ಅಂಕೋಲಾ ಮೋದಿ ಸಮಾವೇಶ, ಬಿಜೆಪಿ ಮುಖಂಡರಿಗೆ ಕಂಟಕವಾದ ಚುನಾವಣಾ ಆಯೋಗ
ಚುನಾವಣೆ ವೇಳೆ ಪ್ರಧಾನಿ ಮೋದಿಯವರನ್ನು ಕರೆಯಿಸಿ ಸಮಾವೇಶ ಆಯೋಜಿಸಿದ್ದ ಉತ್ತರಕನ್ನಡದ ಬಿಜೆಪಿ ಮುಖಂಡರಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್
ಉತ್ತರ ಕನ್ನಡ (ಜೂ.17): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿ ಸರ್ಕಾರದ ಚುಕ್ಕಾಣಿ ಹಿಡಿದಿದೆ. ಕೇಂದ್ರದ ಘಟಾನುಘಟಿ ನಾಯಕರನ್ನು ಕರೆಸಿ ಪ್ರಚಾರ ನಡೆಸಿದ್ರೂ ಬಿಜೆಪಿ ಚುನಾವಣೆ ಗೆಲ್ಲಲಾಗದೇ ತೀವ್ರ ಮುಖಭಂಗ ಎದುರಿಸಿದೆ. ಇದೆಲ್ಲದರ ನಡುವೆ ಚುನಾವಣೆ ವೇಳೆ ಪ್ರಧಾನಿ ಮೋದಿಯವರನ್ನು ಕರೆಯಿಸಿ ಸಮಾವೇಶ ಆಯೋಜಿಸಿದ್ದ ಉತ್ತರಕನ್ನಡದ ಬಿಜೆಪಿ ಮುಖಂಡರಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.
ವಿಧಾನಸಭಾ ಚುನಾವಣೆ ಮುಗಿದು ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದ್ರೆ, ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವಂತೆ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದವರಿಗೆ ಚುನಾವಣಾ ಆಯೋಗ ಇದೀಗ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ಮೇ.3ರಂದು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು.
Karnataka Textbook Revision: ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ, ಕನ್ನಡದ 9 ಪಾಠ
ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಬಸ್‌ಗಳ ಮೂಲಕ ಜನರನ್ನು ಕರೆತಂದಿದ್ದ ಬಿಜೆಪಿ ಅಭ್ಯರ್ಥಿಗಳೂ ಕೂಡಾ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾವಾಗ ಚುನಾವಣಾ ಆಯೋಗ ಈ ಬಗ್ಗೆ ಪ್ರಶ್ನಿಸಿತ್ತೋ ಅಭ್ಯರ್ಥಿಗಳು ವೇದಿಕೆ ಕಾರ್ಯಕ್ರಮದ ಖರ್ಚನ್ನು ಮಾತ್ರ ತೋರಿಸಿದ್ದರು. ಆದರೆ, ನೂರಾರು ಬಸ್‌ಗಳಲ್ಲಿ ಜನರನ್ನು ಕರೆತಂದಿದ್ದ ಖರ್ಚನ್ನು ಚುನಾವಣಾ ಆಯೋಗ ಕೇಳಿಲಾರಂಭಿಸಿದ್ದು, ಇದು ಮುಖಂಡರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೇ, ನೀತಿಸಂಹಿತೆ ಉಲ್ಲಂಘನೆಯಡಿ ಜಿಲ್ಲೆಯ ಸುಮಾರು 200 ಬಿಜೆಪಿ ಕಾರ್ಯಕರ್ತರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಗೃಹಜ್ಯೋತಿ ನೋಂದಣಿ ಜೂನ್ 18ರಿಂದ ಆರಂಭ, ಮಾನದಂಡ ಬಿಡುಗಡೆ, ಏನೆಲ್ಲ ದಾಖಲೆಗಳು
ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶದ ವೇದಿಕೆ ಕಾರ್ಯಕ್ರಮಕ್ಕೆ 1.3 ಕೋಟಿ ರೂ. ಖರ್ಚು ಮಾಡಿದ್ದು, ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಗೆ 18 ಲಕ್ಷ ರೂ. ನಂತೆ ಚುನಾವಣಾ ಖರ್ಚು ಸೇರ್ಪಡೆಯಾಗಿದೆ. 6 ವಿಧಾನಸಭಾ ಕ್ಷೇತ್ರದಿಂದ 700ಕ್ಕೂ ಅಧಿಕ ಬಸ್‌ಗಳನ್ನು 200 ಕಾರ್ಯಕರ್ತರ ಹೆಸರಿನಲ್ಲಿ ಬುಕ್ ಮಾಡಿದ್ದು, 1.8 ಕೋಟಿ ರೂ. ಖರ್ಚನ್ನು ಆಧರಿಸಿ 200 ಮಂದಿ ಬಿಜೆಪಿ ಕಾರ್ಯಕರ್ತರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಇನ್ನು ನೆರೆಯ ಗೋವಾದಿಂದ ಸಹ ಸಾಕಷ್ಟು ಬಸ್‌ಗಳನ್ನು ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಬುಕ್ ಮಾಡಲಾಗಿದ್ದು, ಈ ಕುರಿತು ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೇ, ಬಿಜೆಪಿ ಅಭ್ಯರ್ಥಿಗಳು ಅಮಾಯಕ ಕಾರ್ಯಕರ್ತರ ಮೇಲೆ ತಪ್ಪು ಹೊರೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಮುಗಿದ ಬಳಿಕ ಪ್ರಚಾರದ ಲೆಕ್ಕಾಚಾರ ಇದೀಗ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದು, ಈ ಸಂಬಂಧ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.