ಕಾಂಗ್ರೆಸ್‌ದು ಗ್ಯಾರಂಟಿ ಕಾರ್ಡಲ್ಲ, ವಿಸಿಟಿಂಗ್ ಕಾರ್ಡ್: ಸಿಎಂ ಬೊಮ್ಮಾಯಿ ವ್ಯಂಗ್ಯ
ಜನರನ್ನು ಯಾಮಾರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಸಿಟಿಂಗ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಭಾಲ್ಕಿ /ಕಲಬುರಗಿ (ಏ.21): ಜನರನ್ನು ಯಾಮಾರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನವರದ್ದು ಗ್ಯಾರಂಟಿ ಕಾರ್ಡ್ ಅಲ್ಲ, ಅದೊಂದು ವಿಸಿಟಿಂಗ್ ಕಾರ್ಡ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಬೀದರ್ ಹಾಗೂ ಕಲಬುರಗಿ ಜಿಲ್ಲೆಯ ಹಲವೆಡೆ ಬಿಜೆಪಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್ ನೀಡುವುದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಲ್ಲ, ಅದರಲ್ಲಿ ಹಣವೂ ಇಲ್ಲ, ಅದು ಯಾವ ಪ್ರಯೋಜನಕ್ಕೂ ಬಾರದು ಎಂದರು. ಬಿಜೆಪಿ ಸರ್ಕಾರದಲ್ಲಿ ರಸ್ತೆ, ನೀರಾವರಿ, ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದೇವೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್, ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದೆ ಎಂದರು. ಮಾತೆತ್ತಿದರೆ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಸಾಮಾಜಿಕ ನ್ಯಾಯ ಎಲ್ಲಿದೆ?. ಸಾಮಾಜಿಕ ನ್ಯಾಯವನ್ನು ಯಾರಿಗೆ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ಮೀಸಲಾತಿ ಕುರಿತು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಒಳ ಮೀಸಲಾತಿ ಹೆಚ್ಚಳ ಕುರಿತು ಮೌನ ವಹಿಸಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.
ವಾಮಮಾರ್ಗದಿಂದ ಡಿಕೆಶಿ ಸ್ಪರ್ಧೆ ತಡೆಯಲು ಬಿಜೆಪಿ ಯತ್ನ: ಸಂಸದ ಡಿ.ಕೆ.ಸುರೇಶ್
ಬಿಜೆಪಿ ಜಾರಿಗೆ ತಂದಿರುವ ಶೋಷಿತ ಸಮುದಾಯಗಳ ಒಳ ಮೀಸಲಾತಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ತಾವು ಅಧಿಕಾರಕ್ಕೆ ಬಂದರೆ, ಮೀಸಲಾತಿಯನ್ನು ರದ್ದು ಮಾಡುತ್ತೇವೆಂದು ಹೇಳುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ಗೆ ನೀವು ಹಾಕುವ ಒಂದೊಂದು ಮತವೂ ಮೀಸಲಾತಿ ರದ್ದತಿಗೆ ಸಹಕರಿಸಿದಂತಾಗುತ್ತದೆ. ಅದಕ್ಕೇ ಕಾಂಗ್ರೆಸ್‌ನ್ನು ತಿರಸ್ಕರಿಸಿ, ಬಿಜೆಪಿಯನ್ನು ಪುರಸ್ಕರಿಸಿ ಎಂದು ಜನರಿಗೆ ಕರೆ ನೀಡಿದರು. ಒಂದು ವೇಳೆ ಮೀಸಲಾತಿ ಪ್ರಕ್ರಿಯೆ ರದ್ದುಪಡಿಸಿದರೆ ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿ ಆಗುತ್ತದೆ ಎಂದು ಎಚ್ಚರಿಸಿದರು. ಈ ಬಾರಿ 70 ಸ್ಥಾನಗಳನ್ನು ಲಿಂಗಾಯತರಿಗೆ ನೀಡಲಾಗಿದೆ. ಬಿಜೆಪಿ ಯಾವಾಗಲೂ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಕಳೆದ ಸಲ ಧರ್ಮ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಲಿಂಗಾಯತರನ್ನು ಛಿದ್ರ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ವರುಣಾದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಸಚಿವ ಅಶ್ವತ್ಥನಾರಾಯಣ ಭವಿಷ್ಯ
ಡಿಕೆಸು ನಾಮಪತ್ರ: ಡಿಕೆಶಿಗೂ ಭಯವೇ?: ಆಂತರಿಕ ಭಯದ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಸಂಸದ ಡಿ.ಕೆ.ಸುರೇಶ ನಾಮಪತ್ರ ಹಾಕಿದ್ದಾರೆ. ಯಾವ ಭಯದ ಹಿನ್ನೆಲೆಯಲ್ಲಿ ನಾಮಪತ್ರ ಹಾಕಿದ್ದಾರೆ ಎಂಬುದು ಅವರಿಗೇ ಗೊತ್ತು. ನಾಮಪತ್ರ ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು ಚುನಾವಣಾ ಆಯೋಗದ ಕೆಲಸ. ಸಿದ್ದರಾಮಯ್ಯನವರು ಎರಡು ಕಡೆ ನಾಮಪತ್ರ ಸಲ್ಲಿಸಲು ಯತ್ನಿಸಿದ್ದರು. ಸಿದ್ದುಗೆ ಕಾಡಿದಂತೆ ಡಿ.ಕೆ.ಶಿವಕುಮಾರ್‌ಗೂ ಭಯವೇ? ಎಂದು ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.