ರಾಮ-ಹನುಮನಂತೆ ಬಜರಂಗಿ, ಬಜರಂಗ ದಳ ಸಂಬಂಧ: ಸಿಎಂ ಬೊಮ್ಮಾಯಿ
ರಾಮನಿಗೂ ಹನುಮನಿಗೂ ಇರುವ ಸಂಬಂಧವೇ ಬಜರಂಗ ದಳಕ್ಕೂ ಆಂಜನೇಯನಿಗೂ ಇದೆ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಬಜರಂಗ ದಳದ ವಿಚಾರದಲ್ಲಿ ಕಾಂಗ್ರೆಸ್ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿ (ಮೇ.05): ರಾಮನಿಗೂ ಹನುಮನಿಗೂ ಇರುವ ಸಂಬಂಧವೇ ಬಜರಂಗ ದಳಕ್ಕೂ ಆಂಜನೇಯನಿಗೂ ಇದೆ. ಇದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು. ಬಜರಂಗ ದಳದ ವಿಚಾರದಲ್ಲಿ ಕಾಂಗ್ರೆಸ್ ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಮೂಲಕ ಬಜರಂಗ ದಳಕ್ಕೂ ಆಂಜನೇಯನಿಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಜರಂಗ ದಳ ನಿಷೇಧಿಸುವ ಪ್ರಣಾಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಪಿಮುಷ್ಟಿಯಲ್ಲಿದೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ನಾವು ಎಸ್‌ಡಿಪಿಐ, ಪಿಎಫ್‌ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಪಿಎಫ್‌ಐ ಬ್ಯಾನ್ ಆಗಿದ್ದರೂ ಕಾಂಗ್ರೆಸ್ ತಮ್ಮ ಪರ ಮಾತನಾಡುತ್ತಿಲ್ಲ ಎಂಬ ಅಸಮಾಧಾನ ಪಿಎಫ್‌ಐಗಿದೆ. ನಮಗೆ ಕಾಂಗ್ರೆಸ್ ರಕ್ಷಣೆ ಕೊಡುತ್ತಿಲ್ಲ, ನಾವ್ಯಾಕೆ ನಿಮಗೆ ರಕ್ಷಣೆ ಕೊಡಬೇಕು ಎಂದು ಪಿಎಫ್‌ಐ ನಾಯಕರು ಕಾಂಗ್ರೆಸ್ ಅನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ಜನರಿಗೆ ತೊಂದರೆ ಹಿನ್ನೆಲೆ: ಪ್ರಧಾನಿ ಮೋದಿ ರೋಡ್ ಶೋ 1 ದಿನ ಅಲ್ಲ, 2 ದಿನ
ಪಿಎಫ್‌ಐನ ಇನ್ನೊಂದು ರೂಪ ಎಸ್‌ಡಿಪಿಐ. ಇದರ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಪ್ರಬಲವಾಗಿ ಬೆಳೆದಿದ್ದವು. ಈಗ ಬಾಲವೇ ದೇಹವನ್ನು ಅಲುಗಾಡಿಸುವ ಸ್ಥಿತಿ ಇದೆ. ಎಸ್‌ಡಿಪಿಐ ಬಿಜೆಪಿಯ ಬಿ ಟೀಂ ಅಲ್ಲ, ಬಿ ಟೀಂ ಆಗಿದ್ದರೆ ನಾವು ಪಿಎಫ್‌ಐ ಬ್ಯಾನ್ ಮಾಡುತ್ತಿದ್ದೆವಾ ಎಂದು ಪ್ರಶ್ನಿಸಿದ ಅವರು, ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದರು.
ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ತನ್ನ ಭರವಸೆ ಮೇಲೆ ಚುನಾವಣೆ ಎದುರಿಸುತ್ತಿದೆ. ಅನಾವಶ್ಯಕವಾಗಿ ಕೆದಕಿ ಚುನಾವಣೆ ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆಗಳ ಮೂಲಕ ಕೆರಳಿಸುವುದು ಸರಿಯಲ್ಲ. ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣ ತೋರಿಸುತ್ತದೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಬಿಜೆಪಿ ಜನಪರ ಯೋಜನೆಗಳೆ ಗೆಲುವಿಗೆ ಶ್ರೀರಕ್ಷೆ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರದ ಅನೇಕ ಜನಪರ ಯೋಜನೆಗಳೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಹು-ಧಾ ಪೂರ್ವ ಕ್ಷೇತ್ರದ ಅಭ್ಯರ್ಥಿ ಡಾ. ಕ್ರಾಂತಿಕಿರಣ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಪೂರ್ವ ಕ್ಷೇತ್ರದ ಅರಳಿಕಟ್ಟಿಓಣಿ, ತಿಮ್ಮಸಾಗರ ಓಣಿ, ದಿವಟೆಗಲ್ಲಿ, ಬ್ಯಾಳಿ ಓಣಿ ಸುತ್ತಲಿನ ಭಾಗದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ-ಪಿಎಫ್ಐ ಕಪಿಮುಷ್ಟಿಯಲ್ಲಿದೆ: ಸಿಎಂ ಬೊಮ್ಮಾಯಿ
10 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ಬೇಸತ್ತ ಕ್ಷೇತ್ರದ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕ್ಷೇತ್ರಾದ್ಯಂತ ಬದಲಾವಣೆಯ ಗಾಳಿ ಬಲವಾಗಿ ಬೀಸಿದ್ದು, ಬಿಜೆಪಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಪೂರ್ವ ಕ್ಷೇತ್ರದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ. ಎಲ್ಲ ವಾರ್ಡ್‌ಗಳಲ್ಲೂ ಸಮಸ್ಯೆಗಳು ಉಲ್ಬಣಿಸಿವೆ. ಈ ಬಾರಿ ಬಿಜೆಪಿಗೆ ಬೆಂಬಲಿಸಿದಲ್ಲಿ ಕ್ಷೇತ್ರದಲ್ಲಿರುವ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಕೆಲಸ ಮಾಡುವೆ. ಮತದಾರು ಈ ಬಾರಿ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಕ್ಷೇತ್ರದಲ್ಲಿ ಕಮಲದ ಬಾವುಟ ಹಾರಿಸಲು ಕೈಜೋಡಿಸುವಂತೆ ಮನವಿ ಮಾಡಿದರು.