ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರು ಹಾಗೂ ಮಂಡ್ಯದಲ್ಲಿ ಅವರ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಓರ್ವ ಬೆಂಬಲಿಗ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಮತ್ತೊಬ್ಬ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಮೈಸೂರು/ಮಂಡ್ಯ(ಆ.3): ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ನೂತನ ಸಚಿವರ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಸಚಿವ ಸ್ಥಾನ ಸಿಕ್ಕಿದ ನಾಯಕರು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಸಚಿವ ಸ್ಥಾನ ಕೈತಪ್ಪಿದ ನಾಯಕರ ಬೆಂಬಲಿಗರು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ತನ್ವೀರ್ ಸೇಠ್ ಬೆಂಬಲಿಗರ ಪ್ರತಿಭಟನೆ
ಮೈಸೂರಿನ ಎನ್‌ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಮಂಡ್ಯದಲ್ಲಿ ಬೆಂಬಲಿಗರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮೈಸೂರಿನ ಮಣಿಪಾಲ್ ಆಸ್ಪತ್ರೆ ಜಂಕ್ಷನ್(Manipal hospital junction) ಬಳಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ ನಡೆಸಿದ ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು. ಈ ವೇಳೆ ಒಬ್ಬ ಬೆಂಬಲಿಗ ತನ್ನ ಮೇಲೆ ಪೆಟ್ರೋಲ್ ಸುರಿದುಕೊಳ್ಳಲು ಮುಂದಾಗಿದ್ದು ಪೊಲೀಸರು ಸಮಯಪ್ರಜ್ಞೆ ಮೆರೆದು ಆತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದರು.
ಮಂಡ್ಯದಲ್ಲೂ ರಸ್ತೆ ತಡೆದು ಪ್ರತಿಭಟನೆ
ಇತ್ತ ಮಂಡ್ಯದಲ್ಲೂ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ತನ್ವೀರ್ ಸೇಠ್ ಸಾಕಷ್ಟು ಶ್ರಮಿಸಿದ್ದಾರೆ. ಆದರೂ ಸಚಿವ ಸ್ಥಾನ ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಿಢೀರ್ ಪ್ರತಿಭಟನೆಯಿಂದ ಮೈಸೂರಿನಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ರಸ್ತೆ ತಡೆ ನಡೆಸುತ್ತಿದ್ದ ತನ್ವೀರ್ ಸೇಠ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ವಿಷ ಕುಡಿದ ತನ್ವೀರ್ ಸೇಠ್ ಬೆಂಬಲಿಗ!
ಇನ್ನೊಂದೆಡೆ, ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಮತ್ತೋರ್ವ ಅಭಿಮಾನಿ ವಿಷ ಸೇವಿಸಿ ಆತ್ಮ೧ಹತ್ಯೆಗೆ ಯತ್ನಿಸಿದ್ದು ಆತನಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ತನ್ವೀರ್ ಸೇಠ್ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಆರೋಗ್ಯ ವಿಚಾರಿಸಿದರು.

