ಕೊಡಗಿನಲ್ಲಿ ಚುನಾವಣೆಗೆ ಟಿಪ್ಪು ಅಸ್ತ್ರ ಬಳಸಿದ್ವಾ ರಾಜಕೀಯ ಪಕ್ಷಗಳು!
ಟಿಪ್ಪು ಜಯಂತಿ ರದ್ದಾಗಿದ್ದರೂ ಮತ್ತೆ ಚುನಾವಣೆ ಕಾವು ಏರುತ್ತಿರುವಾಗ ಟಿಪ್ಪು ಜಯಂತಿ ಬದಲಾಗಿ ಟಿಪ್ಪು ಪ್ರತಿಮೆ ವಿಷಯ ಕೊಡಗು ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಸುಳ್ಳು ಪೋಸ್ಟ್ ಹರಡಿರುವ ವಿರುದ್ಧ ಪೊಲೀಸ್, ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ದೂರು ನೀಡಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.27): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಟಿಪ್ಪು ಜಯಂತಿ ಕೊಡಗಿನಲ್ಲಿ ಎರಡೆರಡು ಹೆಣಗಳು ಉರುಳುವಂತೆ ಮಾಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಅಧಿಕಾರ ಕಳೆದುಕೊಂಡಿದ್ದು ಗೊತ್ತೇ ಇದೆ. ಆದರೆ ಟಿಪ್ಪು ಜಯಂತಿ ರದ್ದಾಗಿದ್ದರೂ ಮತ್ತೆ ಚುನಾವಣೆ ಕಾವು ಏರುತ್ತಿರುವಾಗ ಟಿಪ್ಪು ಜಯಂತಿ ಬದಲಾಗಿ ಟಿಪ್ಪು ಪ್ರತಿಮೆ ವಿಷಯ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆದ್ದರೆ ಟಿಪ್ಪು ಪ್ರತಿಮೆ ಮಾಡುವುದಾಗಿ ಎಲ್ಲೆಡೆ ಹೇಳುತ್ತಿದ್ದಾರೆಂಬ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ ಎನ್ನುವಂತೆ ಪೇಪರ್ ಕಟಿಂಗ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಈ ರೀತಿಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾಕಷ್ಟು ಜನರು ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ವಿರುದ್ಧ ತಿರುಗಿ ಬಿದ್ದು, ಮಂತರ್ ವಿರುದ್ಧ ಚರ್ಚೆ ಮಾಡಿದ್ದಾರೆ.
ಆದರೆ ಈ ರೀತಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ತಿಳಿದ ಮಡಿಕೇರಿಯ ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಇದು ಬಿಜೆಪಿ ತನ್ನ ವಿರುದ್ಧ ಮಾಡಿರುವ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 25 ವರ್ಷದಿಂದ ಏನೂ ಮಾಡಲಾಗದ ಬಿಜೆಪಿ ಟಿಪ್ಪು ವಿಷಯವನ್ನು ಮುನ್ನೆಲೆಗೆ ತರುತ್ತಿದೆ. ಸುಳ್ಳುಪೋಸ್ಟ್ ಸೃಷ್ಟಿಸಿ ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ.
ಬಿಜೆಪಿ ಜಾತಿ, ಧರ್ಮಗಳ ನಡುವೆ ಹೊಡೆದಾಳುವ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ಪೊಲೀಸ್ ಠಾಣೆ, ಚುನಾವಣಾ ಆಯೋಗಗಳಿಗೆ ದೂರು ನೀಡಲಾಗಿದೆ. ಇದನ್ನು ಇಲ್ಲಿಗೆ ಬಿಡದೆ ಕಾನೂನಾತ್ಮಕವಾಗಿ ಹೋರಾಟ ರೂಪಿಸುವುದಾಗಿ ಹೇಳಿದ್ದಾರೆ. ನಾನೊಬ್ಬ ಹಿಂದೂ ಆಗಿ, ಗೌಡ್ರಾಗಿ ಹುಟ್ಟಿದ್ದೇನೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬುದು ನಮ್ಮ ಧರ್ಮ. ಆದರೆ ಬಿಜೆಪಿಯವರು ಇಂತಹ ತಂತ್ರಗಾರಿಕೆ ಮಾಡುತ್ತಾರೆ. 25 ವರ್ಷಗಳಿಂದ ಇದೇ ರೀತಿಯಲ್ಲಿ ಧರ್ಮಗಳ ವಿಚಾರದಲ್ಲಿ ರಾಜಕಾರಣ ಮಾಡಿದ್ದಾರೆ.
ಯಾವ ಮುಸಲ್ಮಾನರು ಯಾರ ಪುತ್ಥಳಿಯನ್ನು ಮಾಡುವುದಿಲ್ಲ. ಅದು ಮುಸಲ್ಮಾನರ ಸಂಸ್ಕೃತಿಯಲ್ಲ. ಹೀಗಾಗಿ ಅವರ ಸಂಸ್ಕೃತಿಯಲ್ಲಿ ಇಲ್ಲದಿರುವುದನ್ನು ನಾನು ಮಾಡುವುದಿಲ್ಲ ಎಂದು ಮಂತರ್ ಗೌಡ ಹೇಳಿದ್ದಾರೆ. 25 ವರ್ಷಗಳಲ್ಲಿ ಅಪ್ಪಚ್ಚು ರಂಜನ್ ಅವರ ಸಾಧನೆ ಶೂನ್ಯವಾಗಿದ್ದು, ಜನರೊಂದಿಗೆ ಅವರು ವಿಶ್ವಾಸ ಉಳಿಸಿಕೊಂಡಿಲ್ಲ. ಆದರೆ ಜನರು ನಮಗೆ ತೋರಿಸುತ್ತಿರುವ ಪ್ರೀತಿ ವಿಶ್ವಾಸವನ್ನು ಕಂಡು ಬಿಜೆಪಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅವರು ಅಷ್ಟು ವರ್ಷಗಳಿಂದ ಮಾಡಲಾಗದ್ದನ್ನು ನಾನು ಒಂದು ವರ್ಷದಲ್ಲಿ ಮಾಡಿದ್ದೇನೆ.
ಕಾಂಗ್ರೆಸ್ ಕೊರಳಿಗೆ ಸುತ್ತಿಕೊಂಡ ಖರ್ಗೆಯ 'ಮೋದಿ ವಿಷಸರ್ಪ!
ಹೀಗಾಗಿ ನನ್ನ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವಂತೆ ಇಂತಹ ಸುಳ್ಳು ಪೋಸ್ಟರ್ಗಳನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಇದಕ್ಕಾಗಿ ರಂಜನ್ ಅವರು ಫೇಕ್ ಪೇಪರ್ ಪಬ್ಲೀಷರ್ ಅಂತ ಹೊಸ ಬ್ಯುಸಿನೆಸ್ ತೆಗೆದುಕೊಂಡಿದ್ದಾರೆ ಎಂದು ಮಂತರ್ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಹಾಗೂ ಮಡಿಕೇರಿ ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ಕಾನೂನು ಘಟಕ ದೂರು ನೀಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೋದಿ ವಿಷದ ಹಾವು, ನೆಕ್ಕಿದರೆ ಕಥೆ ಮುಗೀತು: ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ವ್ಯಾಪಕ ಆಕ್ರೋಶ
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಯಾರೋ ಇಂತಹ ಪೋಸ್ಟರ್ಗಳನ್ನು ಸೃಷ್ಟಿಸಿ, ಎಲ್ಲೋ ಹರಿಬಿಡುತ್ತಾರೆ. ಅದಕ್ಕೆ ನಾವು ಜವಾಬ್ದಾರರಲ್ಲ, ಅದನ್ನು ನಾವು ನಿಯಂತ್ರಿಸಲು ಆಗುವುದಿಲ್ಲ. ಆದರೆ ಜಿಲ್ಲೆಯಲ್ಲಿ 1994 ರಿಂದಲೂ ಬಿಜೆಪಿ ಗೆಲ್ಲುತ್ತಾ ಬರುತ್ತಿದ್ದು, ಈ ಬಾರಿಯೂ ಬಿಜೆಪಿ ಗೆಲ್ಲಲ್ಲಿದೆ. ಈ ಹತಾಶೆಯಿಂದ ಕಾಂಗ್ರೆಸ್ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ಇಂತಹ ಸುಳ್ಳು ಮಾಹಿತಿಗಳನ್ನು ಹರಿಬಿಟ್ಟು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದಂತು ವಿಪರ್ಯಾಸದ ಸಂಗತಿ.