ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ-ಪಿಎಫ್ಐ ಕಪಿಮುಷ್ಟಿಯಲ್ಲಿದೆ: ಸಿಎಂ ಬೊಮ್ಮಾಯಿ
ನಾವು ಎಸ್‌ಡಿಪಿಐ, ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹುಬ್ಬಳ್ಳಿ (ಮೇ.04): ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಹಾಗೂ ಪಿಎಫ್ಐ ಕಪಿಮುಷ್ಟಿಯಲ್ಲಿದ್ದು, ಅದರಿಂದ ಹೊರಬರಲು ಸಾಧ್ಯವಿಲ್ಲ. ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಾವು ಎಸ್‌ಡಿಪಿಐ, ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಪಿಎಫ್ಐ ಬ್ಯಾನ್ ಆಗಿದ್ದರೂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂಬ ಅಸಮಾಧಾನ ಪಿಎಪಿಐಗಿದೆ. ನಮಗೆ ರಕ್ಷಣೆ ಕೊಡುತ್ತಿಲ್ಲ. ನಾವು ಯಾಕೆ ನಿಮಗೆ ರಕ್ಷಣೆ ಕೊಡಬೇಕು ಅಂತ ಪಿ.ಎಫ್.ಐ ನಾಯಕರು ಪ್ರಶ್ನಿಸುತ್ತಿದ್ದಾರೆ. ಪಿ.ಎಫ್.ಐ. ನ ಇನ್ನೊಂದು ರೂಪ ಎಸ್.ಡಿ.ಪಿ.ಐ. ಅದರ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ ಅವರು ಕೊಡುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್‌ನ ಕಾಲದಲ್ಲಿ ಎಸ್.ಡಿ.ಪಿ.ಐ., ಪಿ.ಎಫ್.ಐ ಪ್ರಬಲವಾಗಿ ಬೆಳೆದಿದ್ದವು.
ಎಸ್.ಡಿ.ಪಿ.ಐ ಬಿಜೆಪಿಯ ಬಿ. ಟೀಂ ಅಲ್ಲ. ಬಿ ಟೀಂ ಆಗಿದ್ದರೆ ನಾವು ಪಿ.ಎಫ್.ಐ ಬ್ಯಾನ್ ಮಾಡ್ತಿದ್ದೆವಾ..? ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಬಜರಂಗ ದಳಕ್ಕೆ ಆಂಜನೇಯನಿಗೆ ಏನು ಸಂಬಂಧ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ, ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ. ಆಂಜನೇಯನಿಗೂ ಭಜರಂಗ ದಳಕ್ಕಿದೆ. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬಜರಂಗ ದಳ ನಿಷೇಧ ಭರವಸೆಗೆ ಕಾಂಗ್ರೆಸ್ ಬದ್ಧ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಬ್ರಿಟಿಷ ವಂಶಸ್ಥರ ಪಕ್ಷ: ಕಾಂಗ್ರೆಸ್ ಪಕ್ಷವು ಬ್ರಿಟಿಷರ ವಂಶಸ್ಥರ ಪಕ್ಷವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿದರು. ಬುಧವಾರ ರಾತ್ರಿ ಇಲ್ಲಿನ ಪೂರ್ವ ಕ್ಷೇತ್ರದ ಅಭ್ಯರ್ಥಿ ಡಾ. ಕ್ರಾಂತಿಕಿರಣ ಪರವಾಗಿ ಮಂಗಳವಾರ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಸ್ವಾಂತಂತ್ರ ಪೂರ್ವದಲ್ಲಿ ಬ್ರಿಟಿಷರು ನಮ್ಮನ್ನು ಆಳಿದರೆ ಸ್ವಾತಂತ್ಯನಂತರ ಕಾಂಗ್ರೆಸ್ ನಮ್ಮನ್ನ ಆಳುತ್ತಿದೆ. ಜಾತಿ-ಜಾತಿಗಳ ನಡುವೆ ವೈಷಮ್ಯ ಬೆಳೆಸುವ ಮೂಲಕ ಜನರಲ್ಲಿ ದ್ವೇಷವನ್ನುಂಟು ಮಾಡುತ್ತಾ ಒಡೆದಾಳುವ ನೀತಿ ಅನುಸರಿಸುತ್ತಿದೆ.
ದೀನ, ದಲಿತರ, ಮುಸ್ಲಿಂರ ಏಳ್ಗೆ ಬಯಸದ ಇವರು ಕೇವಲ ವೋಟ್‌ಬ್ಯಾಂಕ್ ಆಗಿ ಬಳಸುತ್ತಿದ್ದಾರೆ. ಪೂರ್ವ ಕ್ಷೇತ್ರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ಅಕ್ಕಪಕ್ಕದ ಕ್ಷೇತ್ರಗಳನ್ನು ಹೋಲಿಸದರೆ ಇಲ್ಲಿ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ, ಕೇಂದ್ರ- ರಾಜ್ಯ ಸರ್ಕಾರದ ಯೋಜನೆಗಳು ಇಲ್ಲಿ ತಲುಪದೇ ಅಭಿವೃದ್ಧಿ ವಂಚಿತವಾಗಿದೆ. ಈಗ ಎಲ್ಲಡೆ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈಗ ಈ ಪೂರ್ವಕ್ಷೇತ್ರದಲ್ಲೂ ಬದಲಾವಣೆಯ ಪರ್ವ ಆರಂಭವಾಗುವ ಲಕ್ಷಣ ಕಾಣುತ್ತಿದೆ. ನೀವು ಕಾಂಗ್ರೆಸ್ಸಿಗೆ ಮತ ಹಾಕಿದ್ದೇ ಆದಲ್ಲಿ ಮತ್ತೇ 5 ವರ್ಷಗಳ ಕಾಲ ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸಲಿದ್ದೀರಿ.
ಚುನಾವಣಾ ಪ್ರಚಾರ ಅಖಾಡಕ್ಕೆ ಸೋನಿಯಾ ಗಾಂಧಿ: 6ರಂದು ಹುಬ್ಬಳ್ಳಿಯಲ್ಲಿ ರ್ಯಾಲಿ
ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿಡಿದ ರೋಗ ನಿವಾರಣೆ ಮಾಡಬೇಕಾದರೆ ಡಾ. ಕ್ರಾಂತಿಕಿರಣ ಅವರನ್ನು ಬೆಂಬಲಿಸಿದಾಗ ಮಾತ್ರ ಸಾಧ್ಯ. ಹಾಗಾಗಿ ಈ ಬಾರಿ ಬಿಜೆಪಿಗೆ ಬೆಂಬಲಿಸುವ ಮೂಲಕ ಕ್ಷೇತ್ರದಲ್ಲಿ ಕಮಲದ ಬಾವುಟ ಹಾರುವಂತೆ ಮಾಡಿ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.