ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಂತರ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಅಂತಿಮಗೊಳಿಸಲು ತೀವ್ರ ಕಸರತ್ತು ನಡೆದಿದ್ದು, ಬಹುತೇಕ ಸೋಮವಾರ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಬೆಂಗಳೂರು (ಏ.10): ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಂತರ ಆಡಳಿತಾರೂಢ ಬಿಜೆಪಿಯ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಅಂತಿಮಗೊಳಿಸಲು ತೀವ್ರ ಕಸರತ್ತು ನಡೆದಿದ್ದು, ಬಹುತೇಕ ಸೋಮವಾರ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಭಾನುವಾರ ಸಂಜೆ ದೆಹಲಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆದರೂ ಪಟ್ಟಿಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. 

ಸಭೆಯಲ್ಲಿ ಮೋದಿ ಸೇರಿದಂತೆ ಹಲವು ನಾಯಕರು ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದರಿಂದ ಅವುಗಳನ್ನು ಮುಂದಿಟ್ಟುಕೊಂಡು ಸೋಮವಾರ ಮತ್ತೊಮ್ಮೆ ಹಿರಿಯ ನಾಯಕರ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಅಲಿಖಿತ ನಿಯಮದಂತೆ 75 ವರ್ಷ ವಯಸ್ಸಾದವರಿಗೆ ಟಿಕೆಟ್‌ ನೀಡಬೇಕೆ ಅಥವಾ ಬೇಡವೆ? ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ನೀಡಬೇಕೆ ಅಥವಾ ಗೆಲುವಿನ ಸಾಧ್ಯತೆ ನೋಡಿ ಸಡಿಲಿಕೆ ಮಾಡಬೇಕೆ? ಆಡಳಿತ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಹಲವು ಹಾಲಿ ಶಾಸಕರನ್ನು ಕೈಬಿಡಬೇಕೆ ಅಥವಾ ಅವರಿಗೇ ಮಣೆ ಹಾಕಬೇಕೆ ಎಂಬಿತ್ಯಾದಿ ಅಂಶಗಳ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ತುಸು ಗೊಂದಲ ಮುಂದುವರೆದಿದೆ. 

ಬಿಜೆಪಿಯವರಿಗೆ ಮತ ಕೇಳಲು ಮುಖವಿಲ್ಲ: ಮಾಜಿ ಸಚಿವ ಸಂತೋಷ್‌ ಲಾಡ್‌

ಈ ಗೊಂದಲಗಳಿಗೆ ಸೋಮವಾರ ಪರಿಹಾರ ಕಂಡುಕೊಂಡ ಬಳಿಕ ಪಟ್ಟಿಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಮೊದಲ ಪಟ್ಟಿಯಲ್ಲೇ ಹೆಚ್ಚು ಕ್ಷೇತ್ರಗಳಿಗೆ ಟಿಕೆಟ್‌ ಪ್ರಕಟಿಸುವ ಉದ್ದೇಶ ಹೊಂದಿರುವ ಬಿಜೆಪಿ ನಾಯಕರು ಸುಮಾರು 150ರಿಂದ 175 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಗೊಂದಲ ಇರುವ ಅಥವಾ ಸ್ಪಷ್ಟನಿರ್ಧಾರಕ್ಕೆ ಬರಲು ಸಾಧ್ಯವಾಗದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಾಲ್ಕೈದು ದಿನಗಳ ಬಳಿಕ ಎರಡನೆಯ ಪಟ್ಟಿಯನ್ನು ಬಿಡುಗಡೆಗೊಳಿಸುವ ಚರ್ಚೆ ನಡೆದಿದೆ. ಹಾಲಿ ಶಾಸಕರ ಪೈಕಿ ಸುಮಾರು 10ಕ್ಕೂ ಹೆಚ್ಚು ಜನರಿಗೆ ವಿವಿಧ ಕಾರಣಗಳಿಗಾಗಿ ಟಿಕೆಟ್‌ ತಪ್ಪುವ ಸಂಭವವಿದೆ.

ವರುಣ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಬೇಕು ಎಂಬ ನಿಟ್ಟಿನಲ್ಲಿ ವಸತಿ ಸಚಿವ ಸೋಮಣ್ಣ ಅವರನ್ನು ಅಭ್ಯರ್ಥಿಯನ್ನಾಗಿಸುವ ಬಗ್ಗೆ ಚರ್ಚೆ ನಡೆದಿದ್ದರೂ ಎರಡು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದರೆ ಮಾತ್ರ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ಸೋಮವಾರ ಅಥವಾ ಮಂಗಳವಾರ ಪಟ್ಟಿ ಪ್ರಕಟ: ಭಾನುವಾರದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೀಯ ಮಂಡಳಿಯಲ್ಲಿ ಕರ್ನಾಟಕ ಚುನಾವಣೆ ಬಗ್ಗೆ ಎಲ್ಲವೂ ಚರ್ಚೆಯಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಸೋಮವಾರ ಅಥವಾ ಮಂಗಳವಾರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು. ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ನಾನು ಈಗ ಪ್ರತಿನಿಧಿಸುತ್ತಿರುವ ಶಿಗ್ಗಾವಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.