ಜನರಿಗೆ ತೊಂದರೆ ಹಿನ್ನೆಲೆ: ಪ್ರಧಾನಿ ಮೋದಿ ರೋಡ್‌ ಶೋ 1 ದಿನ ಅಲ್ಲ, 2 ದಿನ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 6 ಮತ್ತು 7ರಂದು ರಾಜಧಾನಿಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಹೆಸರಿನಲ್ಲಿ ಎರಡು ದಿನಗಳ ಕಾಲ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. 

Karnataka Election 2023 PM Narendra Modis road show in Bengaluru is not 1 day but 2 days gvd

ಬೆಂಗಳೂರು (ಮೇ.05): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 6 ಮತ್ತು 7ರಂದು ರಾಜಧಾನಿಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಹೆಸರಿನಲ್ಲಿ ಎರಡು ದಿನಗಳ ಕಾಲ ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ರೋಡ್‌ ಶೋ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಪೂರ್ವಭಾವಿ ಸಭೆ ಬಳಿಕ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಕುರಿತು ಮಾಹಿತಿ ನೀಡಿದರು.

ಪ್ರಧಾನಿ ಮೋದಿ ಅವರು ರಾಜಧಾನಿಯಲ್ಲಿ ಎಲ್ಲರನ್ನೂ ನೋಡಬೇಕು ಹಾಗೂ 18 ಕ್ಷೇತ್ರಗಳಿಗೆ ಭೇಟಿ ನೀಡಬೇಕು ಎಂಬ ಆಶಯದೊಂದಿಗೆ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಒಂದೇ ದಿನ ರೋಡ್‌ ಶೋ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಎರಡು ದಿನ ರೋಡ್‌ ಶೋ ನಡೆಸಲಾಗುತ್ತಿದೆ. ಸಾರ್ವಜನಿಕರ ಭಾವನೆಗಳಿಗೆ ಗೌರವ ಕೊಟ್ಟು ಪ್ರಧಾನಿ ಎರಡು ದಿನ ರೋಡ್‌ ಶೋ ನಡೆಸುತ್ತಿದ್ದಾರೆ. ಮೇ 6ರಂದು 10 ಕಿ.ಮೀ. ಮತ್ತು ಮೇ 7ರಂದು 26 ಕಿ.ಮೀ. ಸೇರಿ ಎರಡು ದಿನ ಒಟ್ಟು 36 ಕಿ.ಮೀ. ಉದ್ದದ ರೋಡ್‌ ಶೋ ನಡೆಯಲಿದೆ. ಈ ಬೃಹತ್‌ ರೋಡ್‌ ಶೋನಲ್ಲಿ 10 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಎಂದರು.

ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ

ಮೇ 6ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಆರಂಭವಾಗುವ ರೋಡ್‌ ಶೋ ಮಧ್ಯಾಹ್ನ 1.30ಕ್ಕೆ ಬ್ರಿಗೇಡ್‌ ರಸ್ತೆಯ ಯುದ್ಧ ಸ್ಮಾರಕದಲ್ಲಿ ಅಂತ್ಯವಾಗಲಿದೆ. ಮೇ 7ರಂದು ಬೆಳಗ್ಗೆ 10 ಗಂಟೆಗೆ ಬ್ರಿಗೇಡ್‌ ರಸ್ತೆಯ ಯುದ್ಧ ಸ್ಮಾರಕದಿಂದ ಶುರುವಾಗಿ ಮಧ್ಯಾಹ್ನ 1.30ಕ್ಕೆ ಮಲ್ಲೇಶ್ವರದ ಸ್ಯಾಂಕಿ ಕೆರೆ ಬಳಿ ಅಂತ್ಯಗೊಳ್ಳಲಿದೆ. ರೋಡ್‌ ಶೋ ಮಾರ್ಗದ ವಿವರಗಳನ್ನು ಸಾರ್ವಜನಿಕರಿಗೆ ನೀಡುವುದಾಗಿ ಶೋಭಾ ಕರಂದ್ಲಾಜೆ ಹೇಳಿದರು.

ಮೇ.6ರಂದು ಪ್ರಧಾನಿ ಮೋದಿ ಬೃಹತ್‌ ರೋಡ್‌ ಶೋ: ಬೆಂಗಳೂರಿನ 18 ಕ್ಷೇತ್ರಗಳಲ್ಲಿ ಸಂಚಾರ

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ಬೆಂಗಳೂರಿನಲ್ಲಿ ರೋಡ್‌ ಶೋ ಮಾಡಲಿದ್ದಾರೆ. ಪ್ರಧಾನಿ ಅವರನ್ನು ಸ್ವಾಗತಿಸಲು ಜನರು ಉತ್ಸುಕರಾಗಿದ್ದಾರೆ. ಬೆಂಗಳೂರಿನ ಜನತೆ ಬಹಳ ಹತ್ತಿರದಿಂದಲೇ ಮೋದಿ ಅವರನ್ನು ನೋಡಬಹುದು. ನರೇಂದ್ರ ಮೋದಿ ಅವರ ಈ ರೋಡ್‌ ಶೋನಿಂದ ಬೆಂಗಳೂರಿನಲ್ಲಿ ಬಿಜೆಪಿ 20 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios