ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ 24 ಗಂಟೆಯಲ್ಲೇ ಬದಲು
ಕೇವಲ 8 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವುದನ್ನು ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು ನಾಮಪತ್ರ ಸಲ್ಲಿಕೆಗೆ ಇನ್ನೊಂದೇ ದಿನ ಉಳಿದಿರುವಾಗ ತನ್ನ ಐದನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.
ಬೆಂಗಳೂರು (ಏ.20): ಕೇವಲ 8 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವುದನ್ನು ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷವು ನಾಮಪತ್ರ ಸಲ್ಲಿಕೆಗೆ ಇನ್ನೊಂದೇ ದಿನ ಉಳಿದಿರುವಾಗ ತನ್ನ ಐದನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿಗೆ ಅಭ್ಯರ್ಥಿ ಬದಲಾವಣೆ ಮಾಡಿದ್ದು, ಉಳಿದಂತೆ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ 5 ಕ್ಷೇತ್ರದ ಘೋಷಣೆ ಬಾಕಿ ಇದೆ.
ಸಿಎಂ ವಿರುದ್ಧದ ಅಭ್ಯರ್ಥಿ ಬದಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರಕ್ಕೆ ತನ್ನ ನಾಲ್ಕನೇ ಪಟ್ಟಿಯಲ್ಲಿ ಯೂಸುಫ್ ಸವಣೂರ ಹೆಸರನ್ನು ಘೋಷಿಸಿತ್ತು. ಆದರೆ, ಐದನೇ ಪಟ್ಟಿಯಲ್ಲಿ ಈ ಹೆಸರು ಬದಲಾಗಿದ್ದು, ದೂರದ ಹುಬ್ಬಳ್ಳಿಯವರಾದ ಸವಣೂರು ಬದಲಾಗಿ ಸ್ಥಳೀಯ ನಾಯಕರ ಬೆಂಬಲ ಹೊಂದಿರುವ ಹಾಗೂ ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿದೆ. ಮೂಲಗಳ ಪ್ರಕಾರ ಯೂಸುಫ್ ಸವಣೂರ ಅವರ ಪರವಾಗಿ ಮುಖಂಡ ಜಮೀರ್ ಅಹ್ಮದ್ ಖಾನ್ ಲಾಬಿ ನಡೆಸಿದ್ದರಿಂದ ಅವರ ಹೆಸರು ಘೋಷಿತವಾಗಿತ್ತು. ಸವಣೂರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಸ್ಥಳೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಪಠಾಣ್ ‘ಸಂಪನ್ಮೂಲ’ ವ್ಯಕ್ತಿ ಎಂದು ಕಾಂಗ್ರೆಸ್ ವರಿಷ್ಠರಿಗೆ ಮನವರಿಕೆಯಾದ ಹಿನ್ನೆಲೆಯಲ್ಲಿ ಈ ಕಡೆ ಕ್ಷಣದ ಬದಲಾವಣೆಯಾಗಿದೆ.
ಏ.28ರಿಂದ ರಾಜ್ಯದಲ್ಲಿ 1 ವಾರ ಮೋದಿ 20+ ಸಮಾವೇಶ?: 1-2 ದಿನದಲ್ಲಿ ವೇಳಾಪಟ್ಟಿ ಅಂತಿಮ ಸಂಭವ
ಅಖಂಡ ಬದಲು ಡಿಕೆಶಿ ಆಪ್ತ: ಇನ್ನೂ ತೀವ್ರ ಪೈಪೋಟಿಯಿದ್ದ ಬೆಂಗಳೂರಿನ ಪುಲಕೇಶಿ ನಗರ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಹಾಲಿ ಶಾಸಕ ಅಖಂಡ ಶ್ರೀನಿವಾಸ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಎ.ಸಿ. ಶ್ರೀನಿವಾಸ ಅವರಿಗೆ ಟಿಕೆಟ್ ಲಭ್ಯವಾಗಿದೆ. ಟಿಕೆಟ್ ಕೈ ತಪ್ಪುವ ನಿರೀಕ್ಷೆಯಿದ್ದ ಅಖಂಡ ಅವರು ಈಗಾಗಲೇ ಪಕ್ಷ ತೊರೆದಿದ್ದು ಪಕ್ಷೇತರರಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಮೇಯರ್ ಸಂಪತ್‌ಕುಮಾರ್ ಹಾಗೂ ಮಾಜಿ ಕಾರ್ಪೋರೇಟರ್ ಆನಂದ ಕುಮಾರ್ ಅವರ ಲಾಬಿಯನ್ನು ಮೀರಿ ಎ.ಸಿ. ಶ್ರೀನಿವಾಸ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
10 ಬಾರಿ ಒಂದೇ ಪಕ್ಷ, ಒಂದೇ ಚಿಹ್ನೆಯಡಿ ಸ್ಪರ್ಧಿಸಿ ದಾಖಲೆ ನಿರ್ಮಿಸುವತ್ತ ಆರಗ ಜ್ಞಾನೇಂದ್ರ!
ಇನ್ನೆರಡು ಕ್ಷೇತ್ರಕ್ಕೆ ಹೊಸಬರು: ಉಳಿದಂತೆ ಮುಳಬಾಗಿಲು (ಎಸ್‌ಸಿ) ಕ್ಷೇತ್ರಕ್ಕೆ ದಂತ ವೈದ್ಯರಾದ ಡಾ. ಬಿ.ಸಿ. ಮುದ್ದುಗಂಗಾಧರ್ ಅವರಿಗೆ ಟಿಕೆಟ್ ಲಭ್ಯವಾಗಿದೆ. ಕೆ.ಆರ್. ಪುರ ಕ್ಷೇತ್ರಕ್ಕೆ ನಗರದ ಕೇಂಬ್ರಿಡ್ಜ್ ಶಾಲೆಗಳ ಮುಖ್ಯಸ್ಥ ಡಿ.ಕೆ. ಮೋಹನ್ ಅವರಿಗೆ ನೀಡಲಾಗಿದೆ. ಮೋಹನ್ ಅವರು ಅವರು ಗೊಲ್ಲ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ಎ. ಕೃಷ್ಣಪ್ಪ ಅವರ ಸಂಬಂಧಿ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.