ಬೊಂಬೆನಗರಿಯಲ್ಲಿ ಕುಮಾರಸ್ವಾಮಿಯನ್ನು ಮಣಿಸಿ ಯೋಗೇಶ್ವರ್ ವಿಧಾನಸೌಧ ಪ್ರವೇಶಿಸುತ್ತಾರಾ?
ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮುಖಾಮುಖಿಯಾಗುತ್ತಿರುವ ಕಾರಣ ಬೊಂಬೆನಾಡು ಚನ್ನಪಟ್ಟಣ ಹೈ ವೋಲ್ಟೇಜ್ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿದೆ.
ರಾಮನಗರ (ಮೇ.06): ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮುಖಾಮುಖಿಯಾಗುತ್ತಿರುವ ಕಾರಣ ಬೊಂಬೆನಾಡು ಚನ್ನಪಟ್ಟಣ ಹೈ ವೋಲ್ಟೇಜ್ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿದೆ. ಈ ಬಾರಿಯ ಚುನಾವಣೆ ಕ್ಷೇತ್ರದಲ್ಲಿ ಪಕ್ಷ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದೆ. ಹೀಗಾಗಿ, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಮತ್ತು ಬಿಜೆಪಿ ಹುರಿಯಾಳು ಸಿ.ಪಿ.ಯೋಗೇಶ್ವರ್ ನಡುವೆ ಸಮಬಲದ ಹೋರಾಟ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಕೂಡ ಪೈಪೋಟಿ ನೀಡುವ ಕಸರತ್ತಿನಲ್ಲಿದ್ದಾರೆ. ಈಗಾಗಲೇ ದೇವೇಗೌಡರ ಕುಟುಂಬದ ವಿರುದ್ಧ 3 ಬಾರಿ ಸ್ಪರ್ಧಿಸಿರುವ ಯೋಗೇಶ್ವರ್ 2 ಬಾರಿ ಸೋತಿದ್ದು, 1 ಬಾರಿ ಗೆಲುವು ಕಂಡಿದ್ದಾರೆ.
ಎಚ್‌ಡಿಕೆಗೆ ಚನ್ನಪಟ್ಟಣವೂ ಅದೃಷ್ಟದ ಕ್ಷೇತ್ರ: ಕುಮಾರಸ್ವಾಮಿಯವರ ಪಾಲಿಗೆ ರಾಮನಗರದ ಜೊತೆಗೆ ಚನ್ನಪಟ್ಟಣವೂ ಅದೃಷ್ಟದ ಕ್ಷೇತ್ರ. 2ನೇ ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿದ ಕ್ಷೇತ್ರ ಇದೆನ್ನುವ ಕಾರಣಕ್ಕೆ ಚನ್ನಪಟ್ಟಣದ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕ್ಷೇತ್ರಕ್ಕೆ ಸಾವಿರಾರು ಕೋಟಿ ರುಪಾಯಿಗಳನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಗಳಿಸಿಕೊಂಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ವಿಶೇಷತೆ ಕ್ಷೇತ್ರದೊಳಗೆ ಸದ್ದು ಮಾಡುತ್ತಿದೆ. ಪಂಚರತ್ನ ರಥಯಾತ್ರೆ ಬಳಿಕ ನಾಮಪತ್ರ ಸಲ್ಲಿಸಲಷ್ಟೇ ಕ್ಷೇತ್ರಕ್ಕೆ ಬಂದು ಹೋದ ಕುಮಾರಸ್ವಾಮಿ ಮತ್ತೆ ಬಂದಿಲ್ಲ. ಕ್ಷೇತ್ರ ಮರೆಯುತ್ತಾರೆನ್ನುವ ಆರೋಪ ಬಿಟ್ಟರೆ ಇವರನ್ನು ಕಟ್ಟಿಹಾಕುವ ಇತರ ಯಾವುದೇ ಬಲವಾದ ಕಾರಣಗಳಿಲ್ಲ.
ಬಾಗಲಕೋಟೆ ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ
ಸಿಪಿವೈಗೆ ವೈಯಕ್ತಿಕ ವರ್ಚಸ್ಸು: ಯೋಗೇಶ್ವರ್ ಕೂಡ ಕುಮಾರಸ್ವಾಮಿ ಅವರಂತೆಯೇ ವೈಯಕ್ತಿಕ ವರ್ಚಸ್ಸಿನ ಮೂಲಕ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡವರು. ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು, ಅಲ್ಲಿಂದ ಪ್ರತಿ ಚುನಾವಣೆಯಲ್ಲೂ ಒಂದೊಂದು ಪಕ್ಷದಿಂದ ಸ್ಪರ್ಧಿಸಿ ಸೋಲು, ಗೆಲುವನ್ನು ಕಂಡವರು. ಈಗ 8ನೇ ಬಾರಿ ಚುನಾವಣೆ ಎದುರಿಸುತ್ತಿರುವ ಸೈನಿಕ, ಯೋಗೇಶ್ವರ್, ಕಮಲ ಹಿಡಿದು ಸ್ವಾಭಿಮಾನಿ ಸಂಕಲ್ಪ ನಡಿಗೆ ಹೆಸರಿನಲ್ಲಿ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ಮೋದಿ ಅವರನ್ನು ಪ್ರಚಾರಕ್ಕೆ ಕರೆ ತಂದು ಕಾರ್ಯಕರ್ತರಲ್ಲಿ ರಣೋತ್ಸಾಹ ಹೆಚ್ಚಿಸಿದ್ದಾರೆ. ‘ನೀರಾವರಿ’ ಅಸ್ತ್ರದ ಜೊತೆಗೆ ಜೆಡಿಎಸ್ ಮುಖಂಡರನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ. ವ್ಯಕ್ತಿಗತ ವರ್ಚಸ್ಸಿದ್ದರೂ ಪಕ್ಷ ನಿಷ್ಠೆ ವಿಚಾರದಲ್ಲಿ ಬದ್ಧತೆ ಇಲ್ಲದಿರುವುದು ಅವರಿಗೆ ಹಿನ್ನೆಡೆಯಾಗಬಹುದೆಂದು ಅಂದಾಜಿಸಲಾಗಿದೆ.
ಕೈ-ದಳ ನಡುವೆ ಒಳ ಒಪ್ಪಂದ ವದಂತಿ: ಜೆಡಿಎಸ್ ಹಾಗೂ ಬಿಜೆಪಿ ನೇರ ಹಣಾಹಣಿ ಇರುವ ಈ ಕ್ಷೇತ್ರದೊಳಗೆ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲದ ರೀತಿಯಲ್ಲಿದೆ. ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಒಳಒಪ್ಪಂದದ ವದಂತಿಯೂ ಹರಿದಾಡುತ್ತಿದೆ. ಕಾಂಗ್ರೆಸ್‌ನಿಂದ ಸಂಭಾವ್ಯ ಅಭ್ಯರ್ಥಿಯಾಗಿದ್ದ ಪ್ರಸನ್ನ ಪಿ.ಗೌಡ ಟಿಕೆಟ್ ಘೋಷಣೆಗೂ ಮುನ್ನವೇ ಜೆಡಿಎಸ್ ಸೇರಿಕೊಂಡರು. ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಭಾವ ಶರತ್‌ಚಂದ್ರ ಆಪ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್.ಗಂಗಾಧರ್ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಂಪ್ರದಾಯಿಕ ಮತಬ್ಯಾಂಕ್ ಪಡೆಯುವ ಲೆಕ್ಕಾಚಾರದಲ್ಲಿದೆ.
ಒಕ್ಕಲಿಗ ಮತದಾರರ ಬಲ ಹೊಂದಿರುವ ಈ ಕ್ಷೇತ್ರದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿವೆ. ಒಕ್ಕಲಿಗ ಮತಗಳು ವಿಭಜನೆ ಆಗುವ ಕಾರಣಕ್ಕಾಗಿ ಕುಮಾರಸ್ವಾಮಿಯವರು ‘ಅಹಿಂದ’, ಯೋಗೇಶ್ವರ್ ಅವರು ‘ಹಿಂದ’ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ‘ಅಹಿಂದ’ ಮತಗಳು ಸರಾಗವಾಗಿ ಬುಟ್ಟಿಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ಗಂಗಾಧರ್, ಒಕ್ಕಲಿಗರ ಮತ ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
2018ರ ಫಲಿತಾಂಶ
ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ 87995
ಸಿ.ಪಿ.ಯೋಗೇಶ್ವರ್ ಬಿಜೆಪಿ 66465
ಎಚ್.ಎಂ.ರೇವಣ್ಣ ಕಾಂಗ್ರೆಸ್ 30208
ಹಿಂದೂ-ಮುಸ್ಲಿಂ ನಡುವೆ ಗಲಾಟೆಗೆ ಪ್ರೇರೇಪಿಸಿದ ಪಕ್ಷ ಕಾಂಗ್ರೆಸ್: ಸಚಿವ ಅಶೋಕ್
ಜಾತಿ ಲೆಕ್ಕಾಚಾರ
ಒಟ್ಟು ಮತಗಳು - 2,30,327
ಒಕ್ಕಲಿಗರು - 1.15 ಲಕ್ಷ
ಪ.ಜಾತಿ/ಪ.ಪಂ - 41 ಸಾವಿರ
ಅಲ್ಪಸಂಖ್ಯಾತರು - 34 ಸಾವಿರ
ಲಿಂಗಾಯತ - 8 ಸಾವಿರ
ಬ್ರಾಹ್ಮಣ - 1800
ಇತರೆ ಹಿಂದುಳಿದ ವರ್ಗ - 30527