ಕೆಜಿಎಫ್ ಬಾಬು ಬಳಿ 23 ಲಕ್ಷದ 2 ಸಾವಿರ ಡಿಡಿ, 5000 ಸೀರೆ ಪತ್ತೆ!
ವಿಧಾನಸಭಾ ಚುನಾವಣೆ ಕಣಕ್ಕೆ ಪತ್ನಿಯನ್ನು ಚಿಕ್ಕಪೇಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಇಳಿಸಿರುವ ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದೆ.
ಬೆಂಗಳೂರು (ಏ.20): ವಿಧಾನಸಭಾ ಚುನಾವಣೆ ಕಣಕ್ಕೆ ಪತ್ನಿಯನ್ನು ಚಿಕ್ಕಪೇಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಇಳಿಸಿರುವ ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಅವರಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು, ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಐದು ಸಾವಿರಕ್ಕೂ ಹೆಚ್ಚು ರೇಷ್ಮೆ ಸೀರೆಗಳು, ಎರಡು ಸಾವಿರಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿಡಿ)ಗಳನ್ನು ಜಪ್ತಿ ಮಾಡಿದ್ದಾರೆ.
ಬುಧವಾರ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಸಂತ ನಗರದಲ್ಲಿನ ರುಕ್ಸನಾ ಪ್ಯಾಲೇಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಚುನಾವಣೆ ಸಮಯದಲ್ಲಿ ಮತದಾರರಿಗೆ ವಿತರಣೆ ಮಾಡಲು ಸೀರೆ, ಡಿಡಿ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಚುನಾವಣಾ ಅಕ್ರಮ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ತಂಡವು ಸಹ ಸ್ಥಳಕ್ಕೆ ತೆರಳಿ ಕಾನೂನು ಕ್ರಮ ಕೈಗೊಂಡಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪರಿಶೀಲನೆ ಕೈಗೊಂಡಿದೆ. ಚುನಾವಣಾಧಿಕಾರಿಗಳ ತಂಡದ ಜತೆಗೆ ಜಿಎಸ್‌ಟಿ ಅಧಿಕಾರಿಗಳು ಸಹ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ 24 ಗಂಟೆಯಲ್ಲೇ ಬದಲು
ಪತ್ತೆಯಾದ ಡಿಡಿ, ರೇಷ್ಮೆ ಸೀರೆಗಳನ್ನು ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಲಾಗಿತ್ತು ಎಂದು ಹೇಳಲಾಗಿದೆ. ಉಮ್ರಾ ಫೌಂಡೇಷನ್ ಹೆಸರಲ್ಲಿ ತಲಾ .1,150 ಡಿಡಿ ಮೊತ್ತದ ಎರಡು ಸಾವಿರ ಡಿಡಿಗಳು ಪತ್ತೆಯಾಗಿವೆ. ಡಿಡಿಗಳು ಇದ್ದ ಕವರ್ ಮೇಲೆ ಕೆ.ಜಿ.ಎಫ್ ಬಾಬು ಕಡೆಯಿಂದ ಉಡುಗೊರೆ ಎಂದು ಬರೆಯಲಾಗಿದೆ. ಅಲ್ಲದೇ, ಚಿಕ್ಕಪೇಟೆ ನಿವಾಸಿಗಳ ಹೆಸರು ಸಹ ಇದೆ ಎಂದು ಮೂಲಗಳು ಹೇಳಿವೆ. ಕಾಂಚಿಪುರ ರೇಷ್ಮೆಗಳು ಸಹ ಸಿಕ್ಕಿವೆ. ಸೀರೆಗಳ ಮೇಲೆ ಕೆ.ಜಿ.ಎಫ್ ಬಾಬು ಅವರ ಭಾವಚಿತ್ರಗಳಿವೆ ಎಂದು ತಿಳಿದು ಬಂದಿದೆ.
ಐಟಿ ಅಧಿಕಾರಿಗಳಿಗೆ ಮೊದಲು ಮಾಹಿತಿ ಲಭ್ಯವಾಗಿದ್ದು, ಇದರ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದರು. ಸ್ಥಳ ಪರಿಶೀಲನೆ ನಡೆಸಿದ ಬಳಿಕ ನಗದು ಇಲ್ಲದೆ ವಸ್ತುಗಳು ಇದ್ದ ಕಾರಣ ಚುನಾವಣಾ ಆಯೋಗ ಮತ್ತು ಜಿಎಸ್‌ಟಿಗೆ ಮಾಹಿತಿ ನೀಡಲಾಗಿದೆ. ಐಟಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಚುನಾವಣಾ ಆಯೋಗದ ಅಧಿಕಾರಿಗಳು, ಜಿಎಸ್‌ಟಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಕೆ.ಜಿ.ಎಫ್.ಬಾಬು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಏ.28ರಿಂದ ರಾಜ್ಯದಲ್ಲಿ 1 ವಾರ ಮೋದಿ 20+ ಸಮಾವೇಶ?: 1-2 ದಿನದಲ್ಲಿ ವೇಳಾಪಟ್ಟಿ ಅಂತಿಮ ಸಂಭವ
ಆದರೆ, ಅವರಿಗೆ ಟಿಕೆಟ್ ಸಿಗದ ಕಾರಣ ಚಿಕ್ಕಪೇಟೆ ಕ್ಷೇತ್ರದಲ್ಲಿ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಪತ್ನಿಯ ಪರವಾಗಿ ಪ್ರಚಾರ ಕೈಗೊಂಡು ಮತದಾರರನ್ನು ಸೆಳೆಯಲು ರೇಷ್ಮೆ ಸೀರೆ, ಡಿಡಿಗಳನ್ನು ಇಡಲಾಗಿತ್ತು ಎಂದು ಹೇಳಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.