ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ರಾಜಧಾನಿಯ 18 ಕ್ಷೇತ್ರಗಳಲ್ಲಿ 36.6 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಬೆಂಗಳೂರು (ಮೇ.04): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ರಾಜಧಾನಿಯ 18 ಕ್ಷೇತ್ರಗಳಲ್ಲಿ 36.6 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ರೋಡ್‌ ಶೋ ಕುರಿತು ಮಾಹಿತಿ ನೀಡಿದರು.

ಪಿ.ಸಿ.ಮೋಹನ್‌ ಮಾತನಾಡಿ, ರಾಜ್ಯದ ಜನತೆ ಕಳೆದ 9 ವರ್ಷಗಳಿಂದ ತಮ್ಮ ಮೇಲೆ ಇರಿಸಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮೇ 6ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಗರದ 18 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ. ದೂರ ರೋಡ್‌ ಶೋ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 10.1 ಕಿ.ಮೀ. ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆವರೆಗೆ 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26.5 ಕಿ.ಮೀ. ದೂರ ರೋಡ್‌ ಶೋ ನಡೆಯಲಿದೆ. ಈ ರೋಡ್‌ ಶೋನಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಬಿಜೆಪಿ ಗೆದ್ದರಷ್ಟೇ ಕರ್ನಾಟಕ ನಂ.1: ಪ್ರಧಾನಿ ಮೋದಿ ಸಂಕಲ್ಪ

ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನಮ್ಮ ಮನೆ ಬಾಗಿಲ ಬಳಿ ಬರುತ್ತಿರುವುದು ಇಡೀ ಬೆಂಗಳೂರಿಗರು ಖುಷಿ ಪಡುವ ವಿಚಾರ. ಬೆಂಗಳೂರು ಬಿಜೆಪಿಯ ಭದ್ರಕೋಟೆಯಾಗಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಬೆಂಗಳೂರಿಗೆ ಉಪನಗರ ರೈಲು, ಉಪ ನಗರ ಟೌಶ್‌ ಶಿಪ್‌ ವರ್ತುಲ ರಸ್ತೆ, ಮೆಟ್ರೋ ರೈಲು ಮಾರ್ಗ 70 ಕಿ.ಮೀಗೆ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ನೀಡಿದೆ ಎಂದರು.

ನಗರದ ಮೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳನ್ನು ಸಂಸದರಾಗಿ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಹೀಗಾಗಿ ಬೆಂಗಳೂರಿನ ಜನತೆಗೆ ಕೃತಜ್ಞತೆ ಸಲ್ಲಿಸಲು ಪ್ರಧಾನಿ ನಗರಕ್ಕೆ ಬರುತ್ತಿದ್ದಾರೆ. ನೀವು ಬಂದು ಮೋದಿ ಅವರನ್ನು ಅಶೀರ್ವಾದ ಮಾಡಬಹುದು. ರೋಡ್‌ ಶೋ ವೇಳೆ ಯಾವುದೇ ಕಾರಣಕ್ಕೂ ಟ್ರಾಫಿಕ್‌ ಜಾಮ್‌ ಆಗಬಾರದು ಎಂದು ಹೇಳಿದ್ದಾರೆ. ಸಾಧ್ಯವಾದಷ್ಟುಕಡಿಮೆ ಸಮಸ್ಯೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಈ ವೇಳೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್‌.ಆರ್‌.ರಮೇಶ್‌, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್‌ ಇದ್ದರು.

ಬೆಳಗ್ಗೆ ರೋಡ್‌ ಶೋ ಸಾಗುವ ಮಾರ್ಗ: ಹಳೆ ವಿಮಾನ ನಿಲ್ದಾಣ ಜಂಕ್ಷನ್‌ ಬಳಿಯ ಸುರಂಜನ್‌ದಾಸ್‌ ರಸ್ತೆ, ಬೆಮಲ್‌ ಕಾರ್ಖಾನೆ ಜಂಕ್ಷನ್‌, ತಿಪ್ಪಸಂದ್ರ ಮುಖ್ಯ ರಸ್ತೆ, ಎಚ್‌ಎಎಲ್‌ 2ನೇ ಹಂತದ 80 ಅಡಿ ಜಂಕ್ಷನ್‌, ಸಾಯಿ ರಸ್ತೆ ಜಂಕ್ಷನ್‌, ಇಂದಿರಾನಗರ, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, ಹಳೆ ಮದ್ರಾಸ್‌ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ.

ಸಂಜೆ ರೋಡ್‌ ಶೋ ಸಾಗುವ ಮಾರ್ಗ: ಜೆ.ಪಿ.ನಗರದ ಆರ್‌ಬಿಐನಿಂದ ಶುರುವಾಗಿ ಬೊಮ್ಮನಹಳ್ಳಿ, ಜೆ.ಪಿನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್‌ ಜಾಯಿಂಟ್‌, ಮಯ್ಯಾಸ್‌, ಕರಿಸಂದ್ರ, ಸೌತ್‌ ಎಂಡ್‌ ಸರ್ಕಲ್‌, ನೆಟ್ಕಲ್ಲಪ್ಪ ಸರ್ಕಲ್‌, ಎನ್‌.ಆರ್‌.ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್‌, ಟಿ.ಆರ್‌.ಮಿಲ್‌, ಸಿರ್ಸಿ ಸರ್ಕಕ್‌, ಈಟಾ ಮಾಲ್‌, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌, ಮೋದಿ ಆಸ್ಪತ್ರೆ, ನವರಂಗ್‌ ಸರ್ಕಲ್‌, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಾರಮ್ಮ ದೇವಸ್ಥಾನ ಬಳಿ ರೋಡ್‌ ಶೋ ಅಂತ್ಯವಾಗಲಿದೆ. 

ಸಾರ್ವಜನಿಕರು ಸಂಜೆ ಈ ಮಾರ್ಗದಲ್ಲಿ ಪ್ರಧಾನಮಂತ್ರಿ ಅವರನ್ನು ನೋಡಬಹುದು. ರೋಡ್‌ ಶೋ ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಸೂಚಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

ಬೆಳಗ್ಗೆ 5 ಕ್ಷೇತ್ರಗಳಲ್ಲಿ ರೋಡ್‌ ಶೋ
*ಮಹದೇವಪುರ
*ಕೆ.ಆರ್‌.ಪುರ
*ಸಿ.ವಿ.ರಾಮನ್‌ ನಗರ
*ಶಿವಾಜಿ ನಗರ
*ಶಾಂತಿನಗರ

ಸಂಜೆ 13 ಕ್ಷೇತ್ರಗಳಲ್ಲಿ ರೋಡ್‌ ಶೋ
*ಬೆಂಗಳೂರು ದಕ್ಷಿಣ
*ಬೊಮ್ಮನಹಳ್ಳಿ
*ಜಯನಗರ
*ಪದ್ಮನಾಭನಗರ
*ಬಸವನಗುಡಿ
*ಚಿಕ್ಕಪೇಟೆ
*ಚಾಮರಾಜಪೇಟೆ
*ಗಾಂಧಿನಗರ
*ಮಹಾಲಕ್ಷ್ಮಿ ಲೇಔಟ್‌
*ವಿಜಯನಗರ
*ಗೋವಿಂದರಾಜನಗರ
*ರಾಜಾಜಿ ನಗರ
*ಮಲ್ಲೇಶ್ವರಂ