ಬೆಳಗಾವಿಯಲ್ಲಿ ಕಿಚ್ಚನ ರೋಡ್‌ ಶೋ: 'ಏನಾಗಲೀ ಮುಂದೆ ಸಾಗು ನೀ' ಹಾಡು ಹಾಡಿದ ಸುದೀಪ್‌

ನಟ ಸುದೀಪ್‌ ಸೋಮವಾರ ಬೆಳಗಾವಿ ಗ್ರಾಮೀಣ, ಯಮಕನಮರಡಿ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಸೇರಿ ಬೆಳಗಾವಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ರೋಡ್‌ ಶೋಗಳಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. 

Karnataka Election 2023 Kichcha Sudeep Campaign In Belagavi District gvd

ಬೆಳಗಾವಿ (ಮೇ.02): ನಟ ಸುದೀಪ್‌ ಸೋಮವಾರ ಬೆಳಗಾವಿ ಗ್ರಾಮೀಣ, ಯಮಕನಮರಡಿ, ಬೆಳಗಾವಿ ಉತ್ತರ ಹಾಗೂ ಬೆಳಗಾವಿ ದಕ್ಷಿಣ ಸೇರಿ ಬೆಳಗಾವಿಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ರೋಡ್‌ ಶೋಗಳಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದರು. ಕಿತ್ತೂರು ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರವಾಗಿ ನೇಸರಗಿ ಗ್ರಾಮದಲ್ಲಿ ಭರ್ಜರಿ ರೋಡ್‌ ಶೋ ನಡೆಸಿದ ವೇಳೆ , ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅವರದೇ ಚಿತ್ರದ ‘ಏನಾಗಲೀ ಮುಂದೆ ಸಾಗು ನೀ’ ಹಾಡು ಹಾಡಿ ಹುರಿದುಂಬಿಸಿದರು. ಆ ಹಾಡು ಹಾಡಿದರೆ ಅಭ್ಯರ್ಥಿಗೆ ಡಿಸ್ಕರೇಜ್‌ ಮಾಡಿದ ಹಾಗೆ ಆಗುತ್ತದೆ ಎಂದ ಸುದೀಪ, ಉಸಿರೆ ಉಸಿರೇ ಸಾಂಗ್‌ ಚರಣ ಹಾಡಿ ರಂಜಿಸಿದರು. ಬಾನಿಗೆ ಬಣ್ಣ ಹಚ್ಚೋ ಕಣ್ಣಿನವಳು, ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದವಳು ಎಂದು ಹಾಡಿಸಿದರು.

ಇನ್ನು, ಬೆಳಗಾವಿ ಗ್ರಾಮೀಣ ಬಿಜೆಪಿ ಅಭ್ಯರ್ಥಿ ನಾಗೇಶ್‌ ಮುನ್ನೋಳ್ಕರ್‌ ಪರ ಪ್ರಚಾರ ನಡೆಸಿದರೆ, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ ಪರ ರೋಡ್‌ ಶೋ ನಡೆಸಿ ಮತಬೇಟೆಗಿಳಿದರು. ಅವರು ನೇಸರಗಿ ರೋಡ್‌ ಶೋ ವೇಳೆ ಮಾತನಾಡಿ, ಈ ಭಾಗದ ಜನರ ಅಭಿವೃದ್ಧಿಯಾದರೆ ಎಲ್ಲರಿಗಿಂತ ನನಗೆ ಹೆಚ್ಚು ಖುಷಿ. ಅಭಿಮಾನಿಗಳಿಂದಲೇ ನಾವು. ಅವರಿಲ್ಲದೆ ನಾವಿಲ್ಲ ಎಂದು ಹೇಳಿದರು. ಸುದೀಪ್‌ ಆಗಮನ ಸುದ್ದಿ ತಿಳಿದ ಅಭಿಮಾನಿಗಳು ಸಹಸ್ರಾರು ಜನ ಪಾಲ್ಗೊಂಡು ಮೆಚ್ಚಿನ ನಟನ ಕಣ್ತುಂಬಿಕೊಂಡರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಗ್ಯಾರಂಟಿ ಕಾರ್ಡ್‌ ನೀಡಿ ಕಾಂಗ್ರೆಸ್‌ ಮತ​ಭಿ​ಕ್ಷೆ: ಯಡಿಯೂರಪ್ಪ ಲೇವಡಿ

ಡಾ. ರವಿ ಪಾಟೀಲ ಭರ್ಜರಿ ಪ್ರಚಾರ: ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ಸೋಮವಾರ ಕ್ಷೇತ್ರದ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ರುಕ್ಮಿಣಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಬೆಂಬಲ ಪಡೆದರು. ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಶ್ರೀನಗರದ ರಾಣಿ ಚೆನ್ನಮ್ಮ ಹೌಸಿಂಗ ಸೊಸೈಟಿಯಲ್ಲಿ ಡಾ ರವಿ ಪಾಟೀಲ ಅವರಿಗೆ ಭರ್ಜರಿ ಬೆಂಬಲ ದೊರೆಯಿತು. ಶಿವಾಲಯದ ಹತ್ತಿರ ಡಾ. ರವಿ ಪಾಟೀಲ ಅವರನ್ನು ಪುಷ್ಪವೃಷ್ಟಿಯ ಮೂಲಕ ಸ್ವಾಗತಿಸಿ ಸನ್ಮಾನಿಸುವುದರ ಮೂಲಕ ಬರುವ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಮತದಾರರು ಶುಭಾಶಯ ಕೋರಿದರು.

ಬಡಾವಣೆಯಲ್ಲಿ ಮನೆಯ ಮನೆಗೆ ತಿರುಳಿದ ಡಾ. ರವಿ ಪಾಟೀಲ ಮುಂಬರುವ ಮೇ 10 ರ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಅಭ್ಯರ್ಥಿಯಾದ ತಮ್ಮನ್ನು ಬಹುಮಾನದಿಂದ ಆರಿಸಿ ತರಬೇಕಾಗಿ ವಿನಂತಿಸಿದರು. ಪ್ರಚಾರ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ವೃತ್ತಿಯಲ್ಲಿ ವೈದ್ಯರಾಗಿರುವ ಅಭ್ಯರ್ಥಿಯ ಕುರಿತು ಹರ್ಷ ವ್ಯಕ್ತವಾಗಿದೆ. ಈಗಾಗಲೇ ಬಹುತೇಕ ಸಂಘ ಸಂಸ್ಥೆಗಳಿಂದ, ಮಹಿಳಾ ಸಂಘಟನೆಗಳಿಂದ, ಕಾರ್ಮಿಕ ಸಂಘಟನೆಗಳಿಂದ, ಕೃಷಿಕರಿಂದ ಬೆಂಬಲ ವ್ಯಕ್ತವಾಗಿದ್ದು, ಮತದಾನ ಪ್ರಕ್ರಿಯೆ ಉತ್ಸಾಹದಿಂದ ನಡೆಯಲಿದ್ದು, ರವಿ ಪಾಟೀಲ ಅವರು ಗೆಲ್ಲುವ ಎಲ್ಲ ಸೂಚನೆಗಳು ವ್ಯಕ್ತವಾಗುತ್ತಿದೆ.

ಗ್ಯಾರಂಟಿ ಕಾರ್ಡ್‌ ಬೇಕಿಲ್ಲ, ಸಾಧನೆಯೇ ನಮಗೆ ರಿಪೋರ್ಟ್‌ ಕಾರ್ಡ್‌: ಬಿ.ಎಲ್‌.ಸಂತೋಷ್‌

ವಂಟಮೂರಿ ಕಾಲೋನಿ, ಫುಲ್‌ಭಾಗ ಗಲ್ಲಿಯಲ್ಲಿ ಮನೆ ಮನೆಗೆ ತೆರಳಿ, ಪ್ರಚಾರ ನಡೆಸಿ, ಬಿಜೆಪಿಗೆ ಮತ ನೀಡುವಂತೆ ರವಿ ಪಾಟೀಲ ಕೋರಿದರು. ಅಲ್ಲದೇ, ಇದೇ ವೇಳೆ ಅಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಮೇ 10 ರಂದು ಚುನಾವಣೆಯಲ್ಲಿ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಿಜೆಪಿಯ ಕಮಲ ಚಿಹ್ನೆಗೆ ಮತ ಹಾಕಬೇಕು. ಈ ಮೂಲಕ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ನಾಂದಿಹಾಡಬೇಕು ಎಂದು ರವಿ ಪಾಟೀಲ ಮನವಿ ಮಾಡಿದರು. ಫುಲ್‌ಭಾಗ ಗಲ್ಲಿ ನಿವಾಸಿಗಳು ರವಿ ಪಾಟೀಲ ಅವರನ್ನು ಸನ್ಮಾನಿಸಿದರು.

Latest Videos
Follow Us:
Download App:
  • android
  • ios