ಬಿಜೆಪಿ ಅಭಿವೃದ್ಧಿ ಮಂತ್ರ ಪಠಿಸಿ ಮತಯಾಚನೆ ಮಾಡಿದರೆ, ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ನೀಡಿ ಮತಭಿಕ್ಷೆ ಬೇಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಲೇವಡಿ ಮಾಡಿದರು.

ಹೊಸನಗರ (ಮೇ.01): ಬಿಜೆಪಿ ಅಭಿವೃದ್ಧಿ ಮಂತ್ರ ಪಠಿಸಿ ಮತಯಾಚನೆ ಮಾಡಿದರೆ, ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ನೀಡಿ ಮತಭಿಕ್ಷೆ ಬೇಡುತ್ತಿದ್ದಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಲೇವಡಿ ಮಾಡಿದರು. ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಪರ ಮತ ಯಾಚನೆ ಮಾಡಿ ಮಾತನಾಡಿದರು. ಈ ಹಿಂದಿನ ಕಾಂಗ್ರೆಸ್‌ ಆಡಳಿತವ ಅವಧಿಯಲ್ಲಿ ನಡೆದ ಅಭಿವೃದ್ಧಿ ಯೋಜನೆ, ಸಾಧನೆ ಬಗ್ಗೆ ಮತ ಯಾಚನೆ ಮಾಡಲು ಸಾಧ್ಯವಿಲ್ಲದ ಕಾರಣ ಈ ಗ್ಯಾರೆಂಟಿ ಕಾರ್ಡ್‌ ಎಂಬ ಹೊಸದನ್ನು ಹುಟ್ಟು ಹಾಕಿದ್ದಾರೆ. 

ತಾವು ಹಾಗೂ ಕೆಲವು ಬಿಜೆಪಿ ಮುಖಂಡರು ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದೇವೆ. ಆದರೆ ಬಿಜೆಪಿಯನ್ನು ಪುನಃ ದಡ ಮುಟ್ಟಿಸುವ ಕೆಲಸ ಈ ಹಿರಿಯ ರಾಜಕಾರಣಿಗಳ ಮೇಲೆ ಇದೆ ಎಂದರು. ಶಾಸಕ ಹರತಾಳು ಹಾಲಪ್ಪ ಮಾತನಾಡಿ, ತಾವು ಮಾಡಿದ ಅಭಿವೃದ್ಧಿ ಕೆಲಸ ನೋಡಿ ಮತ ನೀಡಿ. ಈ ಸಾರಿ ಬಿಜೆಪಿಯು ಯಡಿಯೂರಪ್ಪ ಅವರು ಕೃಷ್ಣನಾಗಿ, ಬೊಮ್ಮಾಯಿ ಅರ್ಜುನನಾಗಿ ಧರ್ಮ ಸ್ಥಾಪನೆಗೋಸ್ಕರ ಹೋರಾಟ ಮಾಡುತ್ತಿದ್ದಾರೆ ಎಂದರು.

35 ವರ್ಷದಿಂದ ಕನಕಪುರದ ಅಭಿವೃದ್ಧಿ ಕುಂಠಿತ: ನಟಿ ತಾರಾ

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಹಣ, ಹೆಂಡದ ಹೊಳೆ ಹರಿಸಲಿದೆ, ಎಚ್ಚರ ವಹಿಸಿ ಮತ ನೀಡಿ ಎಂದು ಬೇಡಿದರು. ಡಾ.ರಾಜನಂದಿನಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಜೀವ ಮುಡಿಪಾಗಿಟ್ಟಕಾಗೋಡು ಸಲಹೆ ಚುನಾವಣಾ ವಿಚಾರದಲ್ಲಿ ನಡೆಯಲಿಲ್ಲದ ಕಾರಣ ಬೇಸತ್ತು ಬಿಜೆಪಿ ಸೇರಿದೆ ಎಂದರು. ವೇದಿಕೆಯಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್‌, ಮುಖಂಡರಾದ ದೇವಾನಂದ್‌, ಗಣಪತಿ ಬೆಳಗೋಡು, ಉಮೇಶ ಕಂಚುಗಾರ್‌, ಮೇಘರಾಜ್‌ ಮತ್ತಿತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ಬರೀ ಬೋಗಸ್‌ ಕಾರ್ಡ್‌: ಕಾಂಗ್ರೆಸ್‌ನವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ ನಂಬಬೇಡಿ. ಅದು ಬರೀ ಬೋಗಸ್‌ ಕಾರ್ಡ್‌. ಜನರು ತಮ್ಮನ್ನು ನಂಬುತ್ತಿಲ್ಲ ಎಂದು ಇದೀಗ ಗ್ಯಾರಂಟಿ ಕಾರ್ಡ್‌ ಹೆಸರಿನಲ್ಲಿ ಜನರ ಬಳಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಬಳ್ಳಾರಿ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ಪರ ರೋಡ್‌ಶೋ ನಡೆಸಿದ ಸಿಎಂ ಬೊಮ್ಮಾಯಿ ಅವರು ಬ್ರೂಸ್‌ಪೇಟೆ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌ನವರು ಈ ವರೆಗೆ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ಹೀಗಾಗಿ ಅವರನ್ನು ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಜನರ ನಂಬಿಸುವುದು ಹೇಗೆಂದು ಇದೀಗ ಗ್ಯಾರಂಟಿ ಕಾರ್ಡ್‌ ಹಿಡಿದು ಬಂದಿದ್ದಾರೆ. ಇವರ ಗ್ಯಾರಂಟಿ ಕಾರ್ಡ್‌ ಏನು ಮಾಡಬೇಕು? ಉಪ್ಪಿನಕಾಯಿಗೆ ಆಗಬೇಕಾ? ಎಂದರಲ್ಲದೆ, ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣೆ ಬಳಿಕ ಗಳಗಂಟಿ ಆಗಲಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಚಾಮರಾಜನಗರವನ್ನು ಗುಡಿಸಲು ಮುಕ್ತ ಜಿಲ್ಲೆಯಾಗಿಸುವೆ: ಸಚಿವ ಸೋಮಣ್ಣ

ಸೋನಿಯಾ ಪ್ಯಾಕೇಜ್‌ ರೊಕ್ಕ ಎಲ್ಲೈತೆ?: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್ ಮಾಡುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದಾರೆ. ಇಷ್ಟುದಿನ ಕಾಂಗ್ರೆಸ್‌ನವರು ಏನು ಮಾಡಿದರು? ಜೀನ್ಸ್‌ಪಾರ್ಕ್ ಏಕೆ ಮಾಡಲಿಲ್ಲ? ಈ ಹಿಂದೆ ಬಳ್ಳಾರಿಯಿಂದ ಸ್ಪರ್ಧಿಸಿ ಗೆದ್ದಿದ್ದ ಸೋನಿಯಾ ಗಾಂಧಿ ಅವರು ಬಳ್ಳಾರಿಗೆ .3 ಸಾವಿರ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದರು. ಆ ಹಣ ಎಲ್ಲಿಗೆ ಹೋಯಿತು? ಯಾರಿಗೆ ಖರ್ಚು ಮಾಡಿದಿರಿ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ಜೀನ್ಸ್‌ ಪಾರ್ಕ್ ಹೆಸರಿನಲ್ಲಿ ಕಾಂಗ್ರೆಸ್‌ನವರು ಹೊಸ ನಾಟಕ ಶುರು ಮಾಡಿದ್ದಾರೆ ಎಂದರು. ಬಿಜೆಪಿ ಸರ್ಕಾರ ಬಳ್ಳಾರಿಯಲ್ಲಿ 50 ಎಕರೆ ಪ್ರದೇಶದಲ್ಲಿ ಜೀನ್ಸ್‌ಪಾರ್ಕ್ ನಿರ್ಮಿಸುತ್ತಿದೆ. ಹಣವೂ ನೀಡಲಾಗಿದೆ. ಕಾಂಗ್ರೆಸ್‌ನವರು ಪಾರ್ಕ್ ನಿರ್ಮಿಸುವುದು ಬೇಕಾಗಿಲ್ಲ. ಅವರಿಗೂ ಗೊತ್ತು, ಬಿಜೆಪಿಯವರು ಕೆಲಸ ಮಾಡುತ್ತಾರೆ. ನಾವು ಬರೀ ಭರವಸೆ ಕೊಟ್ಟುಕೊಂಡು ಹೋಗೋಣ ಎಂದು ಜೀನ್ಸ್‌ಪಾರ್ಕ್ನ ಭರವಸೆ ನೀಡಿದ್ದಾರೆ ಎಂದು ಟೀಕಿಸಿದರು.