Will Siddaramaiah resign today ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಆದೇಶದಂತೆ ರಾಜೀನಾಮೆ ನೀಡುವ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ತಮ್ಮ ರಾಜೀನಾಮೆಯನ್ನು ತಡೆಯಲು ಆಪ್ತ ಸಚಿವರು ಮತ್ತು ಶಾಸಕರು ನಡೆಸಿದ ಸಹಿ ಸಂಗ್ರಹದಂತಹ ಪ್ರಯತ್ನಗಳನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
- ಸಹಿ ಸಂಗ್ರಹ ಮಾಡದಂತೆ ಸಿಎಂ ತಾಕೀತು।
- ರಾಜೀನಾಮೆ ಬಳಿಕ ಹೈಕಮಾಂಡ್ ಬಳಿ ಹೋಗಿ: ಸಿದ್ದು
ಬೆಂಗಳೂರು (ಮೇ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡದಂತೆ ತಡೆಯಲು ಆಪ್ತ ನಾಯಕರು ತೀವ್ರ ಒತ್ತಡ ಹಾಕಿದ್ದು, ಅಗತ್ಯವಾದರೆ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಶಾಸಕರ ಸಹಿ ಸಂಗ್ರಹ ನಡೆಸೋಣ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಂದು ಪಟ್ಟುಹಿಡಿದಿದ್ದರು ಎಂದು ತಿಳಿದುಬಂದಿದೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾವುದೇ ಕಾರಣಕ್ಕೂ ಸಹಿ ಸಂಗ್ರಹದಂತಹ ಪ್ರಯತ್ನ ಮಾಡಬೇಡಿ ಎಂದು ತಮ್ಮ ಬೆಂಬಲಿಗರಿಗೆ ತಾಕೀತು ಮಾಡಿದರು ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಹಿರಿಯ ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್, ಎಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭೇಟಿ ಮಾಡಿದ್ದರು. ಈ ವೇಳೆ ಕೆಲ ಸಚಿವರು ಹಾಗೂ ಶಾಸಕರು, ಹೈಕಮಾಂಡ್ ನಾಯಕರು ನಿಮಗೆ ರಾಜೀನಾಮೆ ನೀಡಲು ಹೇಳಿರಬಹುದು. ಆದರೆ, ಮುಂದಿನ ಮುಖ್ಯಮಂತ್ರಿ ಯಾರೆಂಬುದರ ಬಗ್ಗೆಯೂ ಸೇರಿ ಯಾವುದರ ಬಗ್ಗೆಯೂ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಆತುರದ ನಿರ್ಧಾರ ಮಾಡಬೇಡಿ ಎಂದು ಒತ್ತಡ ಹೇರಲು ಯತ್ನಿಸಿದರು.
\Bರಾಹುಲ್ ಗಾಂಧಿ ಹೇಳಿದ್ದು, ರಾಜೀನಾಮೆ ನೀಡುವೆ:\B
ಅಲ್ಲದೆ, ರಾಜೀನಾಮೆಗೆ ಸೂಚನೆ ನೀಡಿರುವ ಹೈಕಮಾಂಡ್ ನಿರ್ಣಯದ ವಿರುದ್ಧ ಸಹಿ ಸಂಗ್ರಹ ಮಾಡುವುದಾಗಿಯೂ ಪಟ್ಟು ಹಿಡಿದರು. ಆದರೆ, ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಸಿದ್ದರಾಮಯ್ಯ ಇಂತಹ ಅಚಾತುರ್ಯಕ್ಕೆ ಕೈ ಹಾಕಬೇಡಿ. ರಾಹುಲ್ ಗಾಂಧಿ ಅವರು ನನಗೆ ನೇರವಾಗಿ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ನೀಡುತ್ತೇನೆ ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ನೀವು ವರಿಷ್ಠರ ಬಳಿಗೆ ಹೋಗುವುದಾದರೆ ನಾನು ರಾಜೀನಾಮೆ ನೀಡಿದ ಬಳಿಕ ಹೋಗಿ ನಿಮ್ಮ ಅಭಿಪ್ರಾಯ ಹೇಳಿ. ಆದರೆ, ನಾನಂತೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದಷ್ಟೇ ಹೇಳಿದರು ಎಂದು ತಿಳಿದುಬಂದಿದೆ.


