Mangaluru: ಜನಾರ್ದನ ಪೂಜಾರಿ ಪುತ್ರನಿಗೆ ಕಾಂಗ್ರೆಸ್ ಮಣೆ: ಮಹತ್ವದ ಹುದ್ಡೆ ನೀಡಿದ್ರೂ ಒಪ್ಪದ ದೀಪಕ್?
* ಜನಾರ್ದನ ಪೂಜಾರಿ ಪುತ್ರನಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ
* ಏಕಾಏಕಿ ಹೆಸರು ಸೇರ್ಪಡೆ ಕುತೂಹಲ ಮೂಡಿಸಿದೆ
* ರಾಷ್ಟ್ರೀಯ ವರ್ಚಸ್ಸು ಹೊಂದಿರುವ ಜನಾರ್ದನ ಪೂಜಾರಿ
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಏ.11): ಕಾಂಗ್ರೆಸ್(Congress) ಹಿರಿಯ ಮುಖಂಡ ಹಾಗೂ ಕಾಂಗ್ರೆಸ್‌ನ ಗಾಂಧಿ ಕುಟುಂಬದ ಆಪ್ತ ಜನಾರ್ದನ ಪೂಜಾರಿ(Janardhana Poojary) ಪುತ್ರನಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ರಾಜಕೀಯದಿಂದಲೇ ಸಂಪೂರ್ಣವಾಗಿ ದೂರ ಇರುವ ಪೂಜಾರಿ ಪುತ್ರನಿಗೆ ಹುದ್ದೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಹುದ್ದೆಯನ್ನು ಪೂಜಾರಿ ಮತ್ತು ಪೂಜಾರಿ ಪುತ್ರ ಒಪ್ಪಿಲ್ಲ ಎಂದು ಪೂಜಾರಿ ಆಪ್ತ ಮೂಲಗಳು ತಿಳಿಸಿವೆ.
ಜನಾರ್ದನ ಪೂಜಾರಿ ಪುತ್ರ ದೀಪಕ್ ಪೂಜಾರಿಗೆ(Deepak Poojary) ಕಾಂಗ್ರೆಸ್‌ನಲ್ಲಿ ಹೊಸ ಹುದ್ದೆ ನೀಡಲಾಗಿದ್ದು, ಎಐಸಿಸಿ ಹೊರಡಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಟ್ಟಿಯಲ್ಲಿ ಪೂಜಾರಿ ಪುತ್ರನ ಹೆಸರು ಕಾಣಿಸಿಕೊಂಡಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಪೂಜಾರಿ ಹೆಸರಿದೆ. ಮಕ್ಕಳನ್ನು ಜನಾರ್ದನ ಪೂಜಾರಿ ರಾಜಕೀಯದಿಂದ(Politics) ದೂರ ಉಳಿಸಿದ್ದರೂ ಈ ಲಿಸ್ಟ್‌ನಲ್ಲಿ ಏಕಾಏಕಿ ಹೆಸರು ಸೇರ್ಪಡೆ ಕುತೂಹಲ ಮೂಡಿಸಿದೆ.
ಬ್ಯಾರಿ ಅಕಾಡೆಮಿಯಿಂದ ರಹೀಂ ಪದಚ್ಯುತಿ: ಬಿಜೆಪಿ ಮುಸ್ಲಿಂ ಮುಖಂಡನ ವಿರುದ್ಧ ಕೇಸರಿ ಪಡೆಯ ಅಸಮಾಧಾನ?
ಕುದುರೆ ಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಎಂಜಿನಿಯರ್ ಆಗಿರುವ ದೀಪಕ್ ಪೂಜಾರಿ ರಾಜಕೀಯ ಚಟುವಟಿಕೆಗಳಿಂದ ದೂರ ಇದ್ದರು. ಒಂದೆರಡು ಬಾರಿ ತಂದೆಯ ಚುನಾವಣೆ(Election) ಹೊತ್ತಲ್ಲಿ ಕೆಲಸ ಮಾಡಿದ್ದು ಬಿಟ್ಟರೆ ಎಲ್ಲೂ ರಾಜಕೀಯವಾಗಿ ಕಾಣಿಸಿಕೊಂಡಿಲ್ಲ. ಪೂಜಾರಿ ಸಕ್ರಿಯ ರಾಜಕಾರಣದಲ್ಲಿ ಇದ್ದಾಗಲೂ ಮಕ್ಕಳನ್ನು ರಾಜಕೀಯಕ್ಕೆ ಕರೆ ತಂದಿರಲಿಲ್ಲ. ಪೂಜಾರಿ ಅವರ ಮೂವರು ಮಕ್ಕಳ ಪೈಕಿ ಮೊದಲ ಮಗ ವಿಭಾಕರ ಹಾಗೂ ಮತ್ತೊಬ್ಬ ಸಂತೋಷ್ ದೆಹಲಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಮೂರನೇ ಮಗ ದೀಪಕ್ ಪೂಜಾರಿ ಕುದುರೆ ಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದಾರೆ.
ಪೂಜಾರಿ ಹೆಸರಲ್ಲಿ ಪಕ್ಷ ಸಂಘಟನೆ ಪ್ಲಾನ್!
ಜನಾರ್ದನ ಪೂಜಾರಿ ರಾಷ್ಟ್ರೀಯ ವರ್ಚಸ್ಸು ಹೊಂದಿದ್ದ ನಾಯಕ. ಜೊತೆಗೆ ಪ್ರಮಾಣಿಕ ಅಂತಾನೇ ಗುರುತಿಸಿಕೊಂಡಿದ್ದ ಪೂಜಾರಿ, ಕಾಂಗ್ರೆಸ್ ಹೈಕಮಾಂಡ್(Congress High Command) ಜೊತೆಗೂ ನೇರ ಸಂಪರ್ಕ ಹೊಂದಿದ್ದಾರೆ. ಈಗಲೂ ಕಾಂಗ್ರೆಸ್‌ನಲ್ಲಿ ಜನಾರ್ದನ ಪೂಜಾರಿ ಗೌರವ ಉಳಿಸಿಕೊಂಡಿದ್ದು, ಸಾರ್ವಜನಿಕ ಬದುಕಿನಲ್ಲೂ ಶುದ್ದಹಸ್ತ. ಹೀಗಾಗಿ ಪೂಜಾರಿ ಪುತ್ರನಿಗೆ ಹುದ್ದೆ ನೀಡಿ ತಂದೆಯ ಹೆಸರಿನಲ್ಲಿ ಕರಾವಳಿ ಭಾಗದಲ್ಲಿ ಪಕ್ಷ ಬಲವರ್ಧನೆಯ ಯೋಜನೆ ಕಾಂಗ್ರೆಸ್ ರೂಪಿಸಿದಂತೆ ಕಾಣುತ್ತಿದೆ. ಆದರೆ ಪೂಜಾರಿ ಆಪ್ತ ಮೂಲಗಳ ಪ್ರಕಾರ ಪೂಜಾರಿ ಪುತ್ರ ದೀಪಕ್ ಈ ಹುದ್ದೆ ಪಡೆಯೋದು ಅನುಮಾನ. ಇನ್ನು ಇದಕ್ಕೆ ಜನಾರ್ದನ ಪೂಜಾರಿ ಕೂಡ ಒಪ್ಪಿಗೆ ಸೂಚಿಸಲ್ಲ ಎನ್ನಲಾಗಿದೆ. ಸದ್ಯ ಪೂಜಾರಿ ಪುತ್ರ ದೀಪಕ್‌ಗೆ ಕರೆ ಮಾಡಿದ್ರೂ ಕರೆ ಸ್ವೀಕರಿಸುತ್ತಿಲ್ಲ.