ್ವಾಣಿ ಅವರ ಆಪ್ತರಾಗಿ ದುಡಿದವರು. 2019ರಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಪರ ನಿಂತವರು. ಹೀಗೆ ಮೂರು ವಿಭಿನ್ನ ರಾಜಕೀಯ ಸಿದ್ಧಾಂತಗಳ ತೆರೆಗಳಲ್ಲಿ ತೇಲಿ ಬಂದಿರುವ ಕುಲಕರ್ಣಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣ ಹೇಗಿದೆ? ಚುನಾವಣೆಯಲ್ಲಿ ಯಾರ ಕೈ ಮೇಲಿದೆ? ಮೋದಿ ಸರ್ಕಾರದ ಅಂತರಂಗದ ಬಯಕೆಯೇನು? ಪ್ರಾದೇಶಿಕ ಪಕ್ಷಗಳು ಹೇಗಿರಬೇಕು ಎಂಬ ವಿಚಾರಗಳ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಒಬ್ಬ ರೌಡಿ: ಎಚ್‌.ಡಿ.ಕುಮಾರಸ್ವಾಮಿ

* ಕರ್ನಾಟಕದ ರಾಜಕೀಯ ವಾತಾವರಣ ಹೇಗಿದೆ?
ನಾನು ಕರ್ನಾಟಕದವನು. ನಾನು ಶಾಲೆಯಲ್ಲಿದ್ದಾಗಿನ ಕರ್ನಾಟಕಕ್ಕೂ ಈಗಿನ ಕರ್ನಾಟಕಕ್ಕೂ ತುಂಬಾ ವ್ಯತ್ಯಾಸವಿದೆ. ಈಗ ಕರ್ನಾಟಕ ಒಂದು ಆರ್ಥಿಕ ಸಮೃದ್ಧ ರಾಜ್ಯವಾಗಿದೆ. ಆದರೆ, ರಾಜಕಾರಣದ ವಿಷಯದಲ್ಲಿ ಇಂತಹ ಅಭಿವೃದ್ಧಿ ಆಗಿಲ್ಲ. ಕರುನಾಡು ಇಂದು ದುಡ್ಡು, ಜಾತಿ ಹಾಗೂ ಕೋಮುವಾದದ ರಾಜಕಾರಣದ ತಾಣವಾಗಿದೆ. ವಿಷಾದದ ವಿಚಾರವೆಂದರೆ ಯಾವ ಪಕ್ಷವು ತಮ್ಮದು ಪಾರ್ಟಿ ವಿತ್‌ ಡಿಫರೆನ್ಸ್‌ (ಭಿನ್ನ ರಾಜಕೀಯ ಪಕ್ಷ) ಎಂದು ಹೇಳಿಕೊಳ್ಳುತ್ತಿತ್ತೋ ಅದು ಈಗ ಇದೇ ಕು-ನೀತಿಗೆ ಅನುವು ಹಾಗೂ ಪ್ರೋತ್ಸಾಹ ನೀಡುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಡು ಭ್ರಷ್ಟಾಚಾರವಂತೂ ಈ ಸಮಾಜಕ್ಕೆ ತಗುಲಿದ ಮಹಾರೋಗ.

* ವಿಧಾನಸಭಾ ಚುನಾವಣೆ ಸಮೀಪಿಸಿದೆ. ಯಾವ ರೀತಿ ಫಲಿತಾಂಶ ಬರಬಹುದು?
ಪ್ರಜಾಪ್ರಭುತ್ವದಲ್ಲಿ ಜನರು ಆಯ್ಕೆ ಮಾಡಿದ ಸರ್ಕಾರ ತಾನು ನೀಡಿದ್ದ ಭರವಸೆ ಈಡೇರಿಸದಿದ್ದರೆ ಹಾಗೂ ತಮ್ಮ ಅಪೇಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸದಿದ್ದರೆ ಅದನ್ನು ಬದಲಿಸುವ ಹಕ್ಕು ಪ್ರಜೆಗಳಿಗೆ ಇದೆ. ಅಂತಹ ಸಂಧಿಕಾಲ ಇದೀಗ ಕರ್ನಾಟಕದಲ್ಲಿ ಬಂದಿದೆ.

* ಅಂದರೆ?
ರಾಜ್ಯ ಬಿಜೆಪಿ ಸರ್ಕಾರ ಜನರ ಅಪೇಕ್ಷೆಗಳನ್ನು ಈಡೇರಿಸಿಲ್ಲ. ಅಲ್ಲದೆ, ಕರ್ನಾಟಕದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ಬೇಕು ಎಂದು ಬಿಜೆಪಿಯವರು ಪದೇ ಪದೇ ಹೇಳುತ್ತಾರೆ. ಈಗ ಡಬಲ್‌ ಎಂಜಿನ್‌ ಸರ್ಕಾರವೇ ಇದೆ. ಹಾಗಿದ್ದರೂ ಈ ಪ್ರಮಾಣದ ಬೆಲೆ ಏರಿಕೆ ಏಕಿದೆ? ಅಡುಗೆ ಅನಿಲ ದುಬಾರಿಯಾಗಿದೆ. ಪೆಟ್ರೋಲ್‌, ಡೀಸೆಲ್‌ ಗಗನ ಮುಟ್ಟಿದೆ. ರುಪಾಯಿ ಅಪಮೌಲ್ಯಗೊಂಡಿದೆ. ಶಿಕ್ಷಣ, ಆರೋಗ್ಯ, ಆಹಾರ ಎಲ್ಲವೂ ದುಬಾರಿಯಾಗಿದೆ. ಬಿಜೆಪಿ ಮುಖಂಡರ 2014ಕ್ಕೂ ಮೊದಲಿನ ಭಾಷಣ ಕೇಳಿದರೆ ಅವರು ಈ ಬೆಲೆ ಏರಿಕೆಯ ಬಗ್ಗೆಯೇ ಮಾತನಾಡುತ್ತಿದ್ದರು. ಗ್ಯಾಸ್‌ ದರ 400 ರು. ಇದ್ದಾಗ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದವರೇ ಇವರು. ಈಗ ಅವರೇ ಅಧಿಕಾರದಲ್ಲಿದ್ದಾರೆ. ಗ್ಯಾಸ್‌ 1200 ರು. ಮುಟ್ಟಿದೆ. ಇವೆಲ್ಲ ಜನರ ಮೇಲೆ ಪರಿಣಾಮ ಬೀರುತ್ತವೆ.

* ಬೆಲೆ ಏರಿಕೆ ಚುನಾವಣೆಯ ಮುಖ್ಯ ವಿಷಯವಾಗುವುದೇ?
ನೋಡಿ, ಬೆಲೆ ಏರಿಕೆ ಶ್ರೀಮಂತರ ಮೇಲೆ ಪರಿಣಾಮ ಬೀರದಿರಬಹುದು. ಹಾಗೆ ನೋಡಿದರೆ ಈ ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತರು ಶ್ರೀಮಂತರು. ಅವರ ಸಂಖ್ಯೆ ಬಹಳ ಕಡಿಮೆಯಿದೆ. ಆದರೆ, ಬಹುಸಂಖ್ಯಾತರು ಸಾಮಾನ್ಯರು, ಮಧ್ಯಮ ವರ್ಗದವರು ಹಾಗೂ ಕಡು ಬಡವರು. ಈ ವರ್ಗಕ್ಕೆ ಬೆಲೆ ಏರಿಕೆ ಭಾರಿ ಪೆಟ್ಟು ಕೊಟ್ಟಿದೆ. ನಿರುದ್ಯೋಗ ವಿಪರೀತ ಕಾಡುತ್ತಿದೆ. ಡಬಲ್‌ ಎಂಜಿನ್‌ ಸರ್ಕಾರ ಜನರ ಯಾವ ಅಪೇಕ್ಷೆಯನ್ನೂ ಈಡೇರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಹುಸಂಖ್ಯಾತರು ಸರ್ಕಾರದ ವಿರುದ್ಧ ಹೋಗುವುದು ಸಹಜ.

* ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಭಾವ?
ಇದು ವಿಧಾನಸಭೆ ಚುನಾವಣೆಯೋ ಅಥವಾ ಎಂಪಿ ಚುನಾವಣೆಯೋ? ಈ ಚುನಾವಣೆಗೆ ಮುಖ್ಯ ವಿಚಾರವಾಗಬೇಕಿರುವುದು ರಾಜ್ಯ ಬಿಜೆಪಿ ಸರ್ಕಾರದ ಸಾಧನೆ. ಅದನ್ನು ಬಿಟ್ಟು ಮೋದಿ ಅವರನ್ನು ಅವಲಂಬಿಸುವುದರ ಅರ್ಥ ರಾಜ್ಯ ಬಿಜೆಪಿಗೆ ತನ್ನ ಸಾಧನೆ ಆಧಾರದ ಮೇಲೆ ಬಹುಮತ ದೊರೆಯುವ ನಂಬಿಕೆ ಇಲ್ಲ ಎಂದೇ ಆಗುತ್ತದೆ.

* ಈ ಚುನಾವಣೆಯಲ್ಲಿ ಲಿಂಗಾಯತ ಫ್ಯಾಕ್ಟರ್‌ ಪ್ರಭಾವ ಬೀರುವುದೇ?
ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣವನ್ನು ನಾವು ಗಮನಿಸಬೇಕು. ದೇಶ ಸ್ವತಂತ್ರಗೊಂಡ ನಂತರದ ಸುದೀರ್ಘ ಕಾಲದವರೆಗೂ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದರೆ, ಆನಂತರ ಕುಸಿತ ಕಂಡಿತು. ಇದಕ್ಕೆ ಮುಖ್ಯ ಕಾರಣ ಒಂದು ದೊಡ್ಡ ಸಮುದಾಯ ಕಾಂಗ್ರೆಸ್‌ನಿಂದ ದೂರವಾಯ್ತು. ಹೀಗೆ ಕಾಂಗ್ರೆಸ್‌ನಿಂದ ದೂರವಾದ ದೊಡ್ಡ ಸಮುದಾಯ ಬಿಜೆಪಿಗೆ ಬೆಂಬಲ ನೀಡತೊಡಗಿತ್ತು. ಆದರೆ, ಆ ಪರಿಸ್ಥಿತಿ ಬದಲಾಗುವ ಲಕ್ಷಣಗಳು ಕಾಣತೊಡಗಿದೆ. ಇದು ಕಾಂಗ್ರೆಸ್‌ಗೆ ನೆರವಾಗುವ ಸಾಧ್ಯತೆಯಿದೆ.

* ದಕ್ಷಿಣ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪ್ರಬಲವಾಗಿಲ್ಲ. ಕನ್ನಡಿಗರು ಏನಾದರೂ ತಪ್ಪು ಮಾಡುತ್ತಿದ್ದಾರೆಯೇ?
ಹಾಗೇನಿಲ್ಲ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷ ಪ್ರಬಲವಾಗಿದೆ. ರಾಜ್ಯದಲ್ಲಿ ಜೆಡಿಎಸ್‌ ಮೂರನೇ ಪಕ್ಷವಾಗಿ ಅನೇಕ ವರ್ಷಗಳಿಂದ ಇದೆ. ದೇಶದಲ್ಲಿ ಎರಡೇ ಎರಡು ಪಕ್ಷ ಇರಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ, ಪ್ರಾದೇಶಿಕ ಪಕ್ಷಗಳು ಈ ದೇಶಕ್ಕೆ ಬೇಕು. ಪ್ರಾದೇಶಿಕ ಪಕ್ಷ ಎಂದರೆ ಪ್ರಜಾಪ್ರಭುತ್ವ ವಿರೋಧಿ ಅಥವಾ ರಾಷ್ಟ್ರ ವಿರೋಧಿಯಲ್ಲ. ಆದರೆ, ಪ್ರಾದೇಶಿಕ ಪಕ್ಷಗಳು ಸಂಕುಚಿತ ಪ್ರದೇಶವಾದ ಹಾಗೂ ಸಂಕುಚಿತ ಭಾಷಾವಾದಕ್ಕೆ ಬಲಿಯಾಗಬಾರದು. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಚಿಂತನೆ ಹೊಂದಿರಬೇಕು.

* ಭಾಷಾ ವಾದ ಏಕೆ ತಪ್ಪು? ರಾಷ್ಟ್ರೀಯ ಪಕ್ಷಗಳು ಹಿಂದಿ ಹೇರಿಕೆ ಮಾಡಿದಾಗ, ಪ್ರಾದೇಶಿಕ ಪಕ್ಷಗಳು ಕನ್ನಡ ಅಥವಾ ತಮಿಳಿನ ಪರ ನಿಲ್ಲುವುದು ತಪ್ಪೇ?
ತಪ್ಪೇನೂ ಇಲ್ಲ. ಭಾರತ ಬಹುಭಾಷೀಯ ದೇಶ. ಕರ್ನಾಟಕದ ಸಂದರ್ಭದಲ್ಲಿ ಕನ್ನಡ ನಶಿಸುತ್ತಿರುವುದನ್ನು ನೋಡಿದಾಗ ಬಹಳ ಚಿಂತೆಯಾಗುತ್ತದೆ. ಕರ್ನಾಟಕದಲ್ಲಿ ಕನ್ನಡ ಉಳಿಯಬೇಕು. ಈ ಭಾಷೆಯ ಸಂರಕ್ಷಣೆ ಹಾಗೂ ಸಂವರ್ಧನೆಯಾಗಬೇಕು. ಭಾರತದಲ್ಲಿ ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ಇರಬೇಕು ಎಂದು ಹೇಳಿದ್ದು ಯಾರು? ಸಂವಿಧಾನದಲ್ಲೂ ಆ ರೀತಿಯಿಲ್ಲ. ಕನ್ನಡಕ್ಕೆ ಆಗುವ ಈ ದುರಂತ ತಪ್ಪಿಸಲು ಮುಂದೆ ಬರುವ ಸರ್ಕಾರ ಗಟ್ಟಿಕ್ರಮಗಳನ್ನು ಕೈಗೊಳ್ಳಬೇಕು.

* ಕರ್ನಾಟಕದ ಚುನಾವಣೆ ರಾಷ್ಟ್ರಕ್ಕೆ ಯಾವ ಸಂದೇಶ ನೀಡುತ್ತದೆ?
ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ನೀಡುವ ಬದಲಾವಣೆಯ ಸಂದೇಶ ಇಡೀ ದೇಶಕ್ಕೆ ಹೋಗುತ್ತದೆ. ಕೇವಲ ಬದಲಾವಣೆ ಮಾತ್ರವಲ್ಲ. ಅದರ ಜತೆಗೆ ಸುಸ್ಥಿರ ಸರ್ಕಾರವೂ ಬರುತ್ತದೆ.

* ಏನದು ಮೆಸೇಜ್‌?
ನಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ‘ವಿ ಆರ್‌ ಇನ್‌ವಿನ್ಸಿಬಲ್‌’ ಎಂಬ ಭಾವನೆ ಬಿಜೆಪಿ ನಾಯಕರಿಗೆ ಇದೆ. ಅದನ್ನು ಪ್ರಚಾರ ಕೂಡ ಮಾಡುತ್ತಿದ್ದಾರೆ. ಪ್ರಚಾರವನ್ನು ಬಿಜೆಪಿ ನಡೆಸುತ್ತಿದೆ. ಇಂತಹ ಪ್ರಚಾರಕ್ಕೆ ದೊಡ್ಡ ಹೊಡೆತ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬೀಳಲಿದೆ. ಅಂದರೆ, ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶ ದೇಶಕ್ಕೆ ರವಾನೆಯಾಗುತ್ತದೆ.

* ದೇಶ ಹಾಗೂ ರಾಜ್ಯದ ಭದ್ರತೆ ಮತ್ತು ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರವೇ ಬೇಕು ಅಂತಾರಲ್ಲ?
ಈ ಧೋರಣೆ ನಿಜಕ್ಕೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅವಹೇಳನ. ಚೀನಾದ ಕಮ್ಯುನಿಸ್ಟರಂತೆ ಭಾರತದಲ್ಲೂ ಏಕ ಪಕ್ಷ ಆಡಳಿತ ತರುವುದು ಬಿಜೆಪಿಯ ಉದ್ದೇಶ. ಹೀಗಾಗಿಯೇ ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಭಾರತ ಎಂದಾಗ ಎಲ್ಲ ಪ್ರತಿಪಕ್ಷಗಳು ಎಚ್ಚರಗೊಳ್ಳಬೇಕು. ಏಕೆಂದರೆ, ವಾಸ್ತವವಾಗಿ ಬಿಜೆಪಿಯವರಿಗೆ ಬೇಕಿರುವುದು ಕಾಂಗ್ರೆಸ್‌ ಮುಕ್ತ ಭಾರತವಲ್ಲ. ಬದಲಾಗಿ, ವಿರೋಧ ಪಕ್ಷ ಮುಕ್ತ ಭಾರತ. ಇದು ಭಾರತದ ಸಂವಿಧಾನದ ವಿರುದ್ಧವಾದ ಆಚಾರ ಹಾಗೂ ವಿಚಾರ. ಇದಿಷ್ಟೆಅಲ್ಲ, ಈ ಬಿಜೆಪಿಯದ್ದು ಡಬಲ್‌ ಎಂಜಿನ್‌ ಸರ್ಕಾರ ವಿತ್‌ ಎ ಸಿಂಗಲ್‌ ಡ್ರೈವರ್‌!

* ಹಾಗಿದ್ದರೆ, ಪ್ರತಿಪಕ್ಷಗಳು ಏಕೆ ಈ ವಿಚಾರವನ್ನು ಜನರ ಮುಂದಿಡುತ್ತಿಲ್ಲ?
ಬಿಜೆಪಿಯ ಈ ಧೋರಣೆಯನ್ನು ಜನತೆಗೆ ಮನದಟ್ಟು ಮಾಡಿಕೊಡುವಲ್ಲಿ ಪ್ರತಿಪಕ್ಷಗಳು ವಿಫಲವಾಗಿರುವುದು ನಿಜ. ಪ್ರತಿಪಕ್ಷಗಳಲ್ಲಿ ಐಕ್ಯತೆ, ಸಹಕಾರ ಹಾಗೂ ಸಂವಾದದ ಕೊರತೆಯಿದೆ. ಕೇಂದ್ರ ಸರ್ಕಾರ ಇಷ್ಟೆಲ್ಲ ಹಾವಳಿ ಮಾಡುತ್ತಿದ್ದರೂ ಸಂಸತ್ತಿನ ಒಳಗೆ ಹಾಗೂ ಹೊರಗೆ ಎಲ್ಲ ಪಕ್ಷಗಳು ಒಗ್ಗೂಡಿ ಗಟ್ಟಿತನದಿಂದ ನಿಲ್ಲುತ್ತಿಲ್ಲ. ಆದರೆ, ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಅನಂತರ ಬಂಗಾಳದ ಮಮತಾ ಬ್ಯಾನರ್ಜಿ ಹಾಗೂ ಉತ್ತರ ಪ್ರದೇಶದ ಅಖಿಲೇಶ್‌ ಯಾದವ್‌ ಭೇಟಿ ಮಾಡಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೆಲಸದಲ್ಲಿ ನಾನು ಕೂಡ ಸಕ್ರಿಯನಾಗಿದ್ದೇನೆ.

* ಇಂತಹ ಪ್ರಯತ್ನ ಈ ಹಿಂದೆಯೂ ನಡೆದು ವಿಫಲವಾಗಿತ್ತಲ್ಲ?
ವೈಫಲ್ಯಗಳ ನಿಚ್ಚಣಿಕೆಯನ್ನು ಏರುತ್ತಲೇ ಸಾಫಲ್ಯ ಸಿಗುತ್ತದೆ. ಪ್ರಯತ್ನ ಬಿಡಬಾರದು.

* ವಾಜಪೇಯಿ ಜತೆಗಿದ್ದವರು ನೀವು. ಈಗಿನ ಬಿಜೆಪಿ ಸರ್ಕಾರದ ಆಡಳಿತಕ್ಕೂ ಆಗಿನ ಬಿಜೆಪಿ ಆಡಳಿತಕ್ಕೂ ಏನು ವ್ಯತ್ಯಾಸವಿದೆ?
ಇವತ್ತು ವಾಜಪೇಯಿ ಅಥವಾ ಅಡ್ವಾಣಿ ಅಧಿಕಾರದಲ್ಲಿ ಇದ್ದಿದ್ದರೆ ಈಗ ನಡೆದಿರುವ ಅನೇಕ ಸಂಗತಿಗಳನ್ನು ನಿಶ್ಚಿತವಾಗಿ ಅವರು ವಿರೋಧಿಸುತ್ತಿದ್ದರು. ಉದಾಹರಣೆಗೆ ಕೇವಲ ರಾಜಕೀಯ ಲಾಭಕ್ಕಾಗಿ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುವುದನ್ನು ವಾಜಪೇಯಿ ಮಾಡಲಿಲ್ಲ.

* ಆದರೆ, ಇದೆಲ್ಲ ಆರಂಭವಾಗಿದ್ದೇ ಅಡ್ವಾಣಿಯವರ ರಥಯಾತ್ರೆಯಿಂದಲ್ಲವೇ?
ನನ್ನ ಪ್ರಕಾರ ಅಯೋಧ್ಯೆ ಆಂದೋಲನ ವಿಚಾರದಲ್ಲಿ ಮುಸ್ಲಿಂ ಸಮುದಾಯ ಒಂದು ದೊಡ್ಡ ತಪ್ಪು ಮಾಡಿತು. ಆ ಸಮುದಾಯ ತಾವಾಗಿಯೇ ರಾಮ ಜನ್ಮಭೂಮಿಯ ಮೇಲಿನ ಹಕ್ಕನ್ನು ಹಿಂಪಡೆದು ಮಂದಿರ ನಿರ್ಮಾಣಕ್ಕೆ ನೆರವಾಗಬೇಕಿತ್ತು. ರಾಮ ನಮ್ಮ ಕೋಟ್ಯಂತರ ಹಿಂದುಗಳ ಆರಾಧ್ಯ ದೇವತೆ ಹಾಗೂ ರಾಮ ಮತ್ತು ರಾಮಾಯಣ ನಮ್ಮ ಸಂಸ್ಕೃತಿಯ ಮೂಲ ಪ್ರೇರಕ. ಇದನ್ನು ಅರಿತು ಮುಸ್ಲಿಂ ಸಮುದಾಯ ತಾವಾಗಿಯೇ ಮಂದಿರ ಕಟ್ಟಲು ಅವಕಾಶ ನೀಡಿದ್ದರೆ ದೇಶದಲ್ಲಿ ಇಂದು ಸದ್ಭಾವನಾ ವಾತಾವರಣ ಇರುತ್ತಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ. ಹೀಗಾಗಿಯೇ ದೇಶದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ. ನಾವು ಕೇವಲ ಹಿಂದು ಕೋಮುವಾದವನ್ನು ವಿರೋಧಿಸಿ, ಮುಸ್ಲಿಂ ಕೋಮುವಾದವನ್ನು ನಿರ್ಲಕ್ಷ್ಯ ಮಾಡಿದರೆ ಅದು ದೊಡ್ಡ ತಪ್ಪಾಗುತ್ತದೆ. ಮುಸ್ಲಿಂ ಸಮಾಜದಲ್ಲಿ ಇರುವ ಕೋಮು ತೀವ್ರಭಾವ ಕೂಡ ಹೋಗಬೇಕು.

ರಾಜ್ಯ ರಕ್ಷಿಸಲು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ: ಡಿ.ಕೆ.ಶಿವಕುಮಾರ್‌

* ನೆಹರು ಬಗ್ಗೆ ಬಿಜೆಪಿಯ ನೆರೇಟಿವ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೆಹರು ಬಗ್ಗೆ ಬಿಜೆಪಿ ಹಾಗೂ ಸಂಘ ಪರಿವಾರದ ನೆರೇಟಿವ್‌ ಬಹಳ ದೊಡ್ಡ ಕೃತಘ್ನತೆಯ ಸಂಕೇತ. ನೆಹರು ದೇಶದ ಸ್ವಾತಂತ್ರಕ್ಕಾಗಿ ಎಲ್ಲ ರೀತಿಯ ತ್ಯಾಗ ಮಾಡಿದ ವ್ಯಕ್ತಿ. 9 ವರ್ಷ ಜೈಲಿನಲ್ಲಿದ್ದರು. ಜೈಲಿನಲ್ಲಿ ಇದ್ದಾಗ ಅವರು ಬರೆದ ಮೂರು ಪುಸ್ತಕಗಳು ಡಿಸ್ಕವರಿ ಆಫ್‌ ಇಂಡಿಯಾ, ಆಟೋಬಯಾಗ್ರಫಿ ಹಾಗೂ ಗ್ಲಿಂಸಸ್‌ ಆಫ್‌ ವಲ್ಡ್‌ರ್‍ ಹಿಸ್ಟರಿ. ನೆಹರು ಅವರನ್ನು ಹೀಗಳೆಯುವವರು ಮೊದಲು ನೆಹರು ಬರೆದಿರೋದನ್ನು ಓದಬೇಕು. ನೆಹರು ಬರೆದಿರುವ ಪುಸ್ತಕಗಳಲ್ಲಿ ಒಂದೇ ಒಂದು ಹಿಂದು ವಿರೋಧಿ ಅಂಶವಿಲ್ಲ. ತಮ್ಮ ಕೃತಿಗಳಲ್ಲಿ ನೆಹರು ಹಿಂದು ಪರಂಪರೆಯನ್ನು ಹಾಡಿ ಹೊಗಳಿದ್ದಾರೆ. ವೇದ, ಉಪನಿಷತ್‌, ರಾಮಾಯಣ, ಮಹಾಭಾರತ, ಸಂಸ್ಕೃತ, ವಿವೇಕಾನಂದ, ರಾಮಕೃಷ್ಣ, ಅರಬಿಂದೋ ಅವರನ್ನು ಹೊಗಳಿದಂತಹ ಮಹಾನ್‌ ಚಿಂತಕನನ್ನು ನೀವು ಹೇಗೆ ಹಿಂದು ವಿರೋಧಿ ಅಂತೀರಿ? ನಿಜ, ನೆಹರು ಅವರಲ್ಲಿ ಮುಸ್ಲಿಂ ವಿರೋಧ ಇರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರನ್ನು ಹಿಂದು ವಿರೋಧಿ ಎನ್ನುವುದೇ?

* ರಾಹುಲ್‌ ಗಾಂಧಿ ಬಗೆಗಿನ ಬಿಜೆಪಿ ನೆರೇಟಿವ್‌?
ರಾಹುಲ್‌ ಗಾಂಧಿ ಪರಿಪೂರ್ಣ ವ್ಯಕ್ತಿತ್ವದವರು ಎಂದೋ ಅಥವಾ ಪರಿಪೂರ್ಣ ರಾಜಕಾರಣಿ ಎಂದೋ ನಾನು ಹೇಳುವುದಿಲ್ಲ. ಆದರೆ, ಯಾವ ವ್ಯಕ್ತಿ ಯಾರದೇ ಹೆದರಿಕೆಯಿಲ್ಲದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸತತವಾಗಿ ಪಾದಯಾತ್ರೆ ನಡೆಸುತ್ತಾರೋ, ಭಾರತವನ್ನು ಒಗ್ಗೂಡಿಸಿ ಎಂಬ ಸಂದೇಶ ನೀಡುತ್ತಾರೋ, ಅಂತಹ ಸಾಹಸ ಮೆರೆದ ವ್ಯಕ್ತಿಗೆ ಕನಿಷ್ಠ ಗೌರವ ನೀಡಬೇಕಲ್ಲ. ಭಾರತ ಜೋಡೋ ವೇಳೆ ರಾಹುಲ್‌ಗೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರಕಿತು. ಆ ಜನ ದುಡ್ಡು ಕೊಟ್ಟು ಕರೆತಂದವರಲ್ಲ. ಬದಲಾಗಿ, ಸ್ವಯಂ ಪ್ರೇರಿತರಾಗಿ ಬಂದಿದ್ದವರು. ಇಂತಹ ನಾಯಕನನ್ನು ಹೇಳಿಕೆಯೊಂದರ ಆಧಾರದ ಮೇಲೆ ಸಂಸದ ಸ್ಥಾನದಿಂದ ಅಮಾನ್ಯ ಮಾಡಿ, ಎಂಟು ವರ್ಷ ಚುನಾವಣೆಗೆ ನಿಲ್ಲದಂತೆ ಶಿಕ್ಷೆ ನೀಡಲಾಗುತ್ತದೆ. ಆತ ವಾಸವಿದ್ದ ಮನೆಯಿಂದ ಅವರನ್ನು ಹೊರಹಾಕಿಸಲಾಗುತ್ತದೆ. ಇದೆಲ್ಲವೂ ಪಕ್ಕಾ ದ್ವೇಷ ರಾಜಕಾರಣ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios