ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿದ್ದು, ಬಿಜೆಪಿ ನಾಯಕರು ವಾಮಮಾರ್ಗದಿಂದ ಅವರ ಸ್ಪರ್ಧೆ ತಡೆಯುವ ಅನುಮಾನ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ವರಿಷ್ಠರ ಆದೇಶದಂತೆ ನಾಮಪತ್ರ ಸಲ್ಲಿಸಿರುವುದಾಗಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಕನಕಪುರ (ಏ.21): ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿದ್ದು, ಬಿಜೆಪಿ ನಾಯಕರು ವಾಮಮಾರ್ಗದಿಂದ ಅವರ ಸ್ಪರ್ಧೆ ತಡೆಯುವ ಅನುಮಾನ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ವರಿಷ್ಠರ ಆದೇಶದಂತೆ ನಾಮಪತ್ರ ಸಲ್ಲಿಸಿರುವುದಾಗಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ನಾಮಪತ್ರ ಅನೂರ್ಜಿತಗೊಳಿಸಲು ಕೆಲ ಕುತಂತ್ರಗಳು ನಡೆಯುತ್ತಿರುವುದು ಗೊತ್ತಾಗಿದೆ. ಅದರಲ್ಲೂ ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಮಣಿಸಲು ಯೋಜನೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಶಿವಕುಮಾರ್ ಅವರಿಗೆ ದಿನನಿತ್ಯ ಕಿರುಕುಳ ನೀಡುತ್ತಿದೆ. ಅವರನ್ನು ಬಂಧಿಸುವುದು, ನೋಟಿಸ್ ನೀಡುವುದನ್ನು ಎಲ್ಲರೂ ನೋಡಿದ್ದಾರೆ. ನಾಮಪತ್ರ ಸಲ್ಲಿಸುವ ಹಿಂದಿನ ದಿನವೂ ಚೆನ್ನೈನಲ್ಲಿರುವ ಆದಾಯ ತೆರಿಗೆ ಇಲಾಖೆಯಿಂದ ಖುದ್ದು ಹಾಜರಾಗುವಂತೆ ನೋಟಿಸ್ ನೀಡಿತ್ತು. ನಾವು ಚುನಾವಣೆ ಇರುವುದರಿಂದ ಒಂದು ತಿಂಗಳ ಕಾಲಾವಕಾಶ ಕೇಳಿದ್ದೇವೆ. ಅನವಶ್ಯಕವಾಗಿ ನಾವು ಬರುವುದಿಲ್ಲ ಎಂದು ಹೇಳಿದ್ದೇವೆ. ನಮ್ಮ ಮೇಲಿನ ಕೇಸ್‌ಗಳ ಮೇಲೆ ಎಲ್ಲೆಡೆ ತಡೆಯಾಜ್ಞೆಗಳು ಇದೆ.
ವರುಣಾದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಸಚಿವ ಅಶ್ವತ್ಥನಾರಾಯಣ ಭವಿಷ್ಯ
ಅಧಿಕಾರ ದುರುಪಯೋಗಪಡಿಸಿಕೊಂಡು ಬಿಜೆಪಿಯವರು ಶಿವಕುಮಾರ್ರನ್ನು ಟಾರ್ಗೆರ್ಟ್ ಮಾಡುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಕಿಡಿಕಾರಿದರು. ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಯನ್ನು ನಮ್ಮ ವಿರುದ್ಧ ಕಣಕ್ಕಿಳಿಸಿರುವುದು, ಕೇಂದ್ರ ಬಿಜೆಪಿ ನಾಯಕರೇ ಈ ಬಾರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದಲ್ಲಿ ಟಕ್ಕರ್ ನೀಡುತ್ತೇವೆಂದು ಹೇಳಿರುವುದು ನೋಡಿದರೆ ಯಾವ ಮಾರ್ಗದಿಂದಾದರೂ ಶಿವಕುಮಾರ್ ಸ್ಪರ್ಧೆ ನಡೆಸದಂತೆ ತಡೆವೊಡ್ಡುವ ಅನುಮಾನ ಬಂದ ಹಿನ್ನೆಲೆಯಲ್ಲಿ ವರಿಷ್ಠರ ಸೂಚನೆಯಂತೆ ನಾಮಪತ್ರ ಸಲ್ಲಿಸಿದ್ದಾಗಿ ತಿಳಿಸಿದರು.
ಆಶೀರ್ವಾದ ಮಾಡಲು ಪ್ರಧಾನಿ ಮೋದಿ ದೇವರಲ್ಲ: ಸಿದ್ದರಾಮಯ್ಯ
ಚುನಾವಣಾ ಆಯೋಗವೂ ಸರ್ಕಾರದ ಅಧೀನದಲ್ಲಿ ಬರಲಿದ್ದು, ಕೆಲ ವರ್ಷಗಳಿಂದ ಸರ್ಕಾರದ ಸಂಸ್ಥೆಗಳಾದ ಸಿಬಿಐ, ಐಟಿ ಯಾವ ರೀತಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿವೆ ಎಂದು ದೇಶದ ಜನ ನೋಡುತ್ತಿದ್ದಾರೆ. ನಮ್ಮ ಪಕ್ಷದ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ನಾನು ನಾಮಪತ್ರ ಸಲ್ಲಿಸಿದ್ದು, ಬಿಜೆಪಿಯವರು ಏನೇ ಕುತಂತ್ರ ನಡೆಸಿದರೂ ನಾವು ಎದುರಿಸಲು ಸಿದ್ಧವಿರುವುದಾಗಿ ಸುರೇಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
