Asianet Suvarna News Asianet Suvarna News

ಪ್ರಧಾನಿ ಮೋದಿ ಮುಖದಲ್ಲಿ 2018ರ ಉತ್ಸಾಹ ಇಲ್ಲ: ಜೈರಾಂ ರಮೇಶ್‌

‘ನಾನು ಹಿಂದು ಜತೆಗೆ ನನ್ನಲ್ಲಿ ಬೌದ್ಧ ಧರ್ಮವೂ ಬೇರೂರಿದೆ. ಹಾಗಾಗಿ ನನ್ನನ್ನು ನಾನು ‘ಹಿಂದ್‌-ಬುದ್ಧ’ ಎಂದು ಹೇಳಿಕೊಳ್ಳುವ ಮೂಲಕ ಗಮನ ಸೆಳೆದವರು. ಇಂತಹ ಮುತ್ಸದ್ದಿ ರಾಜಕಾರಣಿ ಈಗ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಲವೆಡೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಈಗಾಗಲೇ ಪ್ರಚಾರ ನಡೆಸಿದ್ದಾರೆ. 

Karnataka Election 2023 Congress General Secretary Jairam Ramesh Exclusive Interview gvd
Author
First Published May 8, 2023, 9:11 AM IST

ಲಿಂಗರಾಜು ಕೋರಾ

ಬೆಂಗಳೂರು (ಮೇ.08): ರಾಜ್ಯದಲ್ಲಿ ಚುನಾವಣಾ ಕಣ ಅಂತಿಮ ಘಟ್ಟತಲುಪಿದೆ. ಕರ್ನಾಟಕದ ಚಿಕ್ಕಮಗಳೂರು ಮೂಲದವರೇ ಆದ ಕೇಂದ್ರದ ಮಾಜಿ ಸಚಿವ ಹಾಲಿ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರವಲ್ಲದೆ ಕೇಂದ್ರ ಮಾತ್ರವಲ್ಲ ಕರ್ನಾಟಕ ಸೇರಿ ವಿವಿಧ ರಾಜ್ಯ ಸರ್ಕಾರಗಳಲ್ಲೂ ಹಲವು ಹುದ್ದೆಗಳನ್ನು ನಿಭಾಯಿಸಿದ ಅನನುಭವಿ ರಾಜಕಾರಣಿ. ಹಿಂದೆ ವಿವಿಧ ರಾಜ್ಯಗಳ ಕಾಂಗ್ರೆಸ್‌ ಚುನಾವಣಾ ಕಾರ್ಯತಂತ್ರದ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಿದವರು. ‘ನಾನು ಹಿಂದು ಜತೆಗೆ ನನ್ನಲ್ಲಿ ಬೌದ್ಧ ಧರ್ಮವೂ ಬೇರೂರಿದೆ. ಹಾಗಾಗಿ ನನ್ನನ್ನು ನಾನು ‘ಹಿಂದ್‌-ಬುದ್ಧ’ ಎಂದು ಹೇಳಿಕೊಳ್ಳುವ ಮೂಲಕ ಗಮನ ಸೆಳೆದವರು. ಇಂತಹ ಮುತ್ಸದ್ದಿ ರಾಜಕಾರಣಿ ಈಗ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಲವೆಡೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಪಕ್ಷಕ್ಕೆ ಈಗ ವಾತಾವರಣ ಹೇಗಿದೆ? ಮೋದಿ ಅವರ ದಾಖಲೆ ರೋಡ್‌ ಶೋ ಪರಿಣಾಮ? ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತಾ? ಇತ್ಯಾದಿ ವಿಚಾರಗಳ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ಮಾತನಾಡಿದ್ದಾರೆ.

* ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ ಈಗ ಕಾಂಗ್ರೆಸ್‌ಗೆ ವಾತಾವರಣ ಹೇಗಿದೆ?
ನಾನು 2018ಕ್ಕಿಂತ ಈ ಬಾರಿ ಹೆಚ್ಚು ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಬಹುತೇಕ ಎಲ್ಲ ಭಾಗಗಳಲ್ಲೂ ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ‘ಭಾರತ್‌ ಜೋಡೋ’ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲ್ಲುವ ಅವಕಾಶವಿದೆ ಎಂಬ ವಿಶ್ವಾಸ ತಂದುಕೊಟ್ಟ‘ಸಂಜೀವಿನಿ ಯಾತ್ರೆ’. ಜತೆಗೆ ಮೇಕೆದಾಟು, ಪ್ರಜಾಧನಿ ಇನ್ನಿತರೆ ಯಾತ್ರೆಗಳ ಮೂಲಕ ರಾಜ್ಯ ನಾಯಕರು 11 ತಿಂಗಳಿಂದ ಪಕ್ಷವನ್ನು ಸಂಘಟಿಸುತ್ತಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಾ ಬಂದ ಪರಿಣಾಮ ಕಾಂಗ್ರೆಸ್‌ ಪರವಾದ ಸಕಾರಾತ್ಮಕ ಭಾವನೆ ಎಲ್ಲೆಡೆ ಮೂಡಿದೆ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಇದು ಇನ್ನು ತಿಂಗಳ ನಂತರ ಎದುರಾಗುವ ತೆಲಂಗಾಣ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಇತರೆ ರಾಜ್ಯಗಳ ಚುಣಾವಣೆಗಳಿಗೆ ಕಾಂಗ್ರೆಸ್‌ ಪಾಲಿನ ಬೂಸ್ಟರ್‌ ಡೋಸ್‌ ಆಗಲಿದೆ.

ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು

* ಪ್ರಧಾನಿ ಮೋದಿ ದಾಖಲೆಯ ರೋಡ್‌ ಶೋ ನಡೆಸಿದ್ದಾರೆ?
ಮೋದಿ ಅವರ ಮುಖದಲ್ಲಿ 2018ರ ಚುನಾವಣೆಯಲ್ಲಿದ್ದ ಉತ್ಸಾಹವೇ ಇಲ್ಲ. ಬರೀ ಹತಾಶೆ ಕಾಣುತ್ತಿದೆ. ಏಕೆಂದರೆ 40% ಭ್ರಷ್ಟಾಚಾರ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪಗಳು, ಆಡಳಿತ ವಿರೋಧಿ ಅಲೆ ಕಾರಣ. ಹಾಗಾಗಿ ಮೋದಿ, ಅಮಿತ್‌ ಶಾ ಸೇರಿ ದೆಹಲಿ ನಾಯಕರ ಪ್ರಚಾರದಿಂದ ಏನೂ ಆಗಲ್ಲ. ಇದು ದೆಹಲಿ ಎಂಜಿನ್‌ ಸರ್ಕಾರದ ಚುನಾವಣೆಯಲ್ಲ. ಕರ್ನಾಟಕ, ಬೆಂಗಳೂರು ಎಂಜಿನ್‌ ಸರ್ಕಾರದ ಚುನಾವಣೆ. ಸ್ಥಳೀಯ ಸರ್ಕಾರದ ಆಡಳಿತ ಹಾಗೂ ಸ್ಥಳೀಯ ವಿಚಾರಗಳ ಮೇಲೆ ನಡೆಯುವ ಚುನಾವಣೆ. ಬಿಜೆಪಿ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಸ್ಪಷ್ಟಬಹುಮತ ನೀಡುತ್ತಾರೆ.

* ಬಿಜೆಪಿ ಪ್ರಕಾರ ಇದು ಅಲೆ ಇಲ್ಲದ ಚುನಾವಣೆ..
ಸುಳ್ಳು, ಸ್ಪಷ್ಟಆಡಳಿತ ವಿರೋಧಿ ಅಲೆ ಇದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ವಿಷಯಗಳು ಈ ಚುನಾವಣೆಯಲ್ಲಿ ಮಹತ್ವದ್ದಾಗಿದೆ. ಪ್ರತಿ ನೇಮಕಾತಿಗಳಲ್ಲಿ ಲಂಚ ಕೊಡಬೇಕೆಂಬ ಆರೋಪವಿದೆ. ಕಾಮಗಾರಿ ಟೆಂಡರ್‌ಗಳಿಗೆ 40% ಕಮಿಷನ್‌ ಕೊಡಬೇಕು ಅಂತ ಗುತ್ತಿಗೆದಾರರು ಹೇಳಿದ್ದಾರೆ. ಇದೆಲ್ಲಾ ಆಡಳಿತ ವಿರೋಧಿ ಅಲೆ ಅಲ್ವಾ? 2018ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿತ್ತು. ಜನರಲ್ಲೂ ಈ ಬಗ್ಗೆ ಯಾವುದೇ ಬಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಕೊನೇ ಹಂತದಲ್ಲಿ ಬಿಜೆಪಿಯವರು ಸೃಷ್ಟಿಸಿದ ಟಿಪ್ಪು ಸುಲ್ತಾನ್‌ ವಿಷಯ, ಲಿಂಗಾಯಿತ ಧರ್ಮದ ವಿಚಾರಗಳು ಉಳಿದೆಲ್ಲವನ್ನೂ ಗೌಣವಾಗಿಸಿಬಿಟ್ಟವು. ಈ ವಿಷಯಗಳ ಮೇಲೇ ಮೋದಿ 32 ರಾರ‍ಯಲಿ ಮಾಡಿದರು. ಎಲ್ಲಾ ಉಲ್ಟಾಆಯಿತು.

* ಈ ಬಾರಿಯೂ ಅಂತಹ ಪ್ರಯೋಗ ನಡೆದರೆ?
ಈ ಬಾರಿ ಅದೆಲ್ಲಾ ನಡೆಯಲ್ಲ. ನಮ್ಮ ಪಕ್ಷದ ಬಗ್ಗೆ ಆಗ ಇದ್ದ ವಿರೋಧ ಈಗಿಲ್ಲ. ಜನರ ಭಾವನೆಗಳು ಬದಲಾಗಿವೆ. ನಡೆದರೂ ಅದನ್ನು ನಿಭಾಯಿಸಲು ನಮ್ಮಲ್ಲೂ ನುರಿತ ತಂಡವೇ ಇದೆ. ಆರಂಭದಿಂದ ಕೊನೆಯವರೆಗೂ ಎಷ್ಟೇ ಧನಾತ್ಮಕ ವಾತಾವರಣ ಇದ್ದರೂ ಕೊನೇ ದಿನಗಳಲ್ಲಿ ಬರುವ ವಿಚಾರಗಳು, ಕೊನೇ ಕ್ಷಣದಲ್ಲಿ ಬೂತ್‌ ಮಟ್ಟದ ನಿರ್ವಹಣೆ, ಮತದಾರರ ಕ್ರೂಢೀಕರಣ, ತಂತ್ರಗಾರಿಕೆ ಪ್ರಮುಖ ಪಾತ್ರವಾಗುತ್ತದೆ ನಿಜ. ಈ ಎಲ್ಲಾ ಹಂತವನ್ನೂ ಸಮರ್ಥವಾಗಿ ನಿಭಾಯಿಸಲು ಕಾಂಗ್ರೆಸ್‌ ಸಿದ್ಧವಾಗಿದೆ.

* ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿಎಂ ಖುರ್ಚಿಗೆ ತಿಕ್ಕಾಟ ಪಕ್ಕ ಅಂತಾರೆ?
ನಮ್ಮಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಜನಪ್ರಿಯತೆಯ ವಿಚಾರ ಅಲ್ಲ. ಮೊದಲು ನಮ್ಮ ಉದ್ದೇಶ ಪಕ್ಷವನ್ನು ಅಧಿಕಾರಕ್ಕೆ ತರುವುದು. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ಜುಗಲ್‌ ಬಂದಿ ತಂಬಾ ಚೆನ್ನಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲು ಶಾಸಕಾಂಗ ಸಭೆ, ಹೈಕಮಾಂಡ್‌ ಇದೆ. ಎಐಸಿಸಿ ಅಧ್ಯಕ್ಷರು ಕರ್ನಾಟಕದವರೇ ಆಗಿರುವುದರಿಂದ ಯಾರಾರ‍ಯರ ಶಕ್ತಿ, ಸಾಮರ್ಥ್ಯ ಏನು ಅಂತ ಗೊತ್ತಿದೆ.

* ಬಜರಂಗದಳ ನಿಷೇಧ ವಿಷಯ ಬೇಡವಾಗಿತ್ತು ಅನಿಸಿದೆಯೆ?
ಹಾಗೇನಿಲ್ಲ, ಪ್ರಣಾಳಿಕೆಯಲ್ಲಿ ನಾವು ಹಿಂಸೆ, ಧ್ವೇಷ, ಕೋಮುಭಾವನೆ ಸೃಷ್ಟಿಸುವ ಉದ್ದೇಶವನ್ನು ಯಾವುದೇ ಸಂಘಟನೆ, ಸಂಸ್ಥೆ ಅಥವಾ ಯಾರೇ ತೋರಿದರೂ ಕಾನೂನಾತ್ಮಕ ಕ್ರಮ ಜರುಗಿಸುತ್ತೇವೆ ಅಂತ ಹೇಳಿದ್ದೇವೆ. ಎರಡು ಸಂಸ್ಥೆಯ ಹೆಸರು ಪ್ರಸ್ತಾಪಿಸಿದ್ದೇವೆ ಅಷ್ಟೆ. ಇಷ್ಟಕ್ಕೆ ಬಿಜೆಪಿಯವರು ಭಜರಂಗಿ ಅಂದರೆ ಭಗವಾನ್‌ ಹನುಮನಿಗೆ ಅವಮಾನ ಆಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರಲ್ಲಾ 2016ರಲ್ಲಿ ಗೋವಾದಲ್ಲಿ ಅವರದೇ ಸರ್ಕಾರ ಶ್ರೀರಾಮ ಸೇನೆ ಬ್ಯಾನ್‌ ಮಾಡಿ ನಂತರ ಎರಡು ವರ್ಷ ನಿಷೇಧ ಮುಂದುವರೆಸಿತು. ಆಗ ಮೋದಿ ಅವರು ಇದು ಭಗವಾನ್‌ ರಾಮನಿಗೆ ಮಾಡಿದ ಅಪಮಾನ ಅನ್ನಲಿಲ್ಲ.

ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್‌ ಜಾರಕಿಹೊಳಿ

*‘ಮೋದಿ ವಿಷಸರ್ಪ’, ‘ಲಿಂಗಾಯತ ಸಿಎಂ ಭ್ರಷ್ಟ’ ಹೇಳಿಕೆಗಳು ಪರಿಣಾಮ ಬೀರಲ್ವಾ?
ಇಂತಹದ್ದೆಲ್ಲಾ ಚುನಾವಣಾ ಪ್ರಚಾರದಲ್ಲಿ ಸಾಮಾನ್ಯ. ಇದು ಪತ್ರಿಕೆಗಳಲ್ಲಿ ಒಂದು ದಿನದ ಹೆಡ್‌ಲೈನ್‌ ಅಷ್ಟೆ. ಪರಿಣಾಮ ಬೀರಿಲ್ಲ.

* ಹಾಗಾದರೆ ಲಿಂಗಾಯತರು ಕಾಂಗ್ರೆಸ್‌ ಕೈ ಹಿಡೀತಾರಾ?
ಸಂಪೂರ್ಣ ವಿಶ್ವಾಸವಿದೆ. ಲಿಂಗಾಯತ ಸಮುದಾಯದ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಂತಹ ನಾಯಕರು ಬಿಜೆಪಿ ಸೇರಿದ್ದು ಒಂದೆಡೆಯಾದರೆ ಅನೇಕ ಕಡೆ ಸ್ಥಳೀಯ ಮಟ್ಟದಲ್ಲೂ ಆ ಸಮುದಾಯದ ನಾಯಕರಿಂದ ಕಾರ್ಯಕರ್ತರವರೆಗೂ ಕಾಂಗ್ರೆಸ್‌ಗೆ ಬಂದಿದ್ದಾರೆ. ಇತ್ತೀಚೆಗೆ ವೀರಶೈವ ಮತ್ತು ಲಿಂಗಾಯತ ವಿಚಾರ ವೇದಿಕೆ ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡಿದೆ. ಈ ನಿದರ್ಶನಗಳು ಸಾಕಲ್ವಾ?. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios