ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಪಟ್ಟಿ ಹೈಕಮಾಂಡ್ ಕಳುಹಿಸಿದೆ. ಕೆಲ ಅಚ್ಚರಿ ಹೆಸರುಗಳು ಇದರಲ್ಲಿದೆ. ಆದರೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಘಟಾನುಘಟಿಗಳಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಚಿವ ಸ್ಥಾನದಿಂದ ವಂಚಿತರಾದವರ ಪಟ್ಟಿ ಇಲ್ಲಿದೆ.

ಬೆಂಗಳೂರು (ಆ.03) ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದೆ. 20 ಶಾಸಕರಿಗೆ ಮಂತ್ರಿಗಿ ಸಿಕ್ಕಿದೆ. ಹಲವು ಸುತ್ತಿನ ಸಭೆಗಳ ಬಳಿಕ ಇಂದು ಬೆಳಗ್ಗೆ ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್‌ಗೆ 20 ಶಾಸಕರ ಪಟ್ಟಿ ಕಳುಹಿಸಿದ್ದಾರೆ. ಕೆಲ ಅಚ್ಚರಿ ಹೆಸರುಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೇ ವೇಳೆ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಕೆಲ ಪ್ರಮುಖರಿಗೆ ಕೊಕ್ ನೀಡಲಾಗಿದೆ. ಈ ರೀತಿ ಸಚಿವ ಸ್ಥಾನ ವಂಚಿತರಾದ ಘಟಾನುಘಟಿಗಳ ಪಟ್ಟಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಪ್ರಮುಖರಿದ್ದಾರೆ.

ಘಟಾನುಘಟಿಗಳಿಗೆ ಕೊಕ್ ಕೊಟ್ಟ ಹೈಕಮಾಂಡ್

  • ಎಚ್.ಕೆ‌ ಪಾಟೀಲ್
  • ಎಸ್‌ಎಸ್ ಮಲ್ಲಿಕಾರ್ಜುನ್
  • ಲಕ್ಷ್ಮೀ ಹೆಬ್ಬಾಳಕರ್
  • ಎಚ್.ಸಿ ಮಹದೇವಪ್ಪ
  • ಶಿವಾನಂದ ಪಾಟೀಲ್
  • ಆರ್.ಬಿ ತಿಮ್ಮಾಪುರ
  • ದಿನೇಶ್ ಗುಂಡೂರಾವ್

ಮಂತ್ರಿ ಖಚಿತ ಎಂದೇ ಗುರುತಿಸಿಕೊಂಡಿದ್ದ ಈ ಘಟಾನುಘಟಿಗಳು ಸಚಿವ ಸ್ಥಾನ ವಂಚಿತರಾಗಿದ್ದಾರೆ. ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇತ್ತ ಮಂತ್ರಿಗಿರಿ ಸಿಗದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಪ್ರಮುಖ ನಾಯಕ ತನ್ವೀರ್ ಸೇಠ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಉದಯಗಿರಿ ಎಂ.ಜಿ ರಸ್ತೆಯಲ್ಲಿ ಕೈ ಕಾರ್ಯಕರ್ತರಿಂದ ಪ್ರತಿಭಟನೆ ಜೋರಾಗಿದೆ. ತನ್ವೀರ್ ಸೇಠ್ ಮನೆ ಮುಂಭಾಗದ ರಸ್ತೆಯಲ್ಲಿ ಬೆಂಬಲಿಗರು ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಮಂತ್ರಿಗಿರಿ ಗಿಟ್ಟಿಸಿಕೊಂಡ 20 ಶಾಸಕರ ಪಟ್ಟಿ

  1. ಎಂ. ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಎಸ್. ಬಸವಂತಪ್ಪ
  5. ಬಿ. ನಾಗೇಂದ್ರ
  6. ಟಿ. ರಘುಮೂರ್ತಿ
  7. ಬಿ. ಝಡ್. ಜಮೀರ್ ಅಹಮದ್ ಖಾನ್
  8. ರಿಜ್ವಾನ್ ಅರ್ಷದ್
  9. ಸಂತೋಷ್ ಲಾಡ್
  10. ಮಧು ಬಂಗಾರಪ್ಪ
  11. ಪುಟ್ಟರಂಗಶೆಟ್ಟಿ
  12. ಮಂಕಾಳ ವೈದ್ಯ
  13. ಡಾ. ಅಜಯ್ ಸಿಂಗ್
  14. ಎನ್. ಚಲುವರಾಯ ಸ್ವಾಮಿ
  15. ಕೆ. ಎಂ. ಶಿವಲಿಂಗೇ ಗೌಡ
  16. ಹೆಚ್. ಸಿ. ಬಾಲಕೃಷ್ಣ
  17. ಗಾಯತ್ರಿ ಶಾಂತೇಗೌಡ
  18. ಬಸವರಾಜ್ ರಾಯರೆಡ್ಡಿ
  19. ವಿಜಯಾನಂದ ಕಾಶಪ್ಪನವರ್
  20. ಲಕ್ಷ್ಮಣ ಸವದಿ

ಪ್ರಮಾಣವಚನ ಸ್ವೀಕಾರ ಸಮಾರಂಭ ಸಂಜೆ 4.05ಗಂಟೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಧ್ಯಾಹ್ನ 2.50ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ನೂತನ ಸಚಿವರ ಪಟ್ಟಿಯೊಂದಿಗೆ ಸುರ್ಜೆವಾಲ ರಾಜ್ಯಕ್ಕೆ ಆಗಮಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಿದ್ದತೆಗಳು ಆರಂಭಗೊಂಡಿದೆ. ಲೋಕಭವನದ ಮುಂಭಾಗದಲ್ಲಿ ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಭದ್ರತೆಗೆ ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಲೋಕಭವನ ಸುತ್ತಲಿನ ಕೆಲ ರಸ್ತೆಗಳಿಗೆ ಬ್ಯಾರಿಕೇಟ್ ಅಳವಡಿಕೆ ಮಾಡಲಾಗಿದೆ. ಇತ್ತ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಭದ್ರತೆ ಪರಿಶೀಲನೆ ನಡೆಸಿದ್ದಾರೆ.