ಎಚ್.ಡಿ.ಕುಮಾರಸ್ವಾಮಿ ಎದುರು ಸ್ಪರ್ಧಿಸಲು ಸಿದ್ಧ: ಸಂಸದೆ ಸುಮಲತಾ ಅಂಬರೀಶ್
ಬಿಜೆಪಿ ವರಿಷ್ಠರು ಸೂಚನೆ ನೀಡಿದರೆ ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಎದುರು ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯ (ಏ.18): ಬಿಜೆಪಿ ವರಿಷ್ಠರು ಸೂಚನೆ ನೀಡಿದರೆ ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಎದುರು ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮದ್ದೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವ ಬಗ್ಗೆ ವದಂತಿ ಹರಡಿದೆ. ಹಾಗೊಮ್ಮೆ ಅವರು ಸ್ಪರ್ಧಿಸುವುದು ನಿಜವಾಗಿದ್ದಲ್ಲಿ ಸ್ಪರ್ಧೆಗೆ ನಾನು ಸಿದ್ಧ. ವಿಧಾನಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಅಖಾಡಕ್ಕಿಳಿಯುವಂತೆ ಪಕ್ಷ ಸೂಚನೆ ನೀಡಿದರೆ ನನ್ನ ಸ್ಪರ್ಧೆ ಇರಲಿದೆ. ಜಿಲ್ಲೆಯ ಜನರು ಬದಲಾವಣೆ ಬಯಸುತ್ತಾರೆ. ಹಾಗಾಗಿ ಅಚ್ಚರಿಯ ಫಲಿತಾಂಶವನ್ನು ಅವರು ನೀಡಲಿದ್ದಾರೆಂಬ ಭರವಸೆ ಇದೆ ಎಂದು ವಿಶ್ವಾಸದಿಂದ ನುಡಿದರು.
ರವೀಂದ್ರ ಶ್ರೀಕಂಠಯ್ಯಗೆ ಜನರೇ ಉತ್ತರ ನೀಡ್ತಾರೆ: ನನ್ನನ್ನು ಅಪ್ರಬುದ್ಧ ರಾಜಕಾರಣಿ ಎಂದು ಟೀಕೆ ಮಾಡಿರುವ ಶಾಸಕ ರವೀಂದ್ರ ಶ್ರೀಕಂಠಯ್ಯರಿಗೆ ಜನರೇ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಸಂಸದೆ ಸುಮಲತಾ ಸೋಮವಾರ ಕಿಡಿಕಾರಿದರು. ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಎಸ್.ಪಿ. ಸ್ವಾಮಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರವೀಂದ್ರ ಶ್ರೀಕಂಠಯ್ಯ ನನ್ನನ್ನು ಅಪ್ರಬುದ್ಧ ರಾಜಕಾರಣಿ ಎಂದು ಟೀಕೆ ಮಾಡಿರುವುದು ನನಗೆ ಗೊತ್ತಿಲ್ಲ. ಒಂದು ವೇಳೆ ಈ ರೀತಿಯಾಗಿ ಮಾತನಾಡಿದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಬಹುದಾಗಿದೆ ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್
ರವೀಂದ್ರ ಶ್ರೀಕಂಠಯ್ಯ ತಮ್ಮ ಐದು ವರ್ಷದ ಶಾಸಕ ಸ್ಥಾನದ ಅವಧಿಯಲ್ಲಿ ಮಾಡಿರುವ ಶೂನ್ಯವಾಗಿದೆ. ಅವರು ಕ್ಷೇತ್ರದ ಜನರ ಮೇಲೆ ದಬ್ಬಾಳಿಕೆ, ಅಹಂಕಾರ ತೋರಿಸಿ ಅಧಿಕಾರ ನಡೆಸುತ್ತಿದ್ದಾರೆ. ಹೀಗಾಗಿ ಜನರೇ ಚುನಾವಣೆಯಲ್ಲಿ ಇವರ ಆಟಾಟೋಪಗಳಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದು ಕಿಡಿಕಾರಿದರು. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಈ ಹಿಂದೆ ರವೀಂದ್ರ ಶ್ರೀಕಂಠಯ್ಯ ನನ್ನನ್ನು ಹೆದರಿಸಲು ಪ್ರಯತ್ನಿಸಿದ್ದರು. ಆಗ ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ಧ ದೂರು ನೀಡಬಹುದಾಗಿತ್ತು. ಈಗ ನನ್ನನ್ನು ಅಪ್ರಬುದ್ಧ ರಾಜಕಾರಣಿ ಎಂದು ಟೀಕೆ ಮಾಡುವ ಮೂಲಕ ಹೀರೋ ಆಗಲು ಹೊರಟಿದ್ದಾರೆ. ಅವರ ಇದೇ ವರ್ತನೆ ಮುಂದುವರಿದರೆ ಚುನಾವಣಾ ಆಯೋಗಕ್ಕೆ ದೂರು ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ನಾಮಪತ್ರ ಸಲ್ಲಿಕೆ: ಅಪಾರ ಪ್ರಮಾಣದ ಜನಸ್ತೋಮದ ಮೆರವಣಿಗೆಯೊಂದಿಗೆ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಸೋಮವಾರ ನಾಮಪತ್ರ ಸಲ್ಲಿಸಿದರು. ಸಂಸದೆ ಸುಮಲತಾ ಅಂಬರೀಶ್ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದಗೆ ಸಾಥ್ ನೀಡಿದರು. ಪಟ್ಟಣದ ಕುವೆಂಪು ವೃತ್ತದ ಬಳಿಯಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರುಗಳೊಂದಿಗೆ ಪಟ್ಟಣದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿದ ಸಚ್ಚಿದಾನಂದ ತಹಸೀಲ್ದಾರ್ ಅಶ್ವಿನಿ ನೇತೃತ್ವದಲ್ಲಿ ಚುನಾವಣಾಧಿಕಾರಿ ಎಂ.ಬಾಬುಗೆ ನಾಮಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಸಚ್ಚಿದಾನಂದರೊಂದಿಗೆ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರಾಜ್ಯಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಉಪಸ್ಥಿತರಿದ್ದರು. ಈ ವೇಳೆ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ನನಗೆ ನೀವೆಲ್ಲರೂ ಸ್ವಾಭಿಮಾನದಿಂದ ನನ್ನನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿದ್ದೀರಾ. ನಿಮ್ಮ ಋುಣವನ್ನು ನಾನು ಎಂದಿಗೂ ಮರೆಯೋದಿಲ್ಲ. ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಇಂಡುವಾಳು ಸಚ್ಚಿದಾನಂದರನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕು ಎಂದರು.
ಕನಕಪುರ ಕ್ಷೇತ್ರದವರ ಬದಲಾವಣೆ ಆಸೆ ನನಸಾಗಲಿದೆ: ಸಚಿವ ಆರ್.ಅಶೋಕ್
ನಾವೆಲ್ಲರೂ ಇಂಡುವಾಳು ಸಚ್ಚಿದಾನಂದರ ಜಯಕ್ಕಾಗಿ ಕೆಲಸ ಮಾಡಬೇಕಿದೆ. ಕ್ಷೇತ್ರದಲ್ಲಿ ಅವರಿಗೆ ಆಶೀರ್ವಾದ ಮಾಡುವ ಮೂಲಕ ಕ್ಷೇತ್ರದಲ್ಲಿ ಸ್ವಾಭಿಮಾನವನ್ನು ಎತ್ತಿ ಹಿಡಿದು ಕುಟುಂಬ ರಾಜಕಾರಣಕ್ಕೆ ಅಂತ್ಯವಾಡಬೇಕು ಎಂದು ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.