Karnataka election 2023: ನನ್ನ ಕೊನೆಯ ಚುನಾವಣೆ ಚನ್ನಪಟ್ಟಣದಿಂದ : ಎಚ್ಡಿಕೆ
ಚನ್ನಪಟ್ಟಣ ಕ್ಷೇತ್ರದಿಂದ ಇದು ನನ್ನ ಕೊನೆಯ ವಿಧಾನಸಭೆ ಚುನಾವಣೆಯಾಗಿದ್ದು, 2028ರ ವಿಧಾನಸಭೆ ಚುನಾವಣೆಗೆ ನಿಮ್ಮಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಅವರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.
ಚನ್ನಪಟ್ಟಣ (ಮಾ.1) : ಚನ್ನಪಟ್ಟಣ ಕ್ಷೇತ್ರದಿಂದ ಇದು ನನ್ನ ಕೊನೆಯ ವಿಧಾನಸಭೆ ಚುನಾವಣೆಯಾಗಿದ್ದು, 2028ರ ವಿಧಾನಸಭೆ ಚುನಾವಣೆಗೆ ನಿಮ್ಮಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಅವರನ್ನೇ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಘೋಷಿಸಿದರು.
ತಾಲೂಕಿನ ದೊಡ್ಡಮಳೂರು ಗ್ರಾಮ(Doddamaluru village)ದ ಬಳಿ ಹಮ್ಮಿಕೊಂಡಿದ್ದ ಬೊಂಬೆನಾಡಿನ ಬಮೂಲ್ ಉತ್ಸವ(Bamul festival) ಉದ್ಘಾಟಿಸಿ(Inauguration) ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ನೊಂದಿದ್ದ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು, ಪಕ್ಷ ಉಳಿಸಬೇಕೆಂಬ ಉದ್ದೇಶದಿಂದ ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ(Channapattana) ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದೆ. ನಿಮ್ಮಲ್ಲಿ ಒಬ್ಬರು ಬಲಿಷ್ಠರಾಗಿ ಬೆಳೆದಿದ್ದರೆ ಈ ಬಾರಿಯೇ ಕ್ಷೇತ್ರ ಬಿಟ್ಟುಕೊಡುತ್ತಿದ್ದೆ. ಆದರೆ ಅಂತಹ ಪರಿಸ್ಥಿತಿ ಇಲ್ಲದ ಕಾರಣ ಕೊನೆಯ ಬಾರಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಿದ್ದೇನೆ. ಮುಂದಿನ ಚುನಾವಣೆ(Karnataka assembly election)ಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನೇ ನಿಲ್ಲಿಸುತ್ತೇನೆ ಎಂದರು.
ಚಿಕ್ಕಮಗಳೂರಿನ ಮಹಾನುಭಾವ ನನ್ನ ಕುಟುಂಬದ ಬಗ್ಗೆ ಚರ್ಚೆ ನಡೆಸುತ್ತಾನೆ: ಹೆಚ್.ಡಿ.ಕೆ ವಾಗ್ದಾಳಿ
ಚನ್ನಪಟ್ಟಣದಿಂದಲೇ ಸ್ಪರ್ಧೆ:
ನಿಮ್ಮನ್ನು ಕಟ್ಟಿಹಾಕಲು ವಿರೋಧ ಪಕ್ಷಗಳು ಷಡ್ಯಂತ್ರ ನಡೆಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕೆ.ಆರ್.ಪೇಟೆ(KR Pete)ಯಿಂದ ಸ್ಪರ್ಧಿಸುವಂತೆ ಮಂಡ್ಯ ಜಿಲ್ಲೆಯ ಮುಖಂಡರು ಒತ್ತಡ ಹೇರಿದರು. ಅದೇ ರೀತಿ ನವಿಲುಗುಂದದಲ್ಲಿ ಸ್ಪರ್ಧಿಸಿದರೆ 8ರಿಂದ 10 ಕ್ಷೇತ್ರಗಳಲ್ಲಿ ಅನುಕೂಲವಾಗಲಿದ್ದು, ನೀವು ಇಲ್ಲಿಂದ ನಾಮಪತ್ರ ಸಲ್ಲಿಸಿ ಹೋಗಿ ನಾವು ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತೇವೆ ಎಂದು ಅಲ್ಲಿನ ಮುಖಂಡರ ಹೇಳಿದರು. ಆದರೆ, ಪ್ರತಿ ಬಾರಿ ಕ್ಷೇತ್ರ ಬದಲಿಸಲು ನಾನೇನು ಟೂರಿಂಗ್ ಟಾಕೀಸ್ ಅಲ್ಲ ಎಂದು ಅವರಿಗೆ ತಿಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿ ನೋಡಿ ಜನ ಬೇಸತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ 40% ಭ್ರಷ್ಟಾಚಾರದ ಸರ್ಕಾರವಾಗಿದ್ದರೆ, ಕಾಂಗ್ರೆಸ್ ರಿಡೂ ಹಗರಣದ ಪಕ್ಷವಾಗಿದೆ. ಜನ ಎರಡು ಪಕ್ಷಗಳ ದುರಾಡಳಿತ ನೋಡಿದ್ದಾರೆ. ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದಿನ ಚುನಾವಣೆಯ ನಂತರ ಆಡಳಿತ ನಡೆಸುವ ಪೆನ್ ನನಗೆ ಸಿಗುವ ವಿಶ್ವಾಸವಿದೆ ಎಂದರು.
ಅಧಿಕಾರದಾಟ ನೋಡಿದ್ದೇನೆ:
ಬಮೂಲ್ ಉತ್ಸವಕ್ಕೆ ಸಂಬಂಧಿಸಿದಂತೆ ಬಮೂಲ್ ಅಧಿಕಾರಿಗಳು ಹಾಗೂ ಪೊಲೀಸರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಎಆರ್‌ಗಳು, ಡಿಆರ್‌ಗಳು ಯಾವ ರೀತಿ ಅಧಿಕಾರ ನಡೆಸುತ್ತಾರೆ ಗೊತ್ತಿದೆ. ಇನ್ನೆರಡು ತಿಂಗಳು ಮಾತ್ರ ನಿಮ್ಮ ಕಳ್ಳಾಟ. ನನ್ನ ಸರ್ಕಾರ ಬಂದ ನಂತರ ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲಿದ್ದೇನೆಂದರು.
ನನ್ನ ವಿರುದ್ಧ ಅಪಪ್ರಚಾರ ಮಾಡುವ ಇಲ್ಲಿನ ಮಾಜಿ ಶಾಸಕರು ತಮ್ಮ 20 ವರ್ಷಗಳ ಅವಧಿಯಲ್ಲಿ ಏನು ಮಾಡಿದ್ದಾರೆ?. ಇವತ್ತು ಸ್ವಾಭಿಮಾನಿ ನಡಿಗೆ ನಡೆಸುತ್ತಿರುವ ಅವರು, ಈ ಹಿಂದೆ ರಾಸುಗಳಿಗೆ ಕಾಲು ಬಾಯಿ ಜ್ವರ ಬಂದಾಗ ಎಲ್ಲಿಗೆ ಹೋಗಿದ್ದರು? ಕೊರೋನಾ ಸಂಕಷ್ಟದಲ್ಲಿ ಅವರು ಎಲ್ಲಿದ್ದರು ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ 20 ಕೆರೆಗಳನ್ನು ತುಂಬಿಸಿ ಆಧುನಿಕ ಭಗೀರಥ ಎಂದು ಬಿಂಬಿಸಿಕೊಂಡರು. ದೇವೇಗೌಡರು ಇಗ್ಗಲೂರು ಬ್ಯಾರೇಜ್ ನಿರ್ಮಿಸದಿದ್ದರೆ ನೀರಾವರಿ ಯೋಜನೆ ಹೇಗೆ ಅನುಷ್ಠಾನಗೊಳಿಸಲು ಆಗುತ್ತಿತ್ತು? ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ಏನನ್ನು ಮಾಡಲಿಲ್ಲ. ಎಲ್ಲ ನಾನೇ ಮಾಡಿದ್ದೆಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಕ್ಷೇತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಸಲ್ಲಿಸಲು ನಾನೆಂದು ಕಮಿಷನ್ ಕೇಳಲಿಲ್ಲ. ಶಾಸಕರಾಗಿದ್ದಾಗ ಅವರು ಅಭಿವೃದ್ಧಿ ಮಾಡಿದ್ದರೆ ಇಂದು ಸೀರೆ ಹಂಚುವ ಪ್ರಮೇಯ ಬರುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಸಮಸ್ಯೆ ಅವರ ಅವಧಿಯ ಕರ್ಮಫಲ. ಕೆಲ ಕ್ರಿಕೆಟ್ ಬೆಟ್ಟಿಂಗ್‌ನವರು, ಲಾಟರಿ ದಂಧೆಕೋರರ ಜತೆ ಸೇರಿಕೊಂಡು ರೈತಪರ ಆಡಳಿತ ನೀಡುತ್ತಿದ್ದ ನನ್ನ ಸರ್ಕಾರವನ್ನು ತೆಗೆದರು. ಇಲ್ಲದಿದ್ದಲ್ಲಿ ಬಸ್ ನಿಲ್ದಾಣದ ಸಮಸ್ಯೆ, ಎಲೇಕೇರಿ ಸೇತುವೆ ನಿರ್ಮಾಣ ಕಾರ್ಯವೆಲ್ಲ ಮುಗಿದು, ತಾಲೂಕಿನಲ್ಲಿ ಇನ್ನಷ್ಟುಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದವು ಎಂದರು.
ಕಳೆದ ಚುನಾವಣೆ ಸಂದರ್ಭದಲ್ಲಿ ನಾನು ಎಲ್ಲಿಯೂ ಸ್ತೀಶಕ್ತಿ ಮನ್ನಾ ಭರವಸೆ ನೀಡಿರಲಿಲ್ಲ. ಆದರೂ ನನ್ನ ಮೇಲೆ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಪಂಚರತ್ನ ಯಾತ್ರೆ ವೇಳೆ ಮಹಿಳೆಯರ ಅಳಲು ಕೇಳಿದ ಮೇಲೆ ಅವರ ಸಂಕಷ್ಟದ ಅರಿವಾಗಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಆದಿಚುಂಚನಗಿರಿ ಬೆಂಗಳೂರು ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಂ.ಸಿ.ಅಶ್ವತ್‌್ಥ, ಬಮೂಲ್ ಉಪಾಧ್ಯಕ್ಷ ಮಂಜುನಾಥ್, ಕನಕಪುರದ ಬಮೂಲ್ ನಿರ್ದೇಶಕ ರಾಜ್ ಕುಮಾರ್, ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ಕುಕ್ಕೂರುದೊಡ್ಡಿ ಜಯರಾಮು, ವಡ್ಡರಹಳ್ಳಿ ರಾಜಣ್ಣ, ಎಂ.ಸಿ.ಕರಿಯಪ್ಪ, ಗೋಂವಿಂದಹಳ್ಳಿ ನಾಗರಾಜು ಮತ್ತಿತರರಿದ್ದರು.
ಎಚ್‌ಡಿಕೆ ಯೂಟರ್ನ್!
ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದ ವೇದಿಕೆ ಕಾರ್ಯಕ್ರಮದಲ್ಲಿ 2023ರ ವಿಧಾನಸಭೆ ಚುನಾವಣೆ ಬಹುಶ ತಮ್ಮ ಕೊನೆಯ ಚುನಾವಣೆಯಾಗಬಹುದು ಎಂದು ಹೇಳಿಕೆ ನೀಡಿ ಆಶ್ಚರ್ಯ ಮೂಡಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನಂತರ ಮಾಧ್ಯಮದವರೊಂದಿಗೆ ಮಾತನಾಡುವಾಗ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಮಾತ್ರ ಇದು ನನ್ನ ಕೊನೆಯ ಚುನಾವಣೆ. ನಾನೇನು ರಾಜಕೀಯಕ್ಕೆ ವಿದಾಯ ಹೇಳಿಲ್ಲ ಎನ್ನುವ ಮೂಲಕ ಯೂಟರ್ನ್ ಹೊಡೆದರು.
ವೇದಿಕೆಯಲ್ಲಿ ಹೇಳಿದ್ದೇನು:
ಉತ್ಸವದ ವೇದಿಕೆ ಕಾರ್ಯಕ್ರಮದಲ್ಲಿ 2023ರ ಚುನಾವಣೆ ನನ್ನ ಕೊನೆಯ ವಿಧಾನಸಭೆ ಚುನಾವಣೆ. 2028ಕ್ಕೆ ಚನ್ನಪಟ್ಟಣದಿಂದ ನಿಮ್ಮಲ್ಲೇ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ ಕುಮಾರಸ್ವಾಮಿ, 2023ರ ವಿಧಾನಸಭೆ ಚುನಾವಣೆ ಬಹುಶಃ ನನ್ನ ಕೊನೆಯ ಚುನಾವಣೆ ಆಗಬಹುದು. ಇದರ ಕುರಿತು ಈಗ ಏನು ಹೇಳಲ್ಲ. ಅದು ದೈವೇಚ್ಛೆ, ಆ ಭಗವಂತ ಏನು ಬರೆದಿದ್ದಾನೋ ಮುಂದಿನ ದಿನಗಳಲ್ಲಿ ನೀವು ನೋಡಲಿದ್ದೀರಿ. ಮುಂದೆ ಈ ಕುಮಾರಸ್ವಾಮಿ ಶಕ್ತಿ ಏನೆಂಬುದು ನಿಮಗೆ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಸುದ್ದಿಗಾರರಿಗೆ ಹೇಳಿದ್ದೇನು:
ಮಾಧ್ಯಮದವರೊಂದಿಗೆ ಮಾತನಾಡುವಾಗ ಯೂಟರ್ನ್ ಹೊಡೆದ ಅವರು, ನಾನು ರಾಜಕೀಯ ವಿದಾಯ ಹೇಳುತ್ತಿಲ್ಲ. 2028ರ ವಿಧಾನಸಭೆಗೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸುತ್ತೇನೆ. ಆಗ ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಬಹುದು. ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ. 2028ಕ್ಕೆ ಚನ್ನಪಟ್ಟಣದಿಂದ ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲಿಸುತ್ತೇನೆ. ಚನ್ನಪಟ್ಟಣದಲ್ಲಿ ಮಾತ್ರ 2023ಕ್ಕೆ ಕೊನೆಯ ಸ್ಪರ್ಧೆ. ಈ ಸಲ ಐದು ವರ್ಷದ ಸರ್ಕಾರ ತಂದು ಜನತೆಯ ಬದುಕಿಗೆ ಭರವಸೆ ಈಡೇರಿಸುತ್ತೇನೆ. ನಂತರ ನಾನು ರೆಸ್ಟ್ ತೆಗೆದುಕೊಳ್ಳಬೇಕಲ್ಲಾ. ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಅಂದೆ ಅಷ್ಟೇ ಎನ್ನುವ ಮೂಲಕ ವ್ಯತಿರಿಕ್ತ ಹೇಳಿಕೆ ನೀಡಿದರು.