ಬಿಜೆಪಿಯಿಂದ ಜಾತಿ ಎತ್ತಿ ಕಟ್ಟುವ ಕೆಲಸ, ದ್ವೇಷದ ವಾತಾವರಣ ಸೃಷ್ಟಿ: ಸಿದ್ದು
ಬಿಜೆಪಿಯಿಂದ ಜಾತಿ ಎತ್ತಿಕಟ್ಟುವ ಕೆಲಸವಾಗುತ್ತಿದೆ. ಜಾತಿ-ಧರ್ಮಗಳ ನಡುವೆ ದ್ವೇಷದ ವಾತಾವರಣ ಹುಟ್ಟು ಹಾಕುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೈಸೂರು (ಮೇ.07): ಬಿಜೆಪಿಯಿಂದ ಜಾತಿ ಎತ್ತಿಕಟ್ಟುವ ಕೆಲಸವಾಗುತ್ತಿದೆ. ಜಾತಿ-ಧರ್ಮಗಳ ನಡುವೆ ದ್ವೇಷದ ವಾತಾವರಣ ಹುಟ್ಟು ಹಾಕುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಹೈಕಮಾಂಡ್ ಹೇಳಿದ್ದರಿಂದ ವರುಣದಿಂದ ಸ್ಪರ್ಧಿಸಿದ್ದೇನೆ.
ಇದು ನನ್ನ ಕೊನೆಯ ಚುನಾವಣೆಯಾದ್ದರಿಂದ ಹುಟ್ಟೂರಿನಲ್ಲೇ ಚುನಾವಣಾ ರಾಜಕೀಯ ನಿಲ್ಲಿಸಲು ಇಲ್ಲಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರು ಎಂದೂ ಜಾತಿವಾದ ಮಾಡಲಿಲ್ಲ. ಆದರೆ, ಬಿಜೆಪಿಯವರು ಜಾತಿ, ಜಾತಿ ನಡುವೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ಷಡ್ಯಂತ್ರವನ್ನು ಮೆಟ್ಟಿಜನರು ನನಗೆ ಆಶೀರ್ವಾದ ಮಾಡುತ್ತಾರೆ. ಬಹಳ ದೊಡ್ಡ ಅಂತರದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಸ್ಥಳೀಯ ನಾಯಕರಿಗೆ ಮತ ಕೇಳುವ ಮುಖ ಇಲ್ಲ. ಆದ್ದರಿಂದ ಮೋದಿ ಬಂದರೆ ಅನುಕೂಲ ಆಗಬಹುದು ಎಂಬ ಭ್ರಮೆಯಲ್ಲಿದ್ದಾರೆ.
ಎಲ್‌ಕೆಜಿ ಮಕ್ಕಳ ರೀತಿ ಕಾಂಗ್ರೆಸ್ ಆರೋಪ: ಅಣ್ಣಾಮಲೈ
ಅವರು ಎಷ್ಟುಬಾರಿ ಬಂದರೂ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾ ತಿನ್ನಲ್ಲ, ತಿನ್ನಲು ಬಿಡಲ್ಲ ಎನ್ನುವ ಪ್ರಧಾನಿಗೆ ಬದ್ಧತೆ ಇಲ್ಲ. ರಾಜ್ಯದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 40% ಕಮಿಷನ್ ಆರೋಪ ಹೊತ್ತಿದೆ. ಈ ಬಗ್ಗೆ ಗುತ್ತಿಗೆದಾರರ ಸಂಘದವರು ಬರೆದಿರುವ ಪತ್ರ ಇದೆ. ಎಸ್‌ಐ ನೇಮಕಾತಿಯಲ್ಲಿ ಜೈಲಿಗೆ ಹೋಗಿರುವುದು ಸಾಕ್ಷಿ ಅಲ್ಲವೇ? ಮಾಡಾಳ್ ವಿರೂಪಾಕ್ಷಪ್ಪನ ಹಗರಣಕ್ಕಿಂತಲೂ ಸಾಕ್ಷಿ ಬೇಕೆ?. ಈ ಬಗ್ಗೆ ಮೋದಿಯೇಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಬಜರಂಗ ದಳ ಮುಟ್ಟುವ ತಾಕತ್ತು ಯಾರಿಗಿದೆ?: ಸಿಎಂ ಬೊಮ್ಮಾಯಿ ಸವಾಲು
ಪ್ರಧಾನಿ ಆಗಮನದಿಂದ ನೀಟ್ ವಿದ್ಯಾರ್ಥಿಗಳಿಗೆ ತೊಂದರೆ: ರಾಜ್ಯದಲ್ಲಿ ಸುಮಾರು 50 ಸಾವಿರ ಮಂದಿ ವಿದ್ಯಾರ್ಥಿಗಳು ಭಾನುವಾರ ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಮೋದಿ ಆಗಮನದಿಂದ ಅವರಿಗೆ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಕ್ಕೆ ಯಾರು ಹೊಣೆ? ಮುಂಚಿತವಾಗಿ ಹೋಗಿ ಉಳಿದುಕೊಳ್ಳಿ ಎನ್ನುವುದು ಬೇಜವಾಬ್ದಾರಿ ಹೇಳಿಕೆ. ರೋಡ್ ಶೋ ಮುಂದಕ್ಕೆ ಹಾಕಬಹುದು? ಪರೀಕ್ಷೆ ಮುಂದೆ ಹಾಕಲಾದೀತೇ?. ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋಗುತ್ತಿದ್ದರು. ಆಗ ನಾನು ಚುನಾವಣಾ ಪ್ರಚಾರಕ್ಕಾಗಿ ಗಂಗಾವತಿಗೆ ಹೋಗಬೇಕಿತ್ತು. ಆದರೆ ನನಗೆ ಅಲ್ಲಿಗೆ ಹೋಗಲು ಅನುಮತಿಯನ್ನೇ ನೀಡಲಿಲ್ಲ. ಒಬ್ಬ ಪ್ರಧಾನಿ ಪದೇ ಪದೇ ಭೇಟಿ ನೀಡಿದರೆ ಅನುಕೂಲಕ್ಕಿಂತ, ಸಾರ್ವಜನಿಕರಿಗೆ ಅನಾನುಕೂಲವೇ ಹೆಚ್ಚು ಎಂದರು.