ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಗೆ ರಾಜಕೀಯವಾಗಿ ತಟಸ್ಥವಾಗಿದ್ದ ಹಿರಿಯ ರಾಜಕಾರಣಿ ಪಿ.ಜಿ.ಆರ್‌. ಸಿಂಧ್ಯ ಅವರು ಕಾಂಗ್ರೆಸ್‌ ಪಕ್ಷದಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ ಕಂಡು ಬಂದಿದೆ. 

ಬೆಂಗಳೂರು (ಮಾ.31): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚಿನ ಅವಧಿಗೆ ರಾಜಕೀಯವಾಗಿ ತಟಸ್ಥವಾಗಿದ್ದ ಹಿರಿಯ ರಾಜಕಾರಣಿ ಪಿ.ಜಿ.ಆರ್‌. ಸಿಂಧ್ಯ ಅವರು ಕಾಂಗ್ರೆಸ್‌ ಪಕ್ಷದಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಸಾಧ್ಯತೆ ಕಂಡು ಬಂದಿದೆ. ಬಿಜೆಪಿಯ ಪ್ರಭಾವಿ ಸಚಿವ ಆರ್‌.ಅಶೋಕ್‌ ಅವರ ಸಮ್ಮುಖ ಸಿಂಧ್ಯ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ ನಾಯಕತ್ವ ಚಿಂತನೆ ನಡೆಸಿದೆ ಎನ್ನಲಾಗಿದೆ. ಗುರುವಾರ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಪದ್ಮನಾಭ ನಗರದಲ್ಲಿ ಅಶೋಕ್‌ ವಿರುದ್ಧ ಸಿಂಧ್ಯ ಅವರನ್ನು ಕಣಕ್ಕೆ ಇಳಿಸುವ ಪ್ರಸ್ತಾಪವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ ಎನ್ನಲಾಗಿದೆ.

ಶಿವಕುಮಾರ್‌ ಅವರ ಪ್ರಸ್ತಾಪಕ್ಕೆ ಸಭೆಯಲ್ಲಿ ಉಳಿದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಬಹುತೇಕ ಪದ್ಮನಾಭ ನಗರ ಕ್ಷೇತ್ರಕ್ಕೆ ಸಿಂಧ್ಯ ಅವರ ಒಂಟಿ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬೆಳವಣಿಗೆಗೆ ಪೂರಕವಾಗಿ ಇತ್ತೀಚೆಗೆ ಸಿಂಧ್ಯ ಅವರ ಪುತ್ರಿಗೆ ಪದ್ಮನಾಭನಗರ ಕ್ಷೇತ್ರದ ಸಂಯೋಜಕ ಜವಾಬ್ದಾರಿಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕ್‌ ವಿರುದ್ಧ ಸಿಂಧ್ಯ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಡಿಕೆಶಿಯಿಂದ ಬಿಜೆಪಿ ಶಾಸಕರಿಗೆ ಫೋನ್‌ ಕರೆ: ಸಿಎಂ ಬೊಮ್ಮಾಯಿ

ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಆಗದಷ್ಟು ಜನ ಬರುತ್ತಿದ್ದಾರೆ: ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲು ಸಾಕಷ್ಟುಶಾಸಕರು ಸಿದ್ಧರಿದ್ದಾರೆ. ಅವರಿಗೆ ಸ್ಥಳಾವಕಾಶ ಕಲ್ಪಿಸಲಾಗದಷ್ಟುಜನ ಪಕ್ಷಕ್ಕೆ ಬರುತ್ತಿದ್ದಾರೆ. ಹೀಗಾಗಿ ನಮಗೆ ಅನುಕೂಲ ಆಗುವ ಕಡೆ ಮಾತ್ರ ಬಿಜೆಪಿಯವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ. ಶಿವಕುಮಾರ್‌ ಬಿಜೆಪಿ ಶಾಸಕರು, ಸಚಿವರಿಗೆ ದೂರವಾಣಿ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದರಿಂದ ತಾವು ಮುಖ್ಯಮಂತ್ರಿ ಆದಿರಿ ಎಂಬುದನ್ನು ಬೊಮ್ಮಾಯಿ ಅವರು ನೆನಪು ಮಾಡಿಕೊಳ್ಳಬೇಕು. ನಿಮ್ಮ ಪಕ್ಷಕ್ಕೆ ಬಹುಮತ ಬಂದಿತ್ತಾ? ನಮ್ಮ ಶಾಸಕರೇ ಬಿಜೆಪಿಗೆ ಹೋಗಿದ್ದು ತಾನೇ? ಇನ್ನು ಮುಖ್ಯಮಂತ್ರಿಗಳು ಸಹ ಬೇರೆ ಪಕ್ಷದಿಂದ ಬಿಜೆಪಿಗೆ ಹೋದವರು ತಾನೇ ಎಂದು ಪ್ರಶ್ನಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ವಿ.ಸೋಮಣ್ಣ ಅವರು ಪಕ್ಷಕ್ಕೆ ಬರುವುದರಿಂದ ನಮಗೆ ಯಾವುದೇ ಲಾಭ ಉಂಟಾಗುವುದಿಲ್ಲ. ಹೀಗಾಗಿ ಅವರು ನಮ್ಮ ಪಕ್ಷಕ್ಕೆ ಬೇಕಾಗಿಲ್ಲ ಎಂದು ಹೇಳಿದರು.

ಬಿಜೆಪಿಯವರಿಗೆ ಭಯ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರ, ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು? ಡಬಲ್ ಎಂಜಿನ್‌ ಸರ್ಕಾರ ಕೆಲಸ ಮಾಡಿದ್ದರೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಇಲ್ಲಿಗೆ ಕರೆಸಿ ತಾಲೂಕು, ಹೋಬಳಿ ಮಟ್ಟದಲ್ಲಿ ತಿರುಗಿಸುತ್ತಿದ್ದರು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ ಮೇಲೆ ಅಮಿತ್‌ ಶಾ ಹಾಗೂ ಇತರ ನಾಯಕರು ಶಾಸಕರು ಮಂತ್ರಿಗಳ ಮನೆ ಮನೆಗೆ ತಿರುಗುತ್ತಿದ್ದಾರೆ. 

ಮೇ 10ಕ್ಕೆ ಬರಲಿದೆ ಕಾಂಗ್ರೆಸ್‌, ತರಲಿದೆ ಪ್ರಗತಿ: ಡಿ.ಕೆ.ಶಿವಕುಮಾರ್‌

ಈ ಹಿಂದೆ ಎಂದಾದರೂ ಈ ರೀತಿ ತಿರುಗಿದ್ದರಾ? ಅವರಲ್ಲಿರುವ ಭಯ ನಿಮ್ಮ ಕ್ಯಾಮೆರಾಗಳಲ್ಲಿ ಕಾಣುತ್ತಿದೆ ಎಂದು ತಿರುಗೇಟು ನೀಡಿದರು. ರಾಜ್ಯದ ಜನ ನಿಮ್ಮ ಗ್ಯಾರಂಟಿಗೆ ಮತ ಹಾಕಬೇಕಾ, ಬಿಜೆಪಿಯ ಅಭಿವೃದ್ಧಿ ಭರವಸೆಗೆ ಮತ ಹಾಕಬೇಕಾ ಎಂಬ ಪ್ರಶ್ನೆಗೆ, ರಾಜ್ಯದ ಜನ ಈ ಸರ್ಕಾರದ 40% ಕಮಿಷನ್‌ ಭ್ರಷ್ಟಾಚಾರ ನಿರ್ಮೂಲನೆಗೆ, ಜನರ ನೋವಿಗೆ ಪರಿಹಾರಕ್ಕೆ, ಜನರ ಜೇಬು ಪಿಕ್‌ ಪಾಕೆಟ್‌ ಆಗುತ್ತಿರುವುದನ್ನು ನಿಲ್ಲಿಸಲು ಜನ ಮೇ 10ರಂದು ಮತ ಚಲಾಯಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್‌ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದರು.