Asianet Suvarna News Asianet Suvarna News

ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಮನೆ ಸ್ವತ್ತು ಮಾಡಿಕೊಂಡಿದ್ದಾರೆಯೇ? : ಇಕ್ಬಾಲ್‌ ಹುಸೇನ್‌

ಕ್ಷೇತ್ರಕ್ಕೆ ಅಪರೂಪದ ಅತಿಥಿಗಳಂತೆ ಬರುವವರನ್ನು ಸ್ವಾಭಿಮಾನಿ ಮತದಾರರು ತಿರಸ್ಕರಿಸಿ ಈ ನೆಲದ ಮಗನನ್ನು ಗೆಲ್ಲಿಸಿ ಬದಲಾವಣೆ ತರಬೇಕು ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎ.ಇಕ್ಬಾಲ್‌ ಹುಸೇನ್‌ ಹೇಳಿದರು.

Karnataka Election 2023 HA Iqbal Hussain Slams On Hd Kumarasswamy gvd
Author
First Published Apr 16, 2023, 9:01 PM IST

ರಾಮನಗರ (ಏ.16): ಕ್ಷೇತ್ರಕ್ಕೆ ಅಪರೂಪದ ಅತಿಥಿಗಳಂತೆ ಬರುವವರನ್ನು ಸ್ವಾಭಿಮಾನಿ ಮತದಾರರು ತಿರಸ್ಕರಿಸಿ ಈ ನೆಲದ ಮಗನನ್ನು ಗೆಲ್ಲಿಸಿ ಬದಲಾವಣೆ ತರಬೇಕು ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎ.ಇಕ್ಬಾಲ್‌ ಹುಸೇನ್‌ ಹೇಳಿದರು. ತಾಲೂಕಿನ ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಜನಾರ್ಶೀವಾದ ಭೇಟಿ ಕಾರ್ಯಕ್ರಮ ನಡೆಸಿದ ವೇಳೆ ಕೂನಗಲ್‌ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದ ದೇವೇಗೌಡರು ಮುಖ್ಯಮಂತ್ರಿಯಾಗಿ ನಂತರ ಪ್ರಧಾನ ಮಂತ್ರಿಯೂ ಆದರು. 

ನಂತರ ಕುಮಾರಸ್ವಾಮಿ ಬಂದು ಮುಖ್ಯಮಂತ್ರಿ ಆದರು. ಅನಂತರ ಉಪಚುನಾವಣೆಯಲ್ಲಿ ಅವರ ಪತ್ನಿ ಅನಿತಾಕುಮಾರಸ್ವಾಮಿ ಅವರು ಗೆದ್ದು ಶಾಸಕರಾದರು. ಆದರೆ ಕ್ಷೇತ್ರ ಅಭಿವೃದ್ಧಿ ಕಂಡಿದೆಯೇ? ಜನರ ಜೀವನ ಸ್ಥಿತಿ-ಗತಿ ಬದಲಾಗಿದೆಯೇ? ಇದೀಗ ಅವರ ಮಗನನ್ನು ಚುನಾವಣೆಗೆ ಕರೆ ತಂದಿದ್ದಾರೆ. ಈ ಕ್ಷೇತ್ರವನ್ನು ಕುಮಾರಸ್ವಾಮಿ ತಮ್ಮ ಕುಟುಂಬದ ಮನೆಯ ಸ್ವತ್ತು ಮಾಡಿಕೊಂಡಿದ್ದಾರೆಯೇ? ಜನರನ್ನು ಗುಲಾಮರೆಂದು ತಿಳಿದಿದ್ದಾರೆಯೇ ಎಂದು ಪ್ರಶ್ನಿಸಿದರು.

ಮಾಗ​ಡಿ​ಯನ್ನು ಮಾದರಿ ಕ್ಷೇತ್ರ ಮಾಡುವೆ: ಎಚ್‌.ಸಿ.ಬಾಲಕೃಷ್ಣ

ಕಳೆದ ಚುನಾವಣೆಯಲ್ಲಿ 72 ಸಾವಿರ ಮತಗಳನ್ನು ಪಡೆದು ಸೋಲುಂಡರೂ ನಿರಂತರವಾಗಿ ಕ್ಷೇತ್ರದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೋವಿಡ್‌ ಸಂದರ್ಭದಲ್ಲಿಯೂ ಮನೆಯಲ್ಲಿ ಕುಳಿತುಕೊಳ್ಳದೆ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ್ದೇನೆ. ರೈತರ ತರಕಾರಿ ಹಣ್ಣುಗಳನ್ನು ಖರೀದಿಸಿ ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದೇನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಲು ಜನರೇ ಇಲ್ಲದ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿದ ಮುಸ್ಲಿಂ ಯುವಕರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ನನ್ನನ್ನು ಆಶೀರ್ವದಿಸಿ: ಜಾತಿ ಧರ್ಮವನ್ನು ನೋಡದೆ ಎಲ್ಲಾ ವರ್ಗದವರ ಧ್ವನಿಯಾಗಿ ಕೆಲಸ ದುಡಿಯುತ್ತಿರುವ ನನ್ನನ್ನು ಆರ್ಶೀವದಿಸಿ ಎಂದು ಕೋರಿದರು. ಕ್ಷೇತ್ರದಿಂದ ಗೆದ್ದು ರಾಜಕೀಯವಾಗಿ ಲಾಭ ಪಡೆದುಕೊಂಡವರು ಮತದಾರರನ್ನು ಮರೆತಿದ್ದರು. ಈಗ ಚುನಾವಣೆ ಹತ್ತಿರ ಬಂದಿರುವುದರಿಂದ ಮತದಾರರ ಮನೆ ಮನೆಗೆ ಸುತ್ತುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸಿ ಭಾವನಾತ್ಮಕವಾಗಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಊರಲ್ಲಿ ಕಿತಾಪತಿ ಮಾಡುವವರನ್ನು ದೂರವಿಡಿ. ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸದಾ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ನನಗೆ ಈ ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿದರು

ಯೋಜನೆಗಳು ಅನುಷ್ಠಾನ: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಅನ್ನಭಾಗ್ಯ, ಹೈನುಗಾರರಿಗೆ ಕ್ಷೀರ ಭಾಗ್ಯದಂತಹ ಹಲವು ಜನಪರ ಯೋಜನೆಗಳನ್ನು ನೀಡುವ ಮೂಲಕ ಬಡವರು, ರೈತರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ರಮಗಳನ್ನು ಕಾಂಗ್ರೆಸ್‌ ಪಕ್ಷ ನೀಡಿದೆ. ಈ ಬಾರಿ ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌, ಗೃಹಿಣಿಗೆ 2 ಸಾವಿರ ನೆರವು, ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಈ ಎಲ್ಲಾ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಮುಖಂಡರನ್ನು ಇಕ್ಬಾಲ್‌ ಹುಸೇನ್‌ ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ರಾಜು, ಗ್ರಾಮಾಂತರ ಕಾಂಗ್ರೆಸ್‌ ಅಧ್ಯಕ್ಷ ವಿ.ಎಚ್‌.ರಾಜು, ಮುಖಂಡರಾದ ಬೀರೇಶ್‌, ಪುಟ್ಟಸ್ವಾಮಿ ಮುಂತಾದವರು ಹಾಜರಿದ್ದರು. ಬಳಿಕ ಮೂಡ್ಲಹಳ್ಳಿದೊಡ್ಡಿ, ಜವಳಗೆರೆದೊಡ್ಡಿ, ನಾಯಕರದೊಡ್ಡಿ, ಆಲದಮರದದೊಡ್ಡಿ, ಹುಣಸನಹಳ್ಳಿ, ತಮ್ಮನಾಯ್ಕನಹಳ್ಳಿ, ದಾಸರಹಳ್ಳಿ, ಮೇದರದೊಡ್ಡಿ, ಹನುಮಂತೇಗೌಡನದೊಡ್ಡಿ, ದಾಸೇಗೌಡನದೊಡ್ಡಿ, ಇರುಳಿಗರದೊಡ್ಡಿ, ತುಂಬೇನಹಳ್ಳಿ, ತುಂಬೇನಹಳ್ಳಿ, ಹುಚ್ಚಮ್ಮನದೊಡ್ಡಿ, ಅಣ್ಣಹಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಜನಾರ್ಶೀವಾದ ಕಾರ್ಯಕ್ರಮ ನಡೆಸಿದರು.

ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

ರೇಷ್ಮೆ ಕಡ್ಡಿ ನಾಟಿ: ರಾಮನಗರ ತಾಲೂಕಿನ ಕೂನಗಲ್‌ ಗ್ರಾಮದಲ್ಲಿ ಜನಾರ್ಶೀವಾದ ನಡೆಸಿದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವರು ರಸ್ತೆಬದಿಯ ಜಮೀನಿನಲ್ಲಿ ಸ್ವಲ್ಪ ಕಾಲ ರೈತರ ಜೊತೆಗೂಡಿ ರೇಷ್ಮೆ ಕಡ್ಡಿ ನಾಟಿ ಮಾಡಿ ಗಮನ ಸೆಳೆದರು. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ಮಹಿಳೆಯರ ಬಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಕೂನಗಲ್‌ ಗ್ರಾಮದ ರೈತ ಮಹಿಳೆಯರು ಇಕ್ಬಾಲ್‌ ಹುಸೇನ್‌ ಅವರಿಗೆ ತಾಂಬೂಲ ಮತ್ತು 500 ರು. ಕಾಣಿಕೆ ಕೊಟ್ಟು ಶುಭ ಕೋರಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios