ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ
ಚುನಾವಣೆ ಸಮೀಪಿಸುತ್ತಿದ್ದಂತೇ ರಾಜಕೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಭೇಟಿ ಹೆಚ್ಚಾಗುತ್ತಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಿಜೆಪಿಯ ವಿರುದ್ಧ ಗುಡುಗಿದರು.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ದಾಂಡೇಲಿ (ಏ.29): ಚುನಾವಣೆ ಸಮೀಪಿಸುತ್ತಿದ್ದಂತೇ ರಾಜಕೀಯ ಪಕ್ಷಗಳ ರಾಷ್ಟ್ರೀಯ ಮುಖಂಡರು ರಾಜ್ಯಕ್ಕೆ ಭೇಟಿ ಹೆಚ್ಚಾಗುತ್ತಿದ್ದು, ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಿಜೆಪಿಯ ವಿರುದ್ಧ ಗುಡುಗಿದ್ದಲ್ಲದೇ, ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶ್‌ಪಾಂಡೆ ಪರವಾಗಿ ಮತಯಾಚನೆ ನಡೆಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು, ಉತ್ತರಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ದಾಂಡೇಲಿ ತಾಲೂಕಿನ ಡಿಎಫ್‌ಎ ಮೈದಾನದಲ್ಲಿ ಇಂದು ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ನೋಡಲೆಂದೇ ಸುಮಾರು 5-6 ಸಾವಿರ ಜನರು ಜಮಾಯಿಸಿದ್ದರು. "ಎಲ್ಲರಿಗೂ ನಮಸ್ಕಾರ" ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಿಯಾಂಕಾ ವಾದ್ರಾ, ಬಿಜೆಪಿ ವಿರುದ್ಧ ಗುಡುಗಿದ್ದಲ್ಲದೇ, ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸಿದ್ದಾರೆ. ಬಿಜೆಪಿಗೆ ಕುಟುಕಿ ಮಾತನಾಡಲು ಆರಂಭಿಸಿದ ಪ್ರಿಯಾಂಕಾ, ಇಂದು 40% ಸರಕಾರ ರಾಜ್ಯದಲ್ಲಿದ್ದು, ಜನರನ್ನು ಲೂಟಿ ಮಾಡಲಾಗುತ್ತಿದೆ. ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರಕಾರ ಜನರಿಂದ ಲೂಟಿ ಮಾಡಿದೆ. ನಾವು ಭ್ರಷ್ಟಾಚಾರ, ಲೂಟಿ ಓಪನ್ನಾಗೇ ನಡೆಸ್ತೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಬಿಜೆಪಿಯವರು ಲೂಟಿ ಮಾಡಿದ ಹಣದಿಂದ ಹಲವು ರಸ್ತೆ, ಶಿಕ್ಷಣ ಸಂಸ್ಥೆ, ಆರೋಗ್ಯ ಸಂಸ್ಥೆ ನಿರ್ಮಾಣ ಮಾಡಬಹುದಿತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ದಾಂಡೇಲಿಯಲ್ಲಿ ಎಲ್ಲಾ ಸಮುದಾಯದ ಜನರು ಒಗ್ಗಟ್ಟಾಗಿ ಬಾಳುತ್ತಿರುವುದು ಸಂತೋಷ. ಆದರೆ, ಇಂದು ದಾರಿ ತಪ್ಪಿಸುವ ರಾಜಕೀಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಯಾವ ವಿಷಯ ತರಬೇಕೆಂದು ಬಿಜೆಪಿಯವರು ಕಾಯುತ್ತಿರುತ್ತಾರೆ. ಯಾರು ಜನರ ಅಭಿವೃದ್ಧಿಗಾಗಿ ಶ್ರಮ ವಹಿಸ್ತಾರೆ, ಯಾರು ತಮ್ಮ ಸ್ವಾರ್ಥಕ್ಕಾಗಿ ಮಾತನಾಡ್ತಾರೆ ಎಂಬುದು ಎಂದು ಜನರಿಗೆ ತಿಳಿದಿದೆ. ಕರ್ನಾಟಕದ ಜನರು ಆಡಳಿತ ಚುಕ್ಕಾಣಿ ನಮಗೆ ನೀಡಿ ಎಂದು ಬಿಜೆಪಿಯವರು ಹೇಳ್ತಾರೆ. ಕಳೆದ ಮೂರುವರೆ ವರ್ಷದಿಂದ ರಾಜ್ಯದಲ್ಲಿ ಯಾರ ಸರಕಾರವಿತ್ತು..? ಎಂದು ಪ್ರಶ್ನಿಸಿದರು.ಇಂದು ಪ್ರತಿಯೊಂದರ ಬೆಲೆ ಏರಿದ್ದು, ಆಹಾರ, ಶಿಕ್ಷಣ ಪ್ರತಿಯೊಂದರ ಬೆಲೆ ಗಗನಕ್ಕೇರಿದೆ. ಸರಕಾರದ ಎರಡೂವರೆ ಲಕ್ಷ ಉದ್ಯೋಗಗಳು ಇಂದಿಗೂ ಖಾಲಿಯಿವೆ.
ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ರೈತ ಬೆಳೆಗಳಿಗೂ ಜಿಎಸ್‌ಟಿ ಕಾಟ. ಎಲ್ಲಿಯೂ ಉತ್ತಮ ಆಸ್ಪತ್ರೆಗಳನ್ನು ಕೂಡಾ ನಿರ್ಮಾಣ ಮಾಡಲಾಗಿಲ್ಲ. ಜನರಿಗೆ ಉಚಿತ ಅಕ್ಕಿ ನೀಡುವ ಯೋಜನೆ ಪ್ರಾರಂಭಿಸಿದ್ವಿ. ಆದರೆ, ಇಂದು ಕೀಳುಮಟ್ಟದ ಅಕ್ಕಿಯನ್ನು ಜನರಿಗೆ ನೀಡಲಾಗುತ್ತಿದೆ ಎಂದ ಅವರು, ಬಿಜೆಪಿ ಸರ್ಕಾರ ಜನರಿಗೆ ಸಾಕಷ್ಟು ಕೋಪ ಬರಿಸಿದ್ದಾಯ್ತು, ಬೆಲೆ ಏರಿಕೆ ಮಾಡಿದ್ದಾಯ್ತು, ಜನರನ್ನು ದಾರಿ ತಪ್ಪಿಸಿದ್ದಾಯ್ತು. ನಿಮ್ಮನ್ನು ಸಂಘರ್ಷಕ್ಕೆ ಒಳಗಾಗಿಸಿ ಇನ್ನೊಬ್ಬರು ಲಾಭ ಪಡೆಯುತ್ತಿದ್ದಾರೆ, ಎಚ್ಚೆತ್ತುಕೊಳ್ಳಿ. ಯಾರು ಮಾತು ಉಳಿಸಿಕೊಂಡಿದ್ದಾರೆ, ಯಾರು ತಪ್ಪಿದ್ದಾರೆಂದು ನೋಡಿಕೊಂಡು ಮತ ಚಲಾಯಿಸಿ. ಜನರಿಗೆ ಸರಕಾರ ಆಯ್ಕೆ ಮಾಡಲು ಇಂದು ಮತ್ತೊಂದು ಅವಕಾಶವಿದೆ. ಈ ಬಾರಿ ಜನರು ಹಾದಿ ತಪ್ಪಿದಲ್ಲಿ ಸಂಕಷ್ಟ ಪಡುವುದು ತಪ್ಪಲ್ಲ.
ಬೆಲೆಯೇರಿಕೆಯಿಂದ ಮನೆಯ ಮಹಿಳೆಯರು ಸಂಕಷ್ಟ ಪಡುತ್ತಿದ್ದಾರೆ. ಜನರ ನಡುವೆ ಜಗಳ ಮಾಡಿಸುವುದು ಸರಕಾರ ಕೆಲಸವಲ್ಲ, ಅಭಿವೃದ್ಧಿ ಮಾಡುವುದು ಕೆಲಸ ಎಂದು ಹೇಳಿದರು. ನಂದಿನಿ ಉತ್ತಮವಾಗಿಯೇ ಬೆಳೆಯುತ್ತಿದ್ದರೂ, ಗುಜರಾತಿನ ಹಾಲಿನ ಸಂಸ್ಥೆಯನ್ನು ತರಲು ಯತ್ನಿಸುತ್ತಿದ್ದಾರೆ. ಬೇಕಾದಷ್ಟು ಹಾಲು ಸಂಗ್ರಹವಾಗುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡ್ತಾರೆ. ನಮ್ಮ ಸರಕಾರವಿದ್ದಾಗ ಪ್ರತೀ ಮಕ್ಕಳಿಗೆ ಹಾಲು ನೀಡ್ತಿದ್ದೆವು, ಇಂದು ಏಕಾಏಕಿ ಏನಾಯ್ತು..? ಒಬ್ಬ ಅದಾನಿಯ ಒಂದು ದಿನದ ಆದಾಯ 16 ಕೋಟಿ ರೂ. ಆದ್ರೆ, ಒಬ್ಬ ರೈತನ ದಿನದ ಆದಾಯ 17 ರೂ. ಜನರು ನಿಮ್ಮ ಹಕ್ಕುಗಳನ್ನು ಕೇಳಬೇಕಾಗಿದೆ, ಜಗಳ ಮಾಡುವುದು ಬಿಟ್ಟು ಎಚ್ಚೆತ್ತುಕೊಳ್ಳಬೇಕಾಗಿದೆ. ಹುಲಿ ನೋಡಲು, ಚುನಾವಣೆ ಸಮಯದಲ್ಲಿ ಪ್ರಧಾನಿ ತಿರುಗಾಡ್ತಾ ಬರ್ತಾರೆ.
ಆದ್ರೆ, ಇವರ ಸರಕಾರವಿದ್ದಾಗ ಬೆಲೆಯೇರಿಕೆ, ಭ್ರಷ್ಟಾಚಾರ ನಡೆಸಲು ಬಿಡ್ತಾರೆ ಎಂದು ಕಿಡಿಕಾರಿದರು. ನಾನೇನು ಮಾಡಿಲ್ಲ, ಆದರೆ, ಇಂದಿರಾ ಗಾಂಧಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಿರಿಯರು ಇಂದಿಗೂ ನನ್ನನ್ನು ಭೇಟಿಯಾದಾಗ ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಳ್ಳುತ್ತಾರೆ. ನಾನು ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡ್ತೇನೆ, ನನ್ನಂತೆ ಜನಸಾಮಾನ್ಯರು ಕೂಡಾ ಜೀವನ ನಡೆಸ್ತಾರೆ. ಯಾರಿಂದ ಬೆಲೆ ಏರಿಕೆ ಕಡಿಮೆಯಾಗ್ತದೆ, ಭ್ರಷ್ಟಾಚಾರ ಕಡಿಮೆಯಾಗ್ತದೆ, ಉದ್ಯೋಗ, ಭವಿಷ್ಯ ದೊರೆಯುತ್ತದೆ ಎಂದು ನಿರ್ಧರಿಸಿ. ನಾರಾಯಣ ಗುರು, ಬಸವಣ್ಣ ಹುಟ್ಟಿದ ನಾಡಿನ ಜನರು ಸತ್ಯದ ಮಾರ್ಗದಲ್ಲಿ ಸಾಗಿ, ನೈಜತೆ ಅರಿತುಕೊಳ್ಳಿ. ಬಿಜೆಪಿ ಸರಕಾರ ಕರ್ನಾಟಕದಲ್ಲಿ ಮಹಿಳೆಯರಿಗಾಗಿ 24 ಯೋಜನೆಯ ಆಶ್ವಾಸನೆ ನೀಡಿ, 2 ಮಾತ್ರ ಜಾರಿಗೊಳಿಸಿದ್ದಾರೆ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.
ಕರ್ನಾಟಕವನ್ನು ಸದೃಢಗೊಳಿಸಲು ಈ ಬಾರಿ ರಾಜ್ಯದಲ್ಲಿ ಬದಲಾವಣೆ ತನ್ನಿ. ರಾಜ್ಯದಲ್ಲಿ ಬಿಜೆಪಿಯ ಲೂಟಿ ತಡೆದು ನಿಮ್ಮ ಸಂಪತ್ತು ನಿಮ್ಮ ಪಾಲಿಗೆ ಸಿಗುವಂತಾಗಬೇಕಿದೆ. ಈ ಬಾರಿ ಯಾವ ಪಕ್ಷ ಜನಪರವಾಗಿದೆ, ಯಾವುದು ವಿರುದ್ಧವಾಗಿದೆ ಎಂದು ನೋಡಿಕೊಂಡು ಮತಹಾಕಿ ಎಂದು ಹೇಳಿದ ಪ್ರಿಯಾಂಕಾ ಕರ್ನಾಟಕಕ್ಕೆ ಜೈ ಎಂದು ಮಾತು ಮುಗಿಸಿದ್ದಲ್ಲದೇ, ದೇಶ್‌ಪಾಂಡೆಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು. ಸಮಾವೇಶದಲ್ಲಿ ಮಾತನಾಡಿದ ಹಳಿಯಾಳ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶ್‌ಪಾಂಡೆ, ದಾಂಡೇಲಿ ಜನರಿಗೆ 24 ಗಂಟೆ ಕಾಳಿ ನದಿಯ ನೀರು ಪೂರೈಸುವ ಯೋಜನೆ ಜಾರಿ ತಂದಿದ್ದೇನೆ. ಈ ತಾಲೂಕು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ.
ಉಡುಪಿಯಲ್ಲಿ ಅಮಿತ್ ಶಾ ಬಿರುಸಿನ ಪ್ರಚಾರ: ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು
ಕೌಶಲ್ಯ ತರಬೇತಿ ನೀಡುವ ಶಿಕ್ಷಣ ಕೇಂದ್ರವನ್ನು ಕೂಡಾ ತೆರೆದಿದ್ದೇನೆ. ಮತ್ತೆ ಗೆದ್ದು ಬಂದಲ್ಲಿ ದಾಂಡೇಲಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇನೆ. ಮೇ 10ರಂದು ಎಲ್ಲಾ ಜನರು ನನಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಆರ್.ವಿ.ದೇಶ್‌ಪಾಂಡೆ ಮನವಿ ಮಾಡಿದರು. ಒಟ್ಟಿನಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ದಾಂಡೇಲಿಗೆ ಪ್ರಿಯಾಂಕಾ ಗಾಂಧಿ ಭೇಟಿ ಪಕ್ಷಕ್ಕೆ ಬಲ ನೀಡಿದ್ದು, ಆರ್.ವಿ. ದೇಶ್‌ಪಾಂಡೆಯ ಗೆಲುವಿನ ಭರವಸೆಯನ್ನು ಇಮ್ಮಡಿಗೊಳಿಸಿದೆ. ಮುಂದಿನ ಚುನಾವಣಾ ದಿನ ಮಾತ್ರ ಜನರು ಬದಲಾವಣೆ ಬಯಸ್ತಾರಾ ಅಥವಾ ಮತ್ತೆ ದೇಶ್‌ಪಾಂಡೆಯ ಕೈ ಹಿಡಿತಾರಾ ಅನ್ನೋದನ್ನು ಕಾದು ನೋಡಬೇಕಷ್ಟೇ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.