ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ 10 ಸೀಟು ಹೆಚ್ಚು ಗೆಲುವು: ಡಿ.ಕೆ.ಶಿವಕುಮಾರ್
ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಇನ್ನೂ 10 ಸೀಟು ಹೆಚ್ಚು ಗೆಲ್ಲಲಿದ್ದು, ನಾವು ಒಟ್ಟು 150 ಸೀಟು ಗೆಲ್ಲಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.17): ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್ ಇನ್ನೂ 10 ಸೀಟು ಹೆಚ್ಚು ಗೆಲ್ಲಲಿದ್ದು, ನಾವು ಒಟ್ಟು 150 ಸೀಟು ಗೆಲ್ಲಲ್ಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 40 ವರ್ಷಗಳಿಂದ ಜನಸಂಘದ ಸಂದರ್ಭದಿಂದಲೂ ಬಿಜೆಪಿಯಲ್ಲಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಮತ್ತು ಪುಟ್ಟಣ ಸೇರಿದಂತೆ ಹಲವರು ಬಿಜೆಪಿ ಮತ್ತು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಸೇರುವುದಕ್ಕೆ ಅವರೇನು ದಡ್ಡರೇ ಎಂದು ಪ್ರಶ್ನಿಸಿದರು.
ಅವರೆಲ್ಲರಿಗೂ ಬಿಜೆಪಿಯಿಂದ ಭವಿಷ್ಯವಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಅವರು ಬಿಜೆಪಿ ಮತ್ತು ಜೆಡಿಎಸ್ ಅನ್ನು ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಇದುವರೆಗೆ ನಾವು ನಡೆಸಿದ ಇಂಟ್ರನಲ್ ಅಸೆಸ್ಮೆಂಟ್ ವರದಿಯಲ್ಲಿ 135 ರಿಂದ 140 ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸ ಇತ್ತು. ಆದರೆ ಈಗ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಅವರಿಂದ ಇನ್ನೂ ಹತ್ತು ಸೀಟು ಹೆಚ್ಚು ಗೆಲ್ಲುವ ಖಚಿತವಿದೆ ಎಂದರು. ಅಲ್ಲದೆ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆ ಆಗುವಾಗ ಯಾವುದಾದರೂ ಬೇಡಿಕೆಗಳನ್ನು ಇಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಯಾವುದೇ ಷರತ್ತುಗಳಿಲ್ಲದೆ ಅವರು ಪಕ್ಷಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಕನಕಪುರ ಕ್ಷೇತ್ರದವರ ಬದಲಾವಣೆ ಆಸೆ ನನಸಾಗಲಿದೆ: ಸಚಿವ ಆರ್.ಅಶೋಕ್
ಇನ್ನು ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುವ ನಿಮ್ಮ ಪಕ್ಷದಿಂದ ಮೈಸೂರಿನಲ್ಲಿ ವಾಸು, ಬೆಂಗಳೂರಿನಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಇವರೆಲ್ಲರೂ ಪಕ್ಷ ಬಿಡುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಅಖಂಡ ಶ್ರೀನಿವಾಸ ಮೂರ್ತಿ ಅವರ ಮೇಲೆ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ ಸಾಕಷ್ಟು ನೋವಾಗಿದೆ ಎಂದು ಅವರೆಲ್ಲರೂ ದೂರು ನೀಡಿದರು. ಅವರ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿದ್ದು, ಅವರ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದರು. ಹೀಗಾಗಿ ಈ ಮೊದಲೇ ನಾವು ನಿಮಗೆ ಟಿಕೆಟ್ ನೀಡುವುದಿಲ್ಲ ಎಂದು ಅಖಂಡ ಶ್ರೀನಿವಾಸ ಅವರಿಗೆ ಹೇಳಿದ್ದೆವು.
ಹೀಗಾಗಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದರು. ಇನ್ನು ಸಮಾವೇಶ ಶುರು ಮಾಡುವುದಕ್ಕಾಗಿ ಮಧ್ಯಾಹ್ನ ಒಂದು ಗಂಟೆಗೆ ಸಾವಿರಾರು ಕಾರ್ಯಕರ್ತರು ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಿಂದ ಬಂದಿದ್ದರು. ಚಾಮುಂಡೇಶ್ವರಿ ದೇವಾಲಯದ ಬಳಿಯಿಂದ ಮೆರವಣಿಗೆ ಸಾಗಿ ಬಂದ ಕಾರ್ಯಕರ್ತರು ಸಂಜೆ ನಾಲ್ಕುವರೆ ಗಂಟೆಯವರೆಗೆ ಗಾಂಧಿ ಮೈದಾನದಲ್ಲಿಯೇ ಕಾರ್ಯಕರ್ತರು ಕಾದು ಕುಳಿತಿದ್ದರು. ಮಧ್ಯಾಹ್ನ ಎರಡುವರೆಗೆ ಸಮಾವೇಶಕ್ಕೆ ಬರಬೇಕಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಲ್ಕುವರೆಗೆ ಬಂದರು. ಆದರೂ ಗಾಂಧಿ ಮೈದಾನದಿಂದ ಜನರು ಕದಲಿರಲಿಲ್ಲ. ನಾಲ್ಕುವರೆಗೆ ಡಿ.ಕೆ. ಶಿವಕುಮಾರ್ ಬರುತ್ತಿದ್ದಂತೆ ಜನರು ಎದ್ದು ನಿಂತು ಶಿಳ್ಳೆ, ಜೈಕಾರ ಹಾಕಿ ಸ್ವಾಗತಿಸಿದರು.
ಅಧಿಕಾರಕ್ಕೆ ಅಂಟಿಕೊಂಡು ಕೂರುವವ ನಾನಲ್ಲ: ಸಚಿವ ಎಂಟಿಬಿ ನಾಗರಾಜ್
ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಆಡಳಿತ ನೋಡಿ ಜನರಿಗೆ ಸುಸ್ತಾಗಿ ಹೋಗಿದೆ. ಅವರ ಈ ದುರಾಡಳಿತವನ್ನು ಕಿತ್ತೊಗೆದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.