ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ನಂತರ ಪಕ್ಷದಲ್ಲಿ ಉದ್ಭವಿಸಿರುವ ಬಂಡಾಯ ಮುಂದುವರಿದಿದ್ದು, ಪಕ್ಷೇತರ, ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದಿದೆ. 

ಬೆಂಗಳೂರು (ಏ.10): ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ನಂತರ ಪಕ್ಷದಲ್ಲಿ ಉದ್ಭವಿಸಿರುವ ಬಂಡಾಯ ಮುಂದುವರಿದಿದ್ದು, ಪಕ್ಷೇತರ, ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶಗೊಂಡಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರು ದೆಹಲಿಯಲ್ಲಿ ಭಾನುವಾರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಇದೇ ವೇಳೆ, ಚಿತ್ರದುರ್ಗದಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಶಾಸಕ ಎಸ್‌.ಕೆ.ಬಸವರಾಜನ್‌ ಅವರು ತಮ್ಮ ಪತ್ನಿ ಸೌಭಾಗ್ಯ ಬಸವರಾಜನ್‌ ಅವರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಘೋಷಣೆ ಮಾಡಿದ್ದಾರೆ. 

ಈ ಮಧ್ಯೆ, ಕಡೂರಿನಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ವೈ.ಎಸ್‌.ವಿ.ದತ್ತ, ಸ್ವಾಭಿಮಾನದ ಸಂಕೇತವಾಗಿ ‘ಟವೆಲ್‌’ ಚಿಹ್ನೆಯಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ, ಚಿತ್ರದುರ್ಗದಲ್ಲಿ ಭಾನುವಾರ ವಿಧಾನಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌ ಅವರು ಬೆಂಬಲಿಗರ ಸಭೆ ನಡೆಸಿದ್ದು, ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬೆಂಬಲಿಗರು ಸಲಹೆ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ?: ಅಭ್ಯರ್ಥಿ ಅಂತಿಮಗೊಳಿಸಲು ಮೋದಿ 2 ಗಂಟೆ ಕಸರತ್ತು

ಕಮಲ ಹಿಡಿದ ಛಬ್ಬಿ: ಕಲಘಟಗಿ ಕ್ಷೇತ್ರದಲ್ಲಿ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರು ದೆಹಲಿಯಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಅವರು ಬಿಜೆಪಿಯಿಂದ ಕಲಘಟಗಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಮಧ್ಯೆ, ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಭಾನುವಾರ ಅಭಿಮಾನಿಗಳ ಸಭೆ ನಡೆಸಿದ ಮಾಜಿ ಶಾಸಕ ವೈ.ಎಸ್‌.ವಿ.ದತ್ತ, ಮುಂದಿನ ಚುನಾವಣೆಯಲ್ಲಿ ಕಡೂರಿನಿಂದ ‘ಟವೆಲ್‌’ ಚಿಹ್ನೆಯಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದರು. 

ಈ ಮಧ್ಯೆ, ಚಿತ್ರದುರ್ಗದಲ್ಲಿ ಟಿಕೆಟ್‌ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಅವರು, ತಮ್ಮ ಪತ್ನಿ ಸೌಭಾಗ್ಯ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ, ವಿಧಾನಪರಿಷತ್ತಿನ ಮಾಜಿ ಸದಸ್ಯ ರಘು ಆಚಾರ್‌ ಅವರು ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಂಬಲಿಗರ ಸಭೆ ನಡೆಸಿದರು. ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಸ್ಪರ್ಧಿಸುವಂತೆ ಬೆಂಬಲಿಗರು ಅವರಿಗೆ ಸಲಹೆ ನೀಡಿದರು. ಇದೇ ವೇಳೆ, ಬೇಲೂರಿನಲ್ಲಿ ಅಭಿಮಾನಿಗಳ ಸಭೆ ನಡೆಸಿದ ಗ್ರಾನೈಟ್‌ ರಾಜಶೇಖರ್‌, ಬಂಡಾಯ ಅಭ್ಯರ್ಥಿಯಾಗಿ ಸ್ಪ​ರ್ಧಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. 

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಭೆ ನಡೆಸಿದ ನಂದಕುಮಾರ್‌ ಬೆಂಬಲಿಗರು, ನಂದಕುಮಾರ್‌ಗೇ ‘ಬಿ’ ಫಾಮ್‌ರ್‍ ನೀಡಬೇಕು. ಇಲ್ಲದಿದ್ದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ತಟಸ್ಥರಾಗಿರುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.