ಕೇವಲ ಮತದಾನದ ದಿನವಲ್ಲ, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಡಿದೋಡಿಸುವ ಪವಿತ್ರವಾದ ದಿನ. ಫೇಲಾದ ಎರಡೂ ಎಂಜಿನ್‌ಗಳ ಬದಲಿಗೆ ಜನರೇ ಹೊಸ ಎಂಜಿನ್‌ ನಿರ್ಮಾಣ ಮಾಡುವ ದಿನ. ಬರಲಿದೆ ಕಾಂಗ್ರೆಸ್‌, ತರಲಿದೆ ಪ್ರಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  

ಬೆಂಗಳೂರು (ಮಾ.30): ಮೇ 10 ಕೇವಲ ಮತದಾನದ ದಿನವಲ್ಲ, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಡಿದೋಡಿಸುವ ಪವಿತ್ರವಾದ ದಿನ. ಫೇಲಾದ ಎರಡೂ ಎಂಜಿನ್‌ಗಳ ಬದಲಿಗೆ ಜನರೇ ಹೊಸ ಎಂಜಿನ್‌ ನಿರ್ಮಾಣ ಮಾಡುವ ದಿನ. ಬರಲಿದೆ ಕಾಂಗ್ರೆಸ್‌, ತರಲಿದೆ ಪ್ರಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 10 ಅಭಿವೃದ್ಧಿ ಕರ್ನಾಟಕ ಕಟ್ಟುವ ದಿನ. ಈ ದಿನ ನವ ಕರ್ನಾಟಕಕ್ಕೆ ಹೊಸ ದಿಕ್ಕು ನೀಡುವ ದಿನ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವ ಹಾಗೂ ಜನರ ಭವಿಷ್ಯ ನಿರ್ಮಾಣ ಮಾಡುವ ದಿನ ಎಂದು ಹೇಳಿದರು.

ಈ ಹಿಂದೆಯೇ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟುಸಾಧ್ಯವೋ ಅಷ್ಟುಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟುದಿನ ಸಮಯ ತಳ್ಳಿದ್ದವು. ರಾಜ್ಯದಲ್ಲಿ ಒಂದು ಹಂತದ ಚುನಾವಣೆ ನಡೆಸುವ ಆಯೋಗದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಆಯೋಗ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ತರಲು ನಿರ್ಧರಿಸಿದ್ದು, ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಖಚಿತ: ಶಾಸಕ ಸಿ.ಎಸ್‌.ಪುಟ್ಟರಾಜು

ಬಿಜೆಪಿಯವರಿಗೆ ಭಯ: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರ, ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬರುವುದಾಗಿದ್ದರೆ, ಮೋದಿ ಅವರನ್ನು ಯಾಕೆ ವಾರಕ್ಕೊಮ್ಮೆ ರಾಜ್ಯಕ್ಕೆ ಕರೆಸುತ್ತಿದ್ದರು? ಡಬಲ… ಎಂಜಿನ್‌ ಸರ್ಕಾರ ಕೆಲಸ ಮಾಡಿದ್ದರೆ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಇಲ್ಲಿಗೆ ಕರೆಸಿ ತಾಲೂಕು, ಹೋಬಳಿ ಮಟ್ಟದಲ್ಲಿ ತಿರುಗಿಸುತ್ತಿದ್ದರು. ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ ಮೇಲೆ ಅಮಿತ್‌ ಶಾ ಹಾಗೂ ಇತರ ನಾಯಕರು ಶಾಸಕರು ಮಂತ್ರಿಗಳ ಮನೆ ಮನೆಗೆ ತಿರುಗುತ್ತಿದ್ದಾರೆ. ಈ ಹಿಂದೆ ಎಂದಾದರೂ ಈ ರೀತಿ ತಿರುಗಿದ್ದರಾ? ಅವರಲ್ಲಿರುವ ಭಯ ನಿಮ್ಮ ಕ್ಯಾಮೆರಾಗಳಲ್ಲಿ ಕಾಣುತ್ತಿದೆ ಎಂದು ತಿರುಗೇಟು ನೀಡಿದರು.

ರಾಜ್ಯದ ಜನ ನಿಮ್ಮ ಗ್ಯಾರಂಟಿಗೆ ಮತ ಹಾಕಬೇಕಾ, ಬಿಜೆಪಿಯ ಅಭಿವೃದ್ಧಿ ಭರವಸೆಗೆ ಮತ ಹಾಕಬೇಕಾ ಎಂಬ ಪ್ರಶ್ನೆಗೆ, ರಾಜ್ಯದ ಜನ ಈ ಸರ್ಕಾರದ 40% ಕಮಿಷನ್‌ ಭ್ರಷ್ಟಾಚಾರ ನಿರ್ಮೂಲನೆಗೆ, ಜನರ ನೋವಿಗೆ ಪರಿಹಾರಕ್ಕೆ, ಜನರ ಜೇಬು ಪಿಕ್‌ ಪಾಕೆಟ್‌ ಆಗುತ್ತಿರುವುದನ್ನು ನಿಲ್ಲಿಸಲು ಜನ ಮೇ 10ರಂದು ಮತ ಚಲಾಯಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್‌ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ: ಸಿ.ಟಿ.ರವಿ

ಪಕ್ಷದ ಬೂತ್‌ ಏಜೆಂಟರಿಗೆ ತರಬೇತಿ: ಗುಜರಾತ್‌ ಚುನಾವಣೆಯಲ್ಲಿ ಬಳಸಿದ ಇವಿಎಂ ನಮ್ಮಲ್ಲಿ ಬಳಸದಂತೆ ಮನವಿ ಮಾಡಿದ್ದೆವು. ಆಯೋಗ ನಮ್ಮನ್ನು ಸಭೆಗೆ ಕರೆದಿದೆ. ಚುನಾವಣೆ ದಿನ ಮತದಾನ ಆರಂಭವಾಗುವ ಮೊದಲು ಪಕ್ಷದ ಬೂತ್‌ ಏಜೆಂಟರಿಗೆ 50 ಮತ ಹಾಕಿ ಪ್ರಯೋಗ ಮಾಡಿ ಮತದಾನ ಆರಂಭಿಸುತ್ತಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತೇನೆ. ಆಯೋಗದ ಈ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.