Asianet Suvarna News Asianet Suvarna News

ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ: ಕೆಲವರಿಂದ ಭರ್ಜರಿ ರೋಡ್‌ ಶೋ

ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಇರುವುದರಿಂದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬುಧವಾರವೂ ಭರ್ಜರಿ ರೋಡ್‌ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. 

Karnataka Election 2023 Submission of Nomination papers by candidates in Bengaluru gvd
Author
First Published Apr 20, 2023, 6:42 AM IST | Last Updated Apr 20, 2023, 6:42 AM IST

ಬೆಂಗಳೂರು (ಏ.20): ರಾಜ್ಯ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ದಿನ ಮಾತ್ರ ಬಾಕಿ ಇರುವುದರಿಂದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಬುಧವಾರವೂ ಭರ್ಜರಿ ರೋಡ್‌ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಕೆ.ನಾರಾಯಣರಾಜು, ಗಾಂಧಿನಗರ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಎಚ್‌.ಎನ್‌.ಕೃಷ್ಣಯ್ಯ ಶೆಟ್ಟಿ, ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಹಂಸ ರವಿಕುಮಾರ್‌, ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭಾಸ್ಕರ್‌ ರಾವ್‌, ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಆರ್‌.ವಿಶ್ವನಾಥ್‌, ಪುಲಿಕೇಶಿ ನಗರ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಸುರೇಶ್‌ ರಾಥೋಡ್‌ ನಾಪತ್ರ ಸಲ್ಲಿಸಿದರು.

ದಾಸರಹಳ್ಳಿ ಕಾಂಗ್ರೆಸ್‌ ಅಭ್ಯರ್ಥಿ ಧನಂಜಯ ನಾಮಪತ್ರ ಸಲ್ಲಿಕೆ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಿ.ಧನಂಜಯ ಗಂಗಾಧರಯ್ಯ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮಕ್ಷಮದಲ್ಲಿ ಬುಧವಾರ ದಾಸರಹಳ್ಳಿ ವಲಯದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸುಂಕದಕಟ್ಟೆಯಿಂದ ಹೆಗ್ಗನಹಳ್ಳಿ- ರಾಜಗೋಪಾಲನಗರ- ಚೊಕ್ಕಸಂದ್ರ- 8ನೇ ಮೈಲಿ ಮಾರ್ಗವಾಗಿ ಸಾವಿರಾರು ಬೆಂಬಲಿಗರೊಂದಿಗೆ ಬೃಹತ್‌ ಮೆರವಣಿಗೆಯಲ್ಲಿ ಆಗಮಿಸಿದ ಧನಂಜಯ ಅವರು ಚುನಾವಣಾಧಿಕಾರಿ ಎ.ಆರ್‌.ಕುಲಕರ್ಣಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. 

ಕೆಜಿಎಫ್‌ ಬಾಬು ಬಳಿ 23 ಲಕ್ಷದ 2 ಸಾವಿರ ಡಿಡಿ, 5000 ಸೀರೆ ಪತ್ತೆ

ಸುಮಾರು 25 ಸಾವಿರ ಬೆಂಬಲಿಗರು ಮೆರವಣಿಗೆಯಲ್ಲಿ ಜಮಾಯಿಸಿದ್ದರು. ಒಂದು ಸಾವಿರಕ್ಕೂ ಹೆಚ್ಚು ಬೈಕ್‌ಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ್‌, ದಾಸರಹಳ್ಳಿ ಕ್ಷೇತ್ರದ ಜನತೆ ಬಿಜೆಪಿ, ಜೆಡಿಎಸ್‌ ಪಕ್ಷಗಳ ಶಾಸಕರ ಭ್ರಷ್ಟಾಚಾರ ಆಡಳಿತಗಳಿಂದ ಬೇಸತ್ತಿದ್ದಾರೆ. ಹೊಸಬರಿಗೆ, ಯುವಕರಿಗೆ ಅವಕಾಶ ನೀಡಲು ಜನತೆ ಬಯಸಿದ್ದಾರೆ. ಹಾಗಾಗಿ ದಾಸರಹಳ್ಳಿಯಲ್ಲಿ ಕಾಂಗ್ರೆಸ್‌ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೋಡ್‌ ಶೋ ಇಲ್ಲದೆ ಕೋಟ್ಯಧಿಪತಿ ನಾಮಪತ್ರ: ಮಾಜಿ ಕಾರ್ಪೊರೇಟರ್‌ ಕೆ.ನಾರಾಯಣರಾಜು ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಯಾವುದೇ ರೋಡ್‌ ಶೋ, ಮೆರವಣಿಗೆ ಮಾಡದೆ ಸರಳವಾಗಿ ಚುನಾವಣಾಧಿಕಾರಿಗೆ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಇವರಿಗೆ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಸಾಥ್‌ ನೀಡಿದರು. ಈ ಹಿಂದೆ ಕೆ.ನಾರಾಯಣರಾಜು ಅವರು ಬಿಳೇಕಳ್ಳಿ ವಾರ್ಡ್‌ ಬಿಜೆಪಿ ಕಾರ್ಪೊರೇಟರ್‌ ಆಗಿದ್ದರು. ಬಳಿಕ ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದರು.

ಬಂಡಾಯ ಅಭ್ಯರ್ಥಿ ಕೃಷ್ಣಯ್ಯ ರೋಡ್‌ ಶೋ: ಮಾಜಿ ಎಚ್‌.ಎನ್‌.ಕೃಷ್ಣಯ್ಯ ಶೆಟ್ಟಿಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮೈಸೂರು ಬ್ಯಾಂಕ್‌ ವೃತ್ತದಿಂದ ಸಾವಿರಾರು ಸಂಖ್ಯೆಯ ಬೆಂಬಲಿಗರೊಂದಿಗೆ ತೆರೆದ ಜೀಪಿನಲ್ಲಿ ಬೃಹತ್‌ ರೋಡ್‌ ಶೋ ಮಾಡಿ ಬಲಪ್ರದರ್ಶಿಸಿದರು. ಕೃಷ್ಣಯ್ಯಶೆಟ್ಟಿಅವರು ಬಿಜೆಪಿಯ ಪ್ರಬಲ ಟಿಕೆಟ್‌ ಆಕ್ಷಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯ ಸಪ್ತಗಿರಿಗೌಡಗೆ ಟಿಕೆಟ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೃಷ್ಣಯ್ಯಶೆಟ್ಟಿನಾಮಪತ್ರ ಸಲ್ಲಿಸಿದ್ದಾರೆ.

ಯಶವಂತಪುರದಲ್ಲಿ ಬಿಜೆಪಿಗೆ ಹಂಸ ರವಿಕುಮಾರ್‌ ಟಾಂಗ್‌: ಹಂಸ ರವಿಕುಮಾರ್‌ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಹಂಸ ರವಿಕುಮಾರ್‌, ಕಳೆದ 20 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಈ ಬಾರಿ ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಸಚಿವ ಎಸ್‌.ಟಿ.ಸೋಮಶೇಖರ್‌ಗೆ ಬಿಜೆಪಿ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಹಂಸ ನಾಪತ್ರ ಸಲ್ಲಿಸಿದ್ದಾರೆ.

ಭಾಸ್ಕರ್‌ ರಾವ್‌ ನಾಮಪತ್ರ ಸಲ್ಲಿಕೆ: ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಚಾಮರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಜೆ.ಜೆ.ನಗರ ಪೊಲೀಸ್‌ ಠಾಣೆ ಸಮೀಪದ ಸಂಗಮ್‌ ವೃತ್ತದಿಂದ ಟಿಸಿಎಂ ರಾಯನ್‌ ರಸ್ತೆಯ ಬಿಬಿಎಂಪಿ ಕಚೇರಿಗೆ ಸಾವಿರಾರು ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್‌ ಶೋ ನಡೆಸಿದರು. ಈ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಸಂಸದ ಪಿ.ಸಿ.ಮೋಹನ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ, ಮಂಡಲ ಅಧ್ಯಕ್ಷ ಚನ್ನಕೇಶವ, ಕಾರ್ಯದರ್ಶಿ ಸುನೀಲ್‌ ವೆಂಕಟೇಶ್‌ ಸೇರಿದಂತೆ ಬೆಂಬಲಿಗರು, ಮುಖಂಡರು ಸಾಥ್‌ ನೀಡಿದರು.

ಆಪ್‌ನಿಂದ ಸುರೇಶ್‌ ನಾಮಪತ್ರ ಸಲ್ಲಿಕೆ: ಸುರೇಶ್‌ ರಾಥೋಡ್‌ ಅವರು ಪುಲಿಕೇಶಿನಗರ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಕ್ಷೇತ್ರದ ಮುನೇಶ್ವರ ದೇವಸ್ಥಾನ, ಡಿ.ಜೆ.ಹಳ್ಳಿ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಆಮ್‌ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ರಾಘವ್‌ ಚಡ್ಡಾ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿದರು.

ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ 24 ಗಂಟೆಯಲ್ಲೇ ಬದಲು

ಯಲಹಂಕದಲ್ಲಿ ಬಿಜೆಪಿಯ ಶಾಸಕ ವಿಶ್ವನಾಥ್‌ ಭರ್ಜರಿ ರೋಡ್‌ಶೋ: ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಆರ್‌.ವಿಶ್ವನಾಥ್‌ ಅವರು ಬುಧವಾರ ಬೃಹತ್‌ ರೋಡ್‌ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಕ್ಷೇತ್ರದಲ್ಲಿ ಬೃಹತ್‌ ರೋಡ್‌ ಶೋ ನಡೆಸಿದರು. ಭಾರೀ ಸಂಖ್ಯೆಯ ಜಮಾಯಿಸಿದ್ದ ಕಾರ್ಯಕರ್ತರು ರೋಡ್‌ ಶೋನಲ್ಲಿ ಪಾಲ್ಗೊಂಡು ಬಿಜೆಪಿ ಹಾಗೂ ವಿಶ್ವನಾಥ್‌ ಪರ ಘೋಷಣೆ ಕೂಗಿದರು. ಬೆಂಬಲಿಗರು ಹಾಗೂ ಮುಖಂಡರು ವಿಶ್ವನಾಥ್‌ಗೆ ಸಾಥ್‌ ನೀಡಿದರು.

ನಾಮಪತ್ರ ಸಲ್ಲಿಕೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ಕಡೆಗೆ ಲಕ್ಷ್ಯ ಹರಿಸಿದ್ದೇವೆ. ಇಲ್ಲಿ ಸೇರಿರುವ ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದರೆ ಈ ಗುರಿಯನ್ನು ತಲುಪುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಇಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಕ್ಷೇತ್ರದ ಹೊರಗಿನಿಂದ ಬಂದವರಾಗಿದ್ದಾರೆ, ಅವರು ಸ್ಟಾರ್‌ ಪ್ರಚಾರಕರನ್ನು ಕರೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ನನಗೆ ನನ್ನ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರೇ ಸ್ಟಾರ್‌ ಪ್ರಚಾರಕರಾಗಿದ್ದಾರೆ. ಅವರು ನಡೆಸುವ ಪ್ರಚಾರದಿಂದಲೇ ನನ್ನ ಗೆಲುವು ನಿಶ್ಚಿತ ಎಂದು ವಿಶ್ವನಾಥ್‌ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios