ಬೆಲೆಯೇರಿಕೆ, ಬಿಜೆಪಿ ಭ್ರಷ್ಟಾಚಾರವೇ ಎಲೆಕ್ಷನ್ ವಿಷಯ: ಸತೀಶ್ ಜಾರಕಿಹೊಳಿ
ಸ್ಮಶಾನದಲ್ಲಿ ಊಟ. ಮಂಗಳವಾರ ಮಂಗಳ ಕಾರ್ಯ. ಅಮಾವಾಸ್ಯೆ ದಿನ ಸಾಮೂಹಿಕ ಮದುವೆ... ಹೀಗೆ ಮೌಢ್ಯ ಹಾಗೂ ಕಂದಾಚಾರದ ವಿರುದ್ಧ ಬಹಿರಂಗವಾಗಿ ಗಟ್ಟಿಧ್ವನಿ ಎತ್ತುವ ರಾಜಕಾರಣಿ ಕರುನಾಡಿನಲ್ಲಿ ಯಾರಾದರೂ ಇದ್ದರೆ ಅದು ನಿಸ್ಸಂಶಯವಾಗಿ ಸತೀಶ್ ಜಾರಕಿಹೊಳಿ.
ಶ್ರೀಶೈಲ ಮಠದ
ಬೆಂಗಳೂರು (ಮೇ.07): ಸ್ಮಶಾನದಲ್ಲಿ ಊಟ. ಮಂಗಳವಾರ ಮಂಗಳ ಕಾರ್ಯ. ಅಮಾವಾಸ್ಯೆ ದಿನ ಸಾಮೂಹಿಕ ಮದುವೆ... ಹೀಗೆ ಮೌಢ್ಯ ಹಾಗೂ ಕಂದಾಚಾರದ ವಿರುದ್ಧ ಬಹಿರಂಗವಾಗಿ ಗಟ್ಟಿಧ್ವನಿ ಎತ್ತುವ ರಾಜಕಾರಣಿ ಕರುನಾಡಿನಲ್ಲಿ ಯಾರಾದರೂ ಇದ್ದರೆ ಅದು ನಿಸ್ಸಂಶಯವಾಗಿ ಸತೀಶ್ ಜಾರಕಿಹೊಳಿ. ಸಮಾಜವನ್ನು ಕಾಡುತ್ತಿರುವ ಮೌಢ್ಯ ಹಾಗೂ ಕಂದಾಚಾರಗಳನ್ನು ಕಟು ಧ್ವನಿಯಲ್ಲಿ ಖಂಡಿಸುವ ಮತ್ತು ಇದರಿಂದ ಕೆಲವು ಬಾರಿ ವಿವಾದಗಳಿಗೂ ಆಹಾರವಾಗುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರ ಪೈಕಿಯೊಬ್ಬರು. ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಸತೀಶ್ ಅವರು ಕಾಂಗ್ರೆಸ್‌ಗಾಗಿ ರಾಜ್ಯದಲ್ಲಿ ಅಹಿಂದ ಮತ ಕ್ರೋಢೀಕರಣಕ್ಕೆ ಕಾರಣಕರ್ತರಾದವರ ಪೈಕಿ ಒಬ್ಬರು.
ಬಿಜೆಪಿಯಲ್ಲಿರುವ ತಮ್ಮ ಸಹೋದರರ ವಿರುದ್ಧ ಕೆಂಡಕಾರುವ, ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುವ ಹಾಗೂ ರಾಜ್ಯಾದ್ಯಂತ ತಮ್ಮ ಅಭಿಮಾನಿ ಬಳಗ ಕಟ್ಟಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹಿಂದುತ್ವ ಕುರಿತ ಹೇಳಿಕೆಯಿಂದಾಗಿರುವ ಪರಿಣಾಮವೇನು? ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಯುವುದೇ? ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಜಿಲ್ಲಾ ರಾಜಕಾರಣದ ಮೇಲಿನ ಪರಿಣಾಮವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ.
ಸುಳ್ಳು ಗ್ಯಾರಂಟಿ, ಓಲೈಕೆಯೇ ‘ಕೈ’ ನೀತಿ, ಕಾಂಗ್ರೆಸ್ಸಿನ ಭರವಸೆಗಳು ಹಾಸ್ಯಾಸ್ಪದ: ರಾಜೀವ್ ಚಂದ್ರಶೇಖರ್
* ಕಾಂಗ್ರೆಸ್‌ನ ಮುಂಚೂಣಿ ನಾಯಕರ ಪೈಕಿ ನೀವೂ ಒಬ್ಬರು? ಆದರೆ, ಸಿಎಂ ಹುದ್ದೆ ಬಯಕೆ ಇಲ್ಲವೆ?
ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯವಾಗಬೇಕಾಗುತ್ತದೆ. ಪಕ್ಷ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನನಗೆ ಇನ್ನೂ ಕಾಲಾವಕಾಶ ಇದೆ. ಸದ್ಯ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ನಾನಲ್ಲ.
* ಹಿಂದುತ್ವ ಪದದ ಬಗ್ಗೆ ಹೇಳಿಕೆ ನೀಡಿದ್ದೀರಿ. ಅದು ಚುನಾವಣೆಯಲ್ಲಿ ಯಾವ ಪರಿಣಾಮ ಬೀರಬಹುದು?
ಹಿಂದುತ್ವದ ಕುರಿತು ನೀಡಿದ ಹೇಳಿಕೆ ವಿಚಾರ ಮುಗಿದ ಅಧ್ಯಾಯ. ಅದರ ಬಗ್ಗೆ ಈಗ ಪ್ರಸ್ತಾಪ ಬೇಡ. ಅಭಿವೃದ್ಧಿಯೊಂದೇ ನಮ್ಮ ಕ್ಷೇತ್ರದಲ್ಲಿ ಕಾಣುತ್ತಿದೆ. ಬಿಜೆಪಿಯವರು ಧರ್ಮ, ಭಾಷೆ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಇಲ್ಲಿ ಧರ್ಮ, ಭಾಷೆ ಮೇಲೆ ಕೆಲಸ ಆಗುವುದಿಲ್ಲ. ಕ್ಷೇತ್ರದ ಮತದಾರರು ನಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ.
* ಈ ಬಾರಿ ಟಿಕೆಟ್ ಹಂಚಿಕೆಯಾದ ಶೈಲಿಯ ಬಗ್ಗೆ ಸಮಾಧಾನವಿದೆಯೇ?
ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯದಡಿ ಟಿಕೆಟ್ ಹಂಚಿಕೆಯನ್ನು ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಕೆಲವೆಡೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಎಲ್ಲವೂ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಆಗಿದೆ.
* ಗೋಕಾಕ್ ವಿಧಾನಸಭೆ ಟಿಕೆಟ್ ವಿಚಾರದಲ್ಲಿ ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವಂತೆ?
ಗೋಕಾಕ್ ಟಿಕೆಟ್ ಹಂಚಿಕೆ ವಿಚಾರ ಈಗ ಮುಗಿದ ಅಧ್ಯಾಯ. ನಾವು ಅಶೋಕ ಪೂಜಾರಿ ಅವರೊಬ್ಬರ ಹೆಸರೊಂದನ್ನೇ ಪಕ್ಷಕ್ಕೆ ಶಿಫಾರಸು ಮಾಡಿದ್ದೆವು. ಆದರೆ, ಸರ್ವೆ ಆಧಾರದ ಮೇಲೆ ಗೋಕಾಕ್ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಬೇಕಾಗುತ್ತದೆ. ಈಗಾಗಲೇ ನಾವು ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಅಶೋಕ ಪೂಜಾರಿ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
* ಬಿಜೆಪಿಯ ಲಕ್ಷ್ಮಣ ಸವದಿ ಈಗ ಕಾಂಗ್ರೆಸ್‌ಗೆ ಬಂದಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ಏನು ಬದಲಾವಣೆ ನಿರೀಕ್ಷಿಸಬಹುದು?
ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಕ್ಕಿಂತ ಮೊದಲು ನಾವು ಜಿಲ್ಲೆಯಲ್ಲಿ 10 ಸೀಟುಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಸವದಿ ಪಕ್ಷಕ್ಕೆ ಬಂದ ಮೇಲೆ ಮತ್ತೆರಡು ಸೀಟುಗಳಲ್ಲಿ ಗೆಲ್ಲುವ ವಾತಾವರಣ ಇದೆ. ಸವದಿ ಅವರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ, ಕೊಪ್ಪಳ, ವಿಜಯಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪ್ರಭಾವ ಹೊಂದಿದ್ದಾರೆ. ಅವರು ಆಯಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
* ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೇ ಹೆಬ್ಬಾಳಕರ ಪ್ರಭಾವ ಹೆಚ್ಚಾಗಿದೆ ಅಂತಾರಲ್ಲ? ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಫುಲ್ ಪೈಪೋಟಿ ಇರುತ್ತಾ?
ಆ ಕುರಿತು ಈಗ ಏನೂ ಹೇಳಲಾಗದು. ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿಗಳು ವಿಚಾರ ಮಾಡಬೇಕಾಗುತ್ತದೆ. ಅವರೇ ನಿರ್ಣಯ ಮಾಡುತ್ತಾರೆ. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ವಿಚಾರದ ಪ್ರಶ್ನೆ ಬರುವುದಿಲ್ಲ.
* ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರಕ್ಕಿಳಿದಿರುವುದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಬಹುದೇ?
ಖಂಡಿತವಾಗಿಯೂ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿಧಾನಸಭೆ ಚುನಾವಣೆ ಸ್ಥಳೀಯ ವಿಷಯದ ಆಧಾರದ ಮೇಲೆ ನಡೆಯುತ್ತದೆ. ರಾಷ್ಟ್ರ ಆಧಾರಿತ ವಿಷಯದ ಮೇಲೆ ನಡೆಯದು. ಮೋದಿ, ಅಮಿತ್ ಶಾ ಪ್ರಚಾರಕ್ಕಿಳಿದಿರುವುದರಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವ ಪ್ರಶ್ನೆಯೇ ಇಲ್ಲ. ಬಿಜೆಪಿ ನಾಯಕರು ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುತ್ತೇವೆ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದರೂ ಅದರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಪ್ರಚಾರ ನಡೆಸಿದ್ದರೂ ದಿಲ್ಲಿ ವಿಷಯ ಪ್ರಸ್ತಾಪಿಸುವುದಿಲ್ಲ. ಸ್ಥಳೀಯ ವಿಷಯ ಪ್ರಸ್ತಾಪಿಸುತ್ತಾರೆ.
* ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಮಸ್ಯೆಯಾಗಬಹುದೇ?
ತಮ್ಮ ಹೇಳಿಕೆಗೆ ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿಷಯ ಕ್ಲೋಸ್ ಆಗಿದೆ. ಅದನ್ನು ಮತ್ತೆ ಬಿಜೆಪಿ ನಾಯಕರು ಕೆದಕುವ ಪ್ರಯತ್ನ ನಡೆಸಿದ್ದಾರೆ. ಖರ್ಗೆ ಹೇಳಿಕೆಯಿಂದ ಚುನಾವಣೆಯಲ್ಲಿ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವ ಪ್ರಶ್ನೆಯೇ ಇಲ್ಲ.
* ಚುನಾವಣೆಗೆ ಇನ್ನು ಕೆಲವೇ ದಿನ ಇದೆ. ಹೇಗಿದೆ ರಾಜಕೀಯ ವಾತಾವರಣ?
ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ಇದೆ. ರಾಜ್ಯದಲ್ಲಿ ಬಿಜೆಪಿಗೆ ಆಡಳಿತ ವಿರೋಧ ಅಲೆ ಇದೆ. ಅಲ್ಲದೇ, ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಆರೋಪ ಎದುರಿಸುತ್ತಿದೆ. ಭ್ರಷ್ಟಾಚಾರದ ಆರೋಪವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಬಿಜೆಪಿಯ ಭ್ರಷ್ಟ, ಜನ ವಿರೋಧಿ ಆಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಇವು ಕಾಂಗ್ರೆಸ್‌ಗೆ ಪೂರಕವಾಗಿವೆ.
* ಯಾವ ವಿಷಯದ ಆಧಾರದ ಮೇಲೆ ಚುನಾವಣೆ ಎದುರಿಸುವಿರಿ?
ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲವೇ ಇಲ್ಲ. ಧರ್ಮ ಆಧಾರಿತ ವಿಷಯವೇ ಬಿಜೆಪಿ ಅಜೆಂಡಾ. ಅದರಿಂದ ಪರಿಹಾರ ಏನೂ ಆಗುವುದಿಲ್ಲ. ಬಿಜೆಪಿಯವರು ಎಲ್ಲದಕ್ಕೂ ಧರ್ಮದ ವಿಚಾರವನ್ನು ತರುತ್ತಾರೆ. ರಾಜ್ಯದ ಜನತೆಗೆ ಅಭಿವೃದ್ಧಿ ಬೇಕಾಗಿದೆ. ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಬಿಜೆಪಿ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ವಿಚಾರದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ.
ಸಂಸತ್ ಚುನಾವಣೆಗೂ ಟಿಕೆಟ್ ಪ್ರಯೋಗ ನಡೀಲಿ. ನನ್ನಿಂದಲೇ ಶುರುವಾಗಲಿ: ನಳಿನ್ ಕಟೀಲ್
* ನಿಮ್ಮ ಗ್ಯಾರಂಟಿ ಕಾರ್ಡ್ ಸಕ್ಸಸ್ ಆಗೋ ಗ್ಯಾರಂಟಿ ನಿಮಗಿದೆಯೇ?
ನಿಜ, ರಾಜ್ಯದ ಜನತೆಗೆ ನಮ್ಮ ಗ್ಯಾರಂಟಿಗಳ ಭರವಸೆ ಕುರಿತು ಹೇಳಬೇಕಿದೆ. ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ, ನಾವು ಜನತೆ ಬಳಿ ಹೋಗಿ ಅವರಿಗೆ ನಮ್ಮ ಯೋಜನೆಗಳ ಕುರಿತು ಮನವರಿಕೆ ಮಾಡಬೇಕು. ಈ ಹಿಂದೆ ನಮ್ಮ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಸಿದ್ದರಾಮಯ್ಯ, ಮನಮೋಹನಸಿಂಗ್ ನೇತೃತ್ವದ ಸರ್ಕಾರದಲ್ಲಿ ನಾವು ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಬಂದರೆ ನಾವು ನೀಡಿದ ಭರವಸೆಗಳನ್ನು ನೂರಕ್ಕೆ ನೂರರಷ್ಟುಈಡೇರಿಸುತ್ತೇವೆ. ಇವು ನಮ್ಮ ಗೆಲುವಿಗೆ ಅನುಕೂಲವಾಗುತ್ತವೆ.
* ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಡಳಿತದಲ್ಲಿ ಯಾವ ಬದಲಾವಣೆ ನಿರೀಕ್ಷಿಸಬಹುದು?
ನಾವು ನೀಡಿರುವ ಹೊಸ ಭರವಸೆಗಳ ಜೊತೆಗೆ ಹಳೆಯ ಯೋಜನೆಗಳನ್ನು ಮುಂದುವರಿಸುತ್ತೇವೆ. ನಮ್ಮ ಸರ್ಕಾರದ ಅವಧಿಯಲ್ಲಿನ ಬಹಳಷ್ಟುಯೋಜನೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದ್ ಆಗಿವೆ. ಹಳೆಯ ಯೋಜನೆ ಜೊತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ 100 ಮನೆಗಳನ್ನು ಕೊಟ್ಟಿದ್ದೇವೆ. ಇದರಿಂದ ಬಡವರಿಗೆ ಅನುಕೂಲವಾಗಿದೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮನೆಗಳನ್ನೇ ಕೊಟ್ಟಿಲ್ಲ. ನಾವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.