MLC Election Result: ಹಳೇ ಮೈಸೂರಲ್ಲೇ ನೆಲಕಚ್ಚಿದ ಜೆಡಿಎಸ್, ಭದ್ರಕೋಟೆ ಛಿದ್ರ-ಛಿದ್ರ..!

* ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟ
* ಬಿಜೆಪಿಗೆ ಮೇಲುಗೈ, ಕಾಂಗ್ರೆಸ್ ಪ್ರಬಲ ಹೋರಾಟ
 * ಭದ್ರಕೋಟೆಯಲ್ಲೇ ಹೀನಾಯ ಸೋಲು ಕಂಡ ಜೆಡಿಎಸ್ 
* ತಾನಿರುವ ಕಡೆಯಲ್ಲೇ ನೆಲಕಚ್ಚಿದ ಜೆಡಿಎಸ್ 

Karnataka Council Election Results: Setback for JDS in Old Mysuru rbj

ಬೆಂಗಳೂರು, (ಡಿ.14): ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ (Karnataka MLC Election) 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ(Election Result) ಹೊರಬಿದ್ದಿದ್ದು, ಜಾತ್ಯತೀತ ಜನತಾ ದಳ(ಜೆಡಿಎಸ್‌) (Janata Dal Secular) ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದೆ. 

ಹೌದು...ಜೆಡಿಎಸ್‌(JDS) ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದ್ದು, ಇನ್ನುಳಿದ ಕಡೆಗಳಲ್ಲಿ ಹೀನಾಯ ಸೋಲುಕಂಡಿದೆ. ಪ್ರಮುಖವಾಗಿ ಭದ್ರಕೋಟೆ ಎನ್ನಿಸಿಕೊಂಡಿದ್ದ ಹಳೇ ಮೈಸೂರಲ್ಲೇ ಮುಖಭಂಗದಲ್ಲೇ ಜೆಡಿಎಸ್‌ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಇದರಿಂದ ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿ ಎನ್ನುವ ಆತಂಕದಲ್ಲಿ ದಳಪತಿಗಳಿದ್ದಾರೆ.

MLC Election Result: ವಿಧಾನಪರಿಷತ್ ಚುನಾವಣಾ ಫಲಿತಾಂಶದ ಸಂಪೂರ್ಣ ಚಿತ್ರಣ ಇಲ್ಲಿದೆ

ಭದ್ರಕೋಟೆಯಲ್ಲೇ ಜೆಡಿಎಸ್ ಧೂಳೀಪಟ
 ಕಳೆದ ಬಾರಿ ಮೈಸೂರು, ಕೋಲಾರ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ಜೆಡಿಎಸ್ ಗೆದ್ದಿತ್ತು, ಆದ್ರೆ, ಈ ಬಾರಿ ಆ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಸೋತಿದ್ದು, ತಾನಿರುವ ಕಡೆಯಲ್ಲೇ ಜೆಡಿಎಸ್ ನೆಲಕಚ್ಚಿದೆ.  ಇದು ಜೆಡಿಎಸ್ ನಾಯಕರ ನಿದ್ದೆಗೆಡಿಸಿದೆ.

ಮತ್ತೊಂದೆಡೆ ಹಳೇ ಮೈಸೂರು ಭಾಗದಲ್ಲೇ ತೀವ್ರ ಹಿನ್ನಡೆಯ ನಡುವೆಯೂ ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕಾರಣ ಪ್ರವೇಶಿಸಿದೆ. ಹಾಸನ ವಿಧಾನ ಪರಿಷತ್ ಕ್ಷೇತ್ರದಲ್ಲಿ ಶಾಸಕ ಎಚ್​.ಡಿ.ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಈ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ವಿಧಾನಸೌಧ ಪ್ರವೇಶಿಸಿದ್ದಾರೆ.

ದೇವೇಗೌಡರ ರಾಜಕೀಯ ತವರು ಮನೆ ಹಾಸನದಲ್ಲಿ ಜೆಡಿಎಸ್‌ ಭಾರಿ ಅಂತರದ ಜಯ ದಾಖಲಿಸಿದೆ. ಗಮನಿಸಬೇಕಾದ ಅಂಶವೆಂದರೆ, 2015ರಲ್ಲಿ ನಡೆದಿದ್ದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಹಾಸನವನ್ನು ಕಳೆದುಕೊಂಡು ಇನ್ನುಳಿದ ಕಡೆ ಉತ್ತಮ ಸಾಧನೆ ಮಾಡಿತ್ತು. ಆದ್ರೆ, ಈ ಬಾರಿ ಹಾಸನ ಗೆದ್ದು ಇನ್ನುಳಿದ ಕಡೆ ಜೆಡಿಎಸ್ ಠುಸ್ ಆಗಿದೆ.

MLC Election Result: ವಿಧಾನ ಪರಿಷತ್ ಫಲಿತಾಂಶ, ಮೇಲುಗೈ ಸಾಧಿಸಿದ ಬಿಜೆಪಿ

ಹಾಸನ ನಂತರ ಜೆಡಿಎಸ್‌ ಭದ್ರಕೋಟೆ ಎಂದು ಕರೆಸಿಕೊಳ್ಳುವ ಮಂಡ್ಯದಲ್ಲಿ  ಈ ಬಾರಿ ಮರ್ಮಾಘಾತ ಅನುಭವಿಸಿದೆ. ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ದಿನೇಶ್‌ ಗೂಳಿಗೌಡ ಅವರ ವಿರುದ್ಧ, ವಿಧಾನ ಪರಿಷತ್‌ನ ಹಾಲಿ ಸದಸ್ಯರಾಗಿದ್ದ ಜೆಡಿಎಸ್‌ ಅಭ್ಯರ್ಥಿ ಅಪ್ಪಾಜಿ ಗೌಡ ಅವರು ಸೋತಿದ್ದಾರೆ. 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯದಲ್ಲಿ, ದಳದ 6 ಶಾಸಕರಿದ್ದರೂ ಗೆಲುವು ಸಿಕ್ಕಿಲ್ಲ.

ಜಿಟಿಡಿ ಜತೆಗಿನ ಕಿತ್ತಾಟ ಸೋಲಿಗೆ ಕಾರಣವಾಯ್ತಾ?
ಯೆಸ್...ಹಳೇ ಮೈಸೂರು ಬಾಗದಲ್ಲಿ ಜೆಡಿಎಸ್ ಸೊರಗುತ್ತಿದೆ. ಜಿ.ಟಿ ದೇವೇಗೌಡ, ಸಂದೇಶ್‌ ನಾಗರಾಜ್‌ ಮತ್ತು ಎಚ್‌.ಡಿ ಕುಮಾರಸ್ವಾಮಿ ಅವರ ಕಿತ್ತಾಟ ಶುರುವಾದಗಿನಿಂದಲೂ ಮೈಸೂರು ಜಿಲ್ಲೆಯಲ್ಲಿಜೆಡಿಎಸ್ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ.  ಇದಕ್ಕೆ ಪೂರಕವೆಂಬಂತೆ ದ್ವಿಸದಸ್ಯ ಕ್ಷೇತ್ರವಾಗಿರುವ ಮೈಸೂರಿನಲ್ಲಿ ಹಿಂದಿನ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್, ಈ ಬಾರಿ ಮೂರನೇ ಸ್ಥಾನಕ್ಕೆ ತಳ್ಳಲ್ಪಿಟ್ಟಿದೆ.  

ಕುಮಾರಸ್ವಾಮಿ ಮಾತುಗಳಿಂದಲೇ ಜಿಟಿ ದೇವೇಗೌಡ ಈ ಬಾರಿ ಪರಿಷತ್ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ರು. ಇದು ಒಂದು ರೀತಿಯಲ್ಲಿ ಜೆಡಿಎಸ್‌ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.  ಜಿಟಿಡಿ ಹಾಗೂ ಸಂದೇಶ ನಾಗರಾಜ್ ಜೊತೆಗಿನ ಕಿತ್ತಾಟದಿಂದ ಈ ಬಾರಿ ಪರಿಷತ್‌ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ. 

 ಲೋಕಸಭೆ ಸೋಲಿನ ಪ್ರತಿಕಾರ ವಿಫಲ
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರಿಗೆ ಎದುರಾದ ಸೋಲಿಗೆ ಪ್ರತಿಕಾರ ತುಮಕೂರು ಪರಿಷತ್‌ ಚುನಾವಣೆಯಲ್ಲಿ ಪಡೆಯುವುದಾಗಿ ಜೆಡಿಎಸ್‌ ಚುನಾವಣೆ ಪ್ರಚಾರದ ವೇಳೆ ಹೇಳಿತ್ತು. ಅದಕ್ಕಾಗಿ ಸರ್ಕಾರಿ ಅಧಿಕಾರಿ ಅನಿಲ್‌ ಕುಮಾರ್‌ ಅವರಿಂದ ರಾಜೀನಾಮೆ ಕೊಡಿಸಿದ್ದ ಜೆಡಿಎಸ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿತ್ತು. ಸಾಲದಕ್ಕೆ ಖುದ್ದು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತುಮಕೂರಿಲ್ಲೇ ಠಿಕಾಣಿಹೂಡಿ ಇನ್ನಿಲ್ಲದ ತಂತ್ರಗಳನ್ನ ಹೆಣೆದರು. ಆದ್ರೆ, ಆ ತಂತ್ರಗಳೆಲ್ಲಾ ತಲೆಕೆಗಾಗಿದ್ದು, ಕಾಂಗ್ರೆಸ್‌ ಗೆದ್ದಿದ್ದರೆ, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದರೊಂದಿಗೆ ಲೋಕಸಭೆ ಚುನಾವಣೆ ಸೋಲಿನ ಪ್ರತಿಕಾರ ಪಡೆಯುವ ಜೆಡಿಎಸ್‌ನ ಪ್ರಯತ್ನ ವಿಫಲವಾಗಿದೆ.

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದ ಬೆಮೆಲ್‌ ಕಾಂತರಾಜು ಈ ಬಾರಿ ಪಕ್ಷದಿಂದ ತೊರೆದಿದ್ದೂ ಜೆಡಿಎಸ್‌ಗೆ ಪ್ರತಿಕೂಲವಾಗಿರುವ ಸಾಧ್ಯತೆಗಳಿವೆ. ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸ್ವಲ್ಪದರಲ್ಲಿ ಜೆಡಿಎಸ್‌ನ ಕೈಜಾರಿತ್ತು. ಈ ಬಾರಿ ಗೆಲುವಿನ ನಿರೀಕ್ಷೆಯಲ್ಲೇ ವಿಧಾನ ಪರಿಷತ್‌ ಹಾಲಿ ಸದಸ್ಯ ರಮೇಶ್‌ ಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿತ್ತಾದರೂ, ಕಾಂಗ್ರೆಸ್‌ ಅಭ್ಯರ್ಥಿ ರವಿ ಅವರ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ಸೋತಿದ್ದಾರೆ.

ಇನ್ನು ಕೋಲಾರದಲ್ಲೂ ಜೆಡಿಎಸ್‌ಗೆ ಹೀನಾಯ ಸೋಲಾಗಿದೆ. ಚುನಾವಣೆಗೂ ಮೊದಲೇ ಹಾಲಿ ಸದಸ್ಯ ಮನೋಹರ್‌ ಪಕ್ಷ ತೊರೆದರು. ಕೋಲಾರದ ಶಾಸಕ ಶ್ರೀನಿವಾಸ ಗೌಡ ಅವರು ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿ ಕಾಂಗ್ರೆಸ್‌ಗೆ ಬೆಂಬಲಿಸಿದರು. ಇವೆಲ್ಲವೂ ಜೆಡಿಎಸ್‌ ಸೋಲಿಗೆ ಕಾರಣಗಳಾಗಿವೆ.
 

Latest Videos
Follow Us:
Download App:
  • android
  • ios