ಕರ್ನಾಟಕದ ಜನ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು, ಬಿಜೆಪಿಗೆ ಮತ ನೀಡಬೇಕು ಎಂಬ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ. ನಡ್ಡಾ ಅವರ ಹೇಳಿಕೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರು (ಏ.21): ಕರ್ನಾಟಕದ ಜನ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು, ಬಿಜೆಪಿಗೆ ಮತ ನೀಡಬೇಕು ಎಂಬ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ. ನಡ್ಡಾ ಅವರ ಹೇಳಿಕೆಗೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಜನಾರ್ದನರು. ರಾಜ್ಯದ ಜನತೆಗೆ ಆಶೀರ್ವಾದ ನೀಡಲು ನರೇಂದ್ರ ಮೋದಿ ದೇವರಲ್ಲ’ ಎಂದು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜೆ.ಪಿ. ನಡ್ಡಾ ಅವರೇ, ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ರು. ಕಳೆದುಕೊಂಡಿದೆ. ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರುಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸು ನೀಡುವುದು ಮೋದಿಯವರ ಆಶೀರ್ವಾದವೇ ಶಾಪವೇ?’ ಎಂದು ಪ್ರಶ್ನಿಸಿದ್ದಾರೆ.

‘ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಸರ್ಕಾರದ ಸಾಲ 2.40 ಲಕ್ಷ ಕೋಟಿ ರು.ಗಳಿಂದ 5.60 ಲಕ್ಷ ಕೋಟಿ ರು.ಗಳಿಗೆ ಏರಿಕೆಯಾಗಿದೆ. ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ 86,000 ರು. ಸಾಲದ ಹೊರೆ ಬಿದ್ದಿದೆ. 2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ 35,000 ಕೋಟಿ ರು. ಪರಿಹಾರ ಕೇಳಿದ್ದರೂ, ಕೇವಲ 1,869 ಕೋಟಿ ರು. ಮಾತ್ರ ಕೇಂದ್ರ ಸರ್ಕಾರ ಕೊಟ್ಟಿತ್ತು. 2020 ಮತ್ತು 2021ರಲ್ಲಿಯೂ ಇದೇ ಅನ್ಯಾಯ ಮುಂದುವರಿಸಿದ್ದು ಮೋದಿ ಆಶೀರ್ವಾದವೇ? ಶಾಪವೇ?’ ಎಂದು ಕಿಡಿ ಕಾರಿದ್ದಾರೆ.

ನನ್ನನ್ನು ಸೋಲಿಸಲು ಜೆಡಿಎಸ್‌-ಬಿಜೆಪಿ ಒಳಒಪ್ಪಂದ: ಸಿದ್ದರಾಮಯ್ಯ

ಕನ್ನಡಿಗರು ಕಟ್ಟಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೋರೇಷನ್‌ ಬ್ಯಾಂಕ್‌ ಮತ್ತು ವಿಜಯಾ ಬ್ಯಾಂಕ್‌ಗಳನ್ನು ನುಂಗಿ ಹಾಕಿದ್ದು, ಕನ್ನಡಿಗರ ಹೆಮ್ಮೆಯ ‘ನಂದಿನಿ’ಯನ್ನು ಗುಜರಾತ್‌ ಮೂಲದ ಅಮುಲ್‌ ಆಪೋಶನ ತೆಗೆದುಕೊಳ್ಳಲು ಹೊರಟಿರುವುದು ಮೋದಿ ಆಶೀರ್ವಾದವೇ? ಕೇಂದ್ರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವುದು ಆಶೀರ್ವಾದವೇ? ಮಹಾರಾಷ್ಟ್ರದ ಆಕ್ರಮಣ ತಡೆಯದಿರುವುದು ಆಶೀರ್ವಾದವೇ? ಮಹದಾಯಿ, ಎತ್ತಿನ ಹೊಳೆ ವಿಚಾರದಲ್ಲಿ ರಾಜ್ಯಕ್ಕೆ ಮಾಡಿರುವ ಮೋಸ ಆಶೀರ್ವಾದವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದುಗೆ ಉತ್ತರಿಸಿದ ರೀತಿ ಬಗ್ಗೆ ಜೈಶಂಕರ್‌ಗೆ ಕಾಂಗ್ರೆಸ್‌ ತರಾಟೆ: ಅಂತರ್‌ ಯುದ್ಧಪೀಡಿತ ಸೂಡಾನ್‌ನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಆಗ್ರಹಿಸಿದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ‘ವಿಷಯವನ್ನು ರಾಜಕೀಯಕರಣಗೊಳಿಸಬೇಡಿ. ನಿಮ್ಮ ಟ್ವೀಟ್‌ ನೋಡಿ ಗಾಬರಿಯಾಗಿದೆ’ ಎಂದು ಉತ್ತರಿಸಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಕಾಂಗ್ರೆಸ್‌ ತರಾಟೆಗೆ ತೆಗೆದುಕೊಂಡಿದೆ. 

ಬುಧವಾರ ಜೈಶಂಕರ್‌ ಉತ್ತರಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌, ‘ಸಚಿವರ ಪ್ರತಿಕ್ರಿಯೆ ನೋಡಿ ಆಘಾತವಾಗಿದೆ. ‘ರಾಜಕೀಯ ಮಾಡಬೇಡಿ’ ಎಂದಿರುವ ಜೈಶಂಕರ್‌ ಅವರಿಗೆ, ‘ನಿಮಗೆ ಗಾಬರಿ ಆಗುತ್ತಿದೆ ಎಂದರೆ ಅಲ್ಲಿ ರಕ್ಷಣಾ ಕಾರ‍್ಯ ನಡೆಸಲು ಸಿದ್ಧ ಇರುವವರ ದೂರವಾಣಿ ಸಂಖ್ಯೆ ಕೊಡಿ’ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ. ಸಿದ್ದು ಉತ್ತರ ಸರಿಯಾಗೇ ಇದೆ. ಈ ಸರ್ಕಾರದ ಸಮಸ್ಯೆ ಎಂದರೆ ಚಿಕ್ಕಚಿಕ್ಕ ವಿಷಯಕ್ಕೂ ಕೆರಳಿಬಿಡುವುದು’ ಎಂದು ಕಿಡಿಕಾರಿದ್ದಾರೆ.

ತಾತ ಮತ್ತೆ ಸಿಎಂ ಆಗಬೇಕು: ‘ಮರಿ ಹುಲಿಯಾ’: ವರುಣದಲ್ಲಿ ಸಿದ್ದು ಪರ ಧವನ್‌ ರಾಕೇಶ್‌ ಪ್ರಚಾರ

‘ಸಿದ್ದರಾಮಯ್ಯ ಅವರು ಸೂಡಾನ್‌ನಲ್ಲಿ ಸಿಲುಕಿರುವ 31 ಕನ್ನಡಿಗರ ರಕ್ಷಣೆ ಮಾಡಿ ಎಂದಷ್ಟೇ ಕೇಳಿದ್ದಾರೆ. ಸಹಾಯ ಕೇಳುವುದು ತಪ್ಪೇ? ಇದಕ್ಕೆ ಕೆರಳುವುದು ಏಕೆ? ಈ ಸರ್ಕಾರದ ಮಂತ್ರಿಗಳ ಸಮಸ್ಯೆ ಎಂದರೆ ತಮ್ಮ ನಾಯಕನಿಗೆ (ಮೋದಿಗೆ) ನಿಷ್ಠೆ ತೋರಿಸುವ ಭರಾಟೆಯಲ್ಲಿ ತಾವು ಏನು ಪ್ರಮಾಣವಚನ ಸ್ವೀಕರಿಸಿ ಮಂತ್ರಿಯಾದೆವು ಎಂಬುದನ್ನೇ ಮರೆತಿದ್ದಾರೆ’ ಎಂದು ಸುಪ್ರಿಯಾ ಛೇಡಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.