ರಾಜ್ಯ ವಿಧಾನಸಭಾ ಚುನಾವಣೆ ಚುನಾವಣಾ ಕಾವು ಏರಿಕೆಯಾಗುತ್ತಿದೆ. ಹಲವು ಸುತ್ತಿನ ಸರ್ಕಸ್ ಮಾಡಿ ಹೈಕಮಾಂಡ್‌ನಿಂದ ಬಿ.ಫಾರಂ ಗಿಟ್ಟಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಕೆಗೆ ಮುಂದಾಗಿದ್ದಾರೆ. ಅದರಂತೆ ಸೋಮವಾರ ರಾಜಧಾನಿಯಲ್ಲಿ ಬಿಜೆಪಿಯ ಹಲವು ಅಭ್ಯರ್ಥಿಗಳು ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬೆಂಗಳೂರು (ಏ.18) : ರಾಜ್ಯ ವಿಧಾನಸಭಾ ಚುನಾವಣೆ ಚುನಾವಣಾ ಕಾವು ಏರಿಕೆಯಾಗುತ್ತಿದೆ. ಹಲವು ಸುತ್ತಿನ ಸರ್ಕಸ್ ಮಾಡಿ ಹೈಕಮಾಂಡ್‌ನಿಂದ ಬಿ.ಫಾರಂ ಗಿಟ್ಟಿಸಿರುವ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಕೆಗೆ ಮುಂದಾಗಿದ್ದಾರೆ. ಅದರಂತೆ ಸೋಮವಾರ ರಾಜಧಾನಿಯಲ್ಲಿ ಬಿಜೆಪಿಯ ಹಲವು ಅಭ್ಯರ್ಥಿಗಳು ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಯಶವಂತಪುರ ಕ್ಷೇತ್ರ(Yashwantapur constituency)ಕ್ಕೆ ಸಚಿವ ಎಸ್.ಟಿ.ಸೋಮಶೇಖರ್(ST Somashekhar), ಪದ್ಮನಾಭನಗರ ಕ್ಷೇತ್ರಕ್ಕೆ ಸಚಿವ ಆರ್.ಅಶೋಕ್(R Ashok), ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಸಚಿವ ಕೆ.ಗೋಪಾಲಯ್ಯ(K Gopaliah), ದಾಸರಹಳ್ಳಿ ಕ್ಷೇತ್ರಕ್ಕೆ ಎಸ್.ಮುನಿರಾಜು(S Muniraju), ಮಲ್ಲೇಶ್ವರ ಕ್ಷೇತ್ರಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ(Dr CN Ashwath Narayana), ಪುಲಿಕೇಶಿನಗರ ಕ್ಷೇತ್ರಕ್ಕೆ ಎ.ಮುರಳಿ, ಹೊಸಕೋಟೆ ಕ್ಷೇತ್ರಕ್ಕೆ ಸಚಿವ ಎಂಟಿಬಿ ನಾಗರಾಜ್, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸತೀಶ್ ರೆಡ್ಡಿ, ಚಿಕ್ಕಪೇಟೆ ಕ್ಷೇತ್ರಕ್ಕೆ ಶಾಸಕ ಉದಯ ಬಿ.ಗರುಡಾಚಾರ್, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಶಾಸಕ ಎಂ.ಕೃಷ್ಣಪ್ಪ, ಚಾಮರಾಜಪೇಟೆ ಕ್ಷೇತ್ರಕ್ಕೆ ಭಾಸ್ಕರ್ ರಾವ್ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಪಾಳೆಯದಲ್ಲಿ ಬಂಡಾಯದ ಕಿಚ್ಚು, 25 ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಗೆ ಲಾಭ ಹೆಚ್ಚು
ಆರ್.ಅಶೋಕ್:
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಆರ್.ಅಶೋಕ್ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ಕಿಮ್ಸ್ ಕಾಲೇಜಿನವರೆಗೂ ಮೆರವಣಿಗೆ ನಡೆಸಿ ಬನಶಂಕರಿ ಎರಡನೇ ಹಂತದಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಆರ್.ಅಶೋಕ್‌ಗೆ ಸಂಸದ ತೇಜಸ್ವಿ ಸೂರ್ಯ, ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಎಂಟಿಬಿ ನಾಗರಾಜ್:
ಸಚಿವ ಎಂಟಿಬಿ ನಾಗರಾಜ್ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದನ್ನೂ ಮುನ್ನ ನಡೆದ ಬೃಹತ್ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಕಾರ್ಯರ್ಕರು ಎಂಟಿಬಿ ನಾಗರಾಜ್, ಬಿಜೆಪಿ ಪರ ಉತ್ಸಾಹದಂದ ಜಯ ಘೋಷಣೆ ಕೂಗಿದರು.
ಸತೀಶ್ ರೆಡ್ಡಿ:
ಶಾಸಕ ಸತೀಶ್ ರೆಡ್ಡಿ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಅವರು ಹೊಂಗಸಂದ್ರದ ವೀರಾಂಜನೇಯಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಬಿಎಂಪಿ ಮಾಜಿ ಉಪಮೇಯರ್ ರಾಮ್ ಮೋಹನ್ ರಾಜ್, ಪಕ್ಷದ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.
ಉದಯ ಬಿ.ಗರುಡಾಚಾರ್:
ಶಾಸಕ ಉದಯ ಬಿ.ಗರುಡಾಚಾರ್ ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಬೆಂಬಲಿಗರು, ಪಕ್ಷದ ಮುಖಂಡರು ಹಾಗೂ ಕುಟುಂಬದ ಸದಸ್ಯರ ಜತೆಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಎಂ.ಕೃಷ್ಣಪ್ಪ:
ಶಾಸಕ ಎಂ.ಕೃಷ್ಣಪ್ಪ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಬೆಂಬಲಿಗರು ಹಾಗೂ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಎಸ್.ಮುನಿರಾಜು:
ಮಾಜಿ ಶಾಸಕ ಎಸ್.ಮುನಿರಾಜು ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಕ್ಷೇತ್ರದ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗೆ ಪ್ರಾರ್ಥಿಸಿದರು. ಬಳಿಕ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು.
ಎ.ಮುರಳಿ:
ಎ.ಮುರಳಿ ಅವರು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
35, 58, 131, ರಾಜ್ಯ ಚುನಾವಣಾ ಅಖಾಡದಲ್ಲಿ ಮೂರು ಪಕ್ಷಗಳ ನಿಗೂಢ ಲೆಕ್ಕಾಚಾರ!
ಭಾಸ್ಕರ್ ರಾವ್:
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
