ರಾಜ್ಯದಲ್ಲಿ ಶೇ.50 ಮಹಿಳಾ ಮತದಾರರು ಇದ್ದರೂ 16ನೇ ವಿಧಾನಸಭೆಯಲ್ಲಿ ಸಚಿವ ಸಂಪುಟದ ಆದ್ಯತಾ ಪಟ್ಟಿಯಲ್ಲಿ ಯಾವೊಬ್ಬ ಮಹಿಳಾ ಶಾಸಕಿಯರಿಗೂ ಸಚಿವ ಸ್ಥಾನ ಲಭ್ಯವಾಗಿಲ್ಲ.

ಬೆಂಗಳೂರು (ಮೇ 20): ರಾಜ್ಯದಲ್ಲಿ ಶೇ.50 ಮಹಿಳಾ ಮತದಾರರು ಇದ್ದರೂ 16ನೇ ವಿಧಾನಸಭೆಯಲ್ಲಿ ಸಚಿವ ಸಂಪುಟದ ಆದ್ಯತಾ ಪಟ್ಟಿಯಲ್ಲಿ ಯಾವೊಬ್ಬ ಮಹಿಳಾ ಶಾಸಕಿಯರಿಗೂ ಸಚಿವ ಸ್ಥಾನ ಮಾತ್ರ ಲಭ್ಯವಾಗಿಲ್ಲ. ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಕಂಡುಬಂದಿದೆ. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಗಳಿಸುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಇಂದು ಸರ್ಕಾರ ರಚನೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಜನ ಕಿಚನ್‌ ಕ್ಯಾಬಿನೆಟ್‌ಗೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಒಟ್ಟು ಶೇ.50 ಮಹಿಳಾ ಮತದಾರರು ಇದ್ದರೂ ಅವರನ್ನು ಕೇವಲ ವೋಟ್‌ ಬ್ಯಾಂಕ್‌ಗೆ ಬಳಸಿಕೊಳ್ಳುವ ಕಾಂಗ್ರೆಸ್‌ ಆಡಳಿತ ಮಾಡುವಾಗ ಅವರನ್ನು ಅಧಿಕಾರದಿಂದ ದೂರ ಇಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆ: ಸಿಎಂ, ಡಿಸಿಎಂ ಜತೆ 8 ಜನ ಸಚಿವರ ಪ್ರಮಾಣ ವಚನ

ಕಾಂಗ್ರೆಸ್‌ನಿಂದ 4 ಶಾಸಕಿಯರಿದ್ದು, ಯಾರಿಗೆ ಸಿಗಲಿದೆ ಸಚಿವ ಸ್ಥಾನ: ಇನ್ನು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಲ್ಲಿ ಮಹಿಳೆಯರು ಆಯ್ಕೆಯಾಗಿದ್ದಾರೆ. ಈ ಪೈಕಿ ಕಾಂಗ್ರೆಸ್‌ನಿಂದ ನಾಲ್ವರು ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದಾರೆ. ಆದರೆ, ರಾಜ್ಯದ ಮೊಟ್ಟ ಮೊದಲ ಸಚಿವ ಸಂಪುಟದಲ್ಲಿ ಯಾವೊಬ್ಬ ಮಹಿಳೆಯರಿಗೂ ಸಚಿವ ಸ್ಥಾನವನ್ನು ಕೊಡದೇ ಕಡೆಗಣಿಸಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಕೆಲವರಿಗೆ ಮಂತ್ರಿಗಿರಿ ಲಭ್ಯವಾಗುವ ಸಾಧ್ಯತೆಯಿದೆ. ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌- ಖನೀಜ್‌ ಫಾತೀಮಾ, ಮೂಡಿಗೆರೆ- ಕಾಂಗ್ರೆಸ್‌ - ನಯನಾ ಮೋಟಮ್ಮ, ಬೆಳಗಾವಿ ಗ್ರಾಮಾಂತರ -ಕಾಂಗ್ರೆಸ್‌- ಲಕ್ಷ್ಮೀ ಹೆಬ್ಬಾಳ್ಕರ್‌ ಹಾಗೂ ಕೆಜಿಎಫ್‌ -ಕಾಂಗ್ರೆಸ್‌- ರೂಪಕಲಾ ಶಶಿಧರ್‌ ಶಾಸಕಿಯರಿದ್ದು, ಯಾರಿಗೆ ಅಧಿಕಾರ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

  • ಕರ್ನಾಟಕದ 16ನೇ ವಿಧಾನಸಭೆಯ 10 ಮಹಿಳಾ ಶಾಸಕಿಯರು
  • ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌- ಖನೀಜ್‌ ಫಾತೀಮಾ, 
  • ಮೂಡಿಗೆರೆ- ಕಾಂಗ್ರೆಸ್‌ - ನಯನಾ ಮೋಟಮ್ಮ
  • ಬೆಳಗಾವಿ ಗ್ರಾಮಾಂತರ -ಕಾಂಗ್ರೆಸ್‌- ಲಕ್ಷ್ಮೀ ಹೆಬ್ಬಾಳ್ಕರ್‌
  • ಕೆಜಿಎಫ್‌ -ಕಾಂಗ್ರೆಸ್‌- ರೂಪಕಲಾ ಶಶಿಧರ್‌
  • ಸುಳ್ಯ - ಬಿಜೆಪಿ- ಭಗೀರಥಿ ಮುರುಳ್ಯ, 
  • ನಿಪ್ಪಾಣಿ -ಬಿಜೆಪಿ- ಶಶಿಕಲಾ ಜೊಲ್ಲೆ
  • ಮಹದೇವಪುರ - ಬಿಜೆಪಿ- ಮಂಜುಳಾ ಲಿಂಬಾವಳಿ
  • ದೇವದುರ್ಗ- ಜೆಡಿಎಸ್‌ - ಕರೇಮ್ಮ ನಾಯಕ್‌
  • ಶಿವಮೊಗ್ಗ ಗ್ರಾಮಾಂತರ-ಜೆಡಿಎಸ್‌- ಶಾರದಾ ಪೂರ್ಯನಾಯ್ಕ್‌
  • ಹರಪನಹಳ್ಳಿ- ಪಕ್ಷೇತರ - ಲತಾ ಮಲ್ಲಿಕಾರ್ಜುನ್‌

ಬಿಜೆಪಿಯ ತಪ್ಪುಗಳನ್ನು ಸರಿಪಡಿಸುತ್ತೇವೆ: ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ ಅವರು, 25 ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ ಎನ್ನೋದು ಊಹಾಪೋಹಗಳಾಗಿತ್ತು. ಈಗ 10 ಜನ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಮುಂದಿನ ವಾರ ಮತ್ತಷ್ಟು ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ಕಾಂಗ್ರೆಸ್ ಬಣ ಅಷ್ಟೇ. ನಮ್ಮ ಮೇಲೆ ಅನೇಕ ಜವಬ್ದಾರಿ ಇದೆ. ಬಿಜೆಪಿ ಮಾಡಿರುವ ತಪ್ಪು ಸರಿ ಮಾಡಬೇಕಿದೆ. ಕಾನೂನು ಸುವ್ಯವಸ್ಥೆ, ನಿರುದ್ಯೋಗ ಭ್ರಷ್ಟಾಚಾರ ಇದೆಲ್ಲಾ ಬಿಜೆಪಿ ಮಾಡಿದ ತಪ್ಪುಗಳು. ಅದನ್ನು ಸರಿ‌ಮಾಡಬೇಕಿದೆ. ಫ್ರೀ ಯೋಜನೆಗೆ ಕಂಡಿಶನ್ ಹಾಕುವ ವಿಚಾರ ಗೊತ್ತಿಲ್ಲ. ನಾವು ಕೇಂದ್ರಕ್ಕೆ 4 ಲಕ್ಷ ಕೋಟಿಗೂ ಅಧಿಕ GST ಕಟ್ಟುತ್ತೇವೆ. ಆದರೆ ಅವರು ನಮಗೆ ಕೊಡೊದು 37 ಸಾವಿರ ಕೋಟಿ ರೂ. ಮಾತ್ರ. ಕೇಂದ್ರ ನಮಗೆ ನಮ್ಮ‌ ಹಣ ನೀಡಿದ್ರೆ ಅನುಕೂಲ ಆಗುತ್ತದೆ. ಕೇಂದ್ರ ಕೊಡದೇ ಹೋದರು ನಾವು ಜನರಿಗೆ ನೀಡಿದ ಭರವಸೆ ‌ಈಡೇರಿಸುತ್ತೇವೆ ಎಂದು ಹೇಳಿದರು. 

  • ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನೂತನ ಸಚಿವರು
  • ಎಂ.ಬಿ. ಪಾಟೀಲ್
  • ಡಾ.ಜಿ. ಪರಮೇಶ್ವರ
  • ಕೆ.ಎಚ್.ಮುನಿಯಪ್ಪ
  • ಕೆ.ಜೆ. ಜಾರ್ಜ್
  • ಸತೀಶ್ ಜಾರಕಿಹೊಳಿ
  • ಪ್ರಿಯಾಂಕ್ ಖರ್ಗೆ
  • ಜಮೀರ್ ಅಹಮದ್ ಖಾನ್
  • ರಾಮಲಿಂಗ ರೆಡ್ಡಿ