ಎಲ್‌ಕೆಜಿ ಮಕ್ಕಳ ರೀತಿ ಕಾಂಗ್ರೆಸ್ ಆರೋಪ: ಅಣ್ಣಾಮಲೈ
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಕುಟುಂಬದ ಕೊಲೆಗೆ ಸಂಚು ಸಂಬಂಧ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ತುಣುಕನ್ನು ತಿರುಚಲಾಗಿದೆ.
ಬೆಂಗಳೂರು (ಮೇ.07): ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಕುಟುಂಬದ ಕೊಲೆಗೆ ಸಂಚು ಸಂಬಂಧ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ತುಣುಕನ್ನು ತಿರುಚಲಾಗಿದೆ. ಕಾಂಗ್ರೆಸ್ ಚಿತ್ತಾಪುರದಲ್ಲಿ ಸೋಲುವ ಭೀತಿಯಲ್ಲಿ ಎಲ್‌ಕೆಜಿ ಮಕ್ಕಳ ರೀತಿ ಈ ಆರೋಪ ಮಾಡಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ವ್ಯಂಗ್ಯವಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಈ ಆಡಿಯೋ ಕಟ್ ಆ್ಯಂಡ್ ಪೇಸ್ಟ್ ಆಡಿಯೋ. ರಾಜ್ಯದಲ್ಲಿ ಕಳೆದೊಂದು ವಾರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ರಾರಯಲಿಗಳಿಗೆ ರಾಜ್ಯದಲ್ಲಿ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು ಕಾಂಗ್ರೆಸ್‌ಗೆ ಸೋಲುವ ಭಯ ಶುರುವಾಗಿದೆ. ಹೀಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಕಾರಿದರು.
ಬಜರಂಗ ದಳ ಮುಟ್ಟುವ ತಾಕತ್ತು ಯಾರಿಗಿದೆ?: ಸಿಎಂ ಬೊಮ್ಮಾಯಿ ಸವಾಲು
‘ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಕೇವಲ 26 ವರ್ಷದ ಯುವಕ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಆದರೂ ಸೋಲುವ ಭಯದಲ್ಲಿ ಪ್ರಿಯಾಂಕ್ ಖರ್ಗೆ ಕಳೆದ ಎರಡು ವರ್ಷಗಳಿಂದ ಮಣಿಕಂಠ ಅವರ ವಿರುದ್ಧ ಮಾನನಷ್ಟಮೊಕದ್ದಮೆ ಸೇರಿದಂತೆ ಹಲವು ದೂರು ನೀಡಿದ್ದಾರೆ. ಮೂರನೇ ವ್ಯಕ್ತಿಗಳಿಂದಲೂ ದೂರು ಕೊಡಿಸಿದ್ದಾರೆ. ಈಗ ಕಾಂಗ್ರೆಸ್ ನಾಯಕರು ಕಟ್-ಪೇಸ್ಟ್ ಆಡಿಯೊ ಬಿಡುಗಡೆಗೊಳಿಸಿ ಮಣಿಕಂಠ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ನಂದಿನಿ ಮಜ್ಜಿಗೆ ಕುಡಿಯಿರಿ: ಕರ್ನಾಟಕದಲ್ಲಿ ರಾಜಕೀಯದ ಹೀಟ್ ಹೆಚ್ಚಾಗಿದೆ. ಉತ್ತರ ಭಾರತದ ರಣದೀಪ್ ಸಿಂಗ್ ಸುರ್ಜೇವಾಲಾಗೆ ಈ ಹೀಟ್ ತಡೆಯಲು ಆಗುತ್ತಿಲ್ಲ. ಹೀಗಾಗಿ ನಂದಿನಿ ಮಜ್ಜಿಗೆ ಕುಡಿದು ತಂಪಾಗಬೇಕು. ಮಣಿಕಂಠ ಅವರನ್ನು ರೌಡಿ ಶೀಟರ್ ಎನ್ನುವ ಮುನ್ನ ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದಲ್ಲಿ ಕ್ರಿಮಿನಲ್ ಹಿನ್ನೆಲೆಯ ಎಷ್ಟುಜನಕ್ಕೆ ಟಿಕೆಟ್ ನೀಡಲಾಗಿದೆ ಎಂದು ನೋಡಿಕೊಳ್ಳಬೇಕು. ಕೊಲೆ ಪ್ರಕರಣ ಆರೋಪಿ ವಿನಯ ಕುಲಕರ್ಣಿಗೆ ನ್ಯಾಯಾಲಯ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದೆ. ಆದರೂ ಅವರಿಗೆ ಟಿಕೆಟ್ ನೀಡಿ ಅಭ್ಯರ್ಥಿ ಮಾಡಲಾಗಿದೆ. ಹಿಂದಿನ ಉತ್ತರ ಪ್ರದೇಶ, ಬಿಹಾರದಲ್ಲಿ ಈ ರೀತಿಯ ರಾಜಕಾರಣ ಇತ್ತು ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯೋಗಿ ಮಾದರಿ ಸರ್ಕಾರ: ಯತ್ನಾಳ
ಕೊತ್ವಾಲ್ ಶಿಷ್ಯ ಡಿಕೆಶಿ: ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಕೊಲೆ, ಸುಲಿಗೆ, ಭೂ ಕಬಳಿಗೆ, ಉಗ್ರ ಸಂಘಟನೆಗೆ ಫಂಡಿಂಗ್ ಮಾಡಿದ ಆರೋಪ ಸೇರಿದಂತೆ ವಿವಿಧ ಆರೋಪಗಳ ಪ್ರಕರಣ ಇರುವ 35 ಮಂದಿಗೆ ಟಿಕೆಟ್ ನೀಡಲಾಗಿದೆ. ಹಲವು ಬೇಲ್ ಮೇಲೆ ಹೊರಗೆ ಇದ್ದಾರೆ. ಇದರಲ್ಲಿ ಕೋತ್ವಾಲ್ ರಾಮಚಂದ್ರನ ಶಿಷ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇದ್ದಾರೆ. ಒಬ್ಬರನ್ನು ರೌಡಿ ಎಂದು ಬಿಂಬಿಸುವ ಮುನ್ನ ತಮ್ಮ ಪಕ್ಷದ ಬಗ್ಗೆಯೂ ಕಾಂಗ್ರೆಸ್ ನಾಯಕರು ಒಮ್ಮೆ ನೋಡಿಕೊಳ್ಳುವುದು ಉತ್ತಮ ಎಂದು ಅಣ್ಣಾಮಲೈ ಟಾಂಗ್ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.