Asianet Suvarna News Asianet Suvarna News

ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡಿ: ರಾಹುಲ್‌ ಗಾಂಧಿ

ಬಿಜೆಪಿಯವರಿಗೆ 40 ಎನ್ನುವ ನಂಬರ್‌ ಮೇಲೆ ಬಹಳ ಪ್ರೀತಿ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರೆ ನೀಡಿದರು. 

Karnataka Election 2023 Give only 40 seats to BJP Says Rahul Gandhi gvd
Author
First Published May 2, 2023, 2:20 AM IST

ತುಮಕೂರು (ಮೇ.02): ಬಿಜೆಪಿಯವರಿಗೆ 40 ಎನ್ನುವ ನಂಬರ್‌ ಮೇಲೆ ಬಹಳ ಪ್ರೀತಿ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟು ಮಾತ್ರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕರೆ ನೀಡಿದರು. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಏರ್ಪಡಿಸಿದ್ದ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವನ್ನು 150 ಸ್ಥಾನಗಳನ್ನು ನೀಡಿ ಗೆಲ್ಲಿಸುವ ಮೂಲಕ ಅಧಿಕಾರಕ್ಕೆ ತರಬೇಕು ಎಂದು ಅವರು ಮನವಿ ಮಾಡಿದರು.

ಪ್ರತಿ ಕಾಮಗಾರಿ, ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನ್‌ ಪಡೆದಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಕೇವಲ 40 ಸೀಟುಗಳಿಗೆ ಮಾತ್ರ ಸೀಮಿತಗೊಳಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 150 ಸ್ಥಾನ ನೀಡಿದರೆ ಬಿಜೆಪಿಯವರು ನಮ್ಮ ಶಾಸಕರನ್ನು ಕದಿಯಲು ಆಗುವುದಿಲ್ಲ. ಆಗ ಬಹುಮತದೊಂದಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಕಾಂಗ್ರೆಸ್‌ ಶಾಸಕರಿಗೆ ಹಣ ಕೊಟ್ಟು ಖರೀದಿ ಮಾಡಿ ಸರ್ಕಾರವನ್ನು ರಚನೆ ಮಾಡಿದೆ. ಕಳೆದ 3 ವರ್ಷಗಳಿಂದ ಬಿಜೆಪಿ ಕರ್ನಾಟಕದಲ್ಲಿ ಕೇವಲ ಭ್ರಷ್ಟಾಚಾರಕ್ಕೆ ಮಾತ್ರ ಹೆಸರಾಗಿದೆ. ಈ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಕರ್ನಾಟಕದ ಜನ ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಕಾರ್ಡ್‌ ಬೇಕಿಲ್ಲ, ಸಾಧನೆಯೇ ನಮಗೆ ರಿಪೋರ್ಟ್‌ ಕಾರ್ಡ್‌: ಬಿ.ಎಲ್‌.ಸಂತೋಷ್‌

ವಿವಿಧ ಯೋಜನೆಗಳ ಮೂಲಕ ಜನರಿಗೆ ಹಣ ಒದಗಿಸುವುದು ಹಾಗೂ ಆರೋಗ್ಯ, ರಸ್ತೆ ನಿರ್ಮಾಣಕ್ಕೆ ಹಣ ಒದಗಿಸುವುದು ಸರ್ಕಾರದ ಕೆಲಸವಾಗಿರುತ್ತದೆ. ಆದರೆ ಬಿಜೆಪಿ ಸರ್ಕಾರ ಈ ಕೆಲಸಗಳಿಗೆ ಹಣವನ್ನು ಒದಗಿಸುವ ಬದಲು ರೈತರು, ಜನಸಾಮಾನ್ಯರು, ಬಡವರ ಜೇಬಿನಿಂದ ಹಣವನ್ನು ಕಿತ್ತುಕೊಂಡಿದೆ. ಗುತ್ತಿಗೆದಾರರಿಂದ 40 ಪರ್ಸೆಂಟ್‌ ಕಮಿಷನನ್ನು ಬಿಜೆಪಿ ಸರ್ಕಾರ ದೋಚಿದ ವಿಚಾರ ಪ್ರಧಾನ ಮಂತ್ರಿಯವರಿಗೆ ಗೊತ್ತಿಲ್ಲ ಎಂದೇನಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮಿಷನ್‌ ಕೇಳುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. 

ಮಠಾಧೀಶರೊಬ್ಬರು ಸಹ ನನ್ನ ಹತ್ತಿರವೂ 30 ಪರ್ಸೆಂಟ್‌ ಕಮಿಷನನ್ನು ಈ ಸರ್ಕಾರ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು ದೂರಿದರು.  ಪೊಲೀಸರ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ, ಎಂಜಿನಿಯರ್‌ ನೇಮಕಾತಿ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದ ನೇಮಕಾತಿಯಲ್ಲೂ ಈ ಬಿಜೆಪಿ ಸರ್ಕಾರ ಅಕ್ರಮ ನಡೆಸಿದೆ. ಕರ್ನಾಟಕದಲ್ಲಿ ಎರಡೂವರೆ ಸಾವಿರ ಕೋಟಿ ಕೊಟ್ಟು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದ ಕರ್ನಾಟಕದಲ್ಲಿ ಇರುವಂತಹ ಪ್ರತಿ ಮನೆಗೂ ಗೊತ್ತಿದೆ ಅಂದ ಮೇಲೆ ದೇಶದ ಪ್ರಧಾನಿಗೂ ಇದು ಗೊತ್ತಿರಲೇಬೇಕು. 

ಇಷ್ಟೆಲ್ಲಾ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಸಹ ಇದನ್ನು ತಡೆಯಲು ಏನು ಪ್ರಯತ್ನ ಮಾಡಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ರಾಹುಲ್‌ಗಾಂಧಿ ಪ್ರಶ್ನಿಸಿದರು. ನೀವು ಕರ್ನಾಟಕದ ಜನರನ್ನು ಮತ ಕೇಳುವುದಕ್ಕಿಂತ ಮುನ್ನ ಭ್ರಷ್ಟಾಚಾರವನ್ನು ನಿಲ್ಲಿಸಲು ಏನು ಕ್ರಮ ಕೈಗೊಂಡಿದ್ದೀರಾ ಎಂಬುದರ ಬಗ್ಗೆ ಮೊದಲು ಜನರಿಗೆ ತಿಳಿಸಬೇಕು.  ವಿಧಾನಸಭಾ ಚುನಾವಣೆ ಯಾವೊಬ್ಬ ವ್ಯಕ್ತಿಗೋಸ್ಕರ, ಪ್ರಧಾನಮಂತ್ರಿಗೋಸ್ಕರ ನಡೆಯುತ್ತಿರುವ ಚುನಾವಣೆಯಲ್ಲ ಎಂಬುದನ್ನು ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಇದು ಕರ್ನಾಟಕದ ಯುವಕರು, ತಾಯಂದರಿಗೋಸ್ಕರ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು. 

ಅಂಬೇಡ್ಕರ್‌ ಹೆಸರನ್ನು ಪಸರಿಸಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ: ಶಾಸಕ ಎನ್‌.ಮಹೇಶ್‌

ಭಾಷಣ ನಿಲ್ಲಿಸಿದ ರಾಹುಲ್: ರಾಹುಲ್ ಗಾಂಧಿ ಭಾಷಣದ ಮಧ್ಯೆ ಮಸೀದಿಯಲ್ಲಿ ನಮಾಜ್ ಕೂಗಿದ ಪರಿಣಾಮ ನಮಾಜ್ ಮುಗಿಯುವವರೆಗೂ ಭಾಷಣ ನಿಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರಾದ ಕೆ.ಸಿ. ವೇಣುಗೋಪಾಲ್‌, ಮಯೂರ ಜೈಕುಮಾರ್‌, ಅಭ್ಯರ್ಥಿ ಬೆಮೆಲ್‌ ಕಾಂತರಾಜು, ಶಶಿಹುಲಿಕುಂಟೆ, ರಾಯಸಂದ್ರ ರವಿಕುಮಾರ್‌ ಮತ್ತಿತರರು ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios