ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಹೊಸ ಹೆಸರುಗಳು ಚರ್ಚೆಯಾಗುತ್ತಿರುವಾಗ, ಹಾಲಿ ಸಭಾಪತಿ ಬಸವರಾಜ್ ಹೊರಟ್ಟಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಸಂಖ್ಯಾಬಲದಿಂದ ತಮ್ಮನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿರುವ ಅವರು, ಅವಿಶ್ವಾಸ ನಿರ್ಣಯ ಮಂಡಿಸಲು ಇರುವ ಕಠಿಣ ಕಾನೂನು ಪ್ರಕ್ರಿಯೆ ಮತ್ತು ನಿಯಮಗಳನ್ನು ನೆನಪಿಸಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಸಲೀಂ ಅಹಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಹಿರಿಯ ನಾಯಕಿ ಉಮಾಶ್ರೀ ಅವರ ಹೆಸರುಗಳು ಅಂತಿಮಗೊಂಡಿವೆ ಎಂಬ ರಾಜಕೀಯ ಚರ್ಚೆಗಳ ಬೆನ್ನಲ್ಲೇ, ಸದ್ಯದ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಅತ್ಯಂತ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜೊತೆಗೆ ಪ್ರತ್ಯೇಕವಾಗಿ ಮಾತನಾಡಿರುವ ಅವರು, ಮೇಲ್ಮನೆಯ ಸಭಾಪತಿ ಬದಲಾವಣೆ ಪ್ರಕ್ರಿಯೆಯ ಕಾನೂನು ಚೌಕಟ್ಟು ಹಾಗೂ ರಾಜಕೀಯ ಇತಿಹಾಸವನ್ನು ನೆನಪಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ನಡೆಗೆ ತೀವ್ರ ತಿರುಗೇಟು ನೀಡಿದ್ದಾರೆ.
ಸದ್ಯಕ್ಕೆ ಸಭಾಪತಿ ಕುರ್ಚಿ ಖಾಲಿ ಇಲ್ಲ!
ತಮ್ಮ ಸ್ಥಾನ ಬದಲಾವಣೆಯ ವದಂತಿಗಳನ್ನು ನೇರವಾಗಿಯೇ ತಳ್ಳಿಹಾಕಿದ ಬಸವರಾಜ್ ಹೊರಟ್ಟಿ ಅವರು, "ವಿಧಾನ ಪರಿಷತ್ತಿನ ಸಭಾಪತಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಕಾನೂನುಬದ್ಧವಾಗಿ ನಾನಿನ್ನೂ ಆ ಹುದ್ದೆಯಲ್ಲೇ ಮುಂದುವರಿದಿದ್ದೇನೆ. ಸಾರ್ವತ್ರಿಕವಾಗಿ ಸದನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಹೆಚ್ಚಿರಬಹುದು ಎಂಬುದು ನಿಜ. ಆದರೆ, ಕೇವಲ ಸಂಖ್ಯಾಬಲದ ಆಧಾರದ ಮೇಲೆ ಸಭಾಪತಿಯನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ. ಸಂಸದೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸದನದಲ್ಲಿ ಆಡಳಿತ ಪಕ್ಷಕ್ಕೆ ಬಹುಮತವಿದ್ದಾಗಲೂ ವಿರೋಧ ಪಕ್ಷದ ಅಥವಾ ಅನ್ಯ ಪಕ್ಷದ ನಾಯಕರು ಸಭಾಪತಿಗಳಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಹೀಗಾಗಿ ಸಂಖ್ಯಾಬಲದ ನೆಪವೊಡ್ಡಿ ಸಭಾಪತಿಯನ್ನು ಕೆಳಗಿಳಿಸುವ ಯಾವುದೇ ಸಂಪ್ರದಾಯವನ್ನು ನಾನಂತೂ ಇದುವರೆಗೆ ನೋಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಅವಿಶ್ವಾಸ ನಿರ್ಣಯಕ್ಕೆ ನಿಯಮಾವಳಿಗಳ ಅಡ್ಡಿ
ಸಭಾಪತಿ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸಲು ಇರುವ ಕಠಿಣ ಸಂಸದೀಯ ನಿಯಮಗಳನ್ನು ವಿವರಿಸಿದ ಹೊರಟ್ಟಿ ಅವರು, "ಸಭಾಪತಿಯನ್ನು ಅಧಿಕಾರದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ. ಅದಕ್ಕೊಂದು ಸಂವಿಧಾನಬದ್ಧವಾದ ಪ್ರಕ್ರಿಯೆ ಇದೆ. ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ, ಕನಿಷ್ಠ 10 ಜನ ವಿಧಾನ ಪರಿಷತ್ ಸದಸ್ಯರು ಜಂಟಿಯಾಗಿ ಸಹಿ ಮಾಡಿ ಲಿಖಿತ ಪ್ರಸ್ತಾವನೆ ಸಲ್ಲಿಸಬೇಕು. ಅಷ್ಟೇ ಅಲ್ಲದೆ, ಈ ನಿರ್ಣಯವನ್ನು ಸದನದಲ್ಲಿ ಮಂಡಿಸುವ ಕನಿಷ್ಠ 14 ದಿನಗಳ ಮುಂಚಿತವಾಗಿ ನನಗೆ ಅಧಿಕೃತವಾಗಿ ನೋಟಿಸ್ ನೀಡಬೇಕಾಗುತ್ತದೆ. ಆದರೆ, ಇಲಾಖೆಯಿಂದಾಗಲಿ ಅಥವಾ ಸರ್ಕಾರದ ಕಡೆಯಿಂದಾಗಲಿ ಇಂತಹ ಯಾವುದೇ ನೋಟಿಸ್ ಅಥವಾ ಅಧಿಕೃತ ಮಾಹಿತಿ ಇದುವರೆಗೂ ನನಗೆ ತಲುಪಿಲ್ಲ" ಎಂದು ನಿಯಮಾವಳಿಗಳನ್ನು ನೆನಪಿಸಿದರು.
ಕಾಂಗ್ರೆಸ್ ಪಾಳಯದಲ್ಲಿ ಸಭಾಪತಿ ಹುದ್ದೆಯ ಆಕಾಂಕ್ಷಿಗಳ ಹೆಸರುಗಳು ಮುಂಚೂಣಿಗೆ ಬಂದಿರುವ ಬೆನ್ನಲ್ಲೇ ಬಸವರಾಜ್ ಹೊರಟ್ಟಿ ಅವರು ನೀಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. "ಈ ವಿಚಾರದಲ್ಲಿ ಸರ್ಕಾರ ಮುಂದೆ ಏನು ಹೆಜ್ಜೆ ಇಡುತ್ತದೆ ಎಂಬುದನ್ನು ನಾನೂ ಕಾದು ನೋಡುತ್ತೇನೆ" ಎಂದು ಹೇಳುವ ಮೂಲಕ ಹೊರಟ್ಟಿ ಅವರು ಆಡಳಿತ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಸಭಾಪತಿ ಪದಚ್ಯುತಿ: ಸಂವಿಧಾನ ಮತ್ತು ನಿಯಮಾವಳಿಗಳು ಏನು ಹೇಳುತ್ತವೆ?
ವಿಧಾನ ಪರಿಷತ್ತಿನ ಸಭಾಪತಿಯನ್ನು ಹುದ್ದೆಯಿಂದ ತೆಗೆದುಹಾಕಲು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಭಾಪತಿಯವರನ್ನು ಹುದ್ದೆಯಿಂದ ತೆಗೆದುಹಾಕುವ ಉದ್ದೇಶದ ನಿರ್ಣಯವನ್ನು ಮಂಡಿಸಲು ಇಚ್ಛಿಸುವ ಸದಸ್ಯರು, ಕನಿಷ್ಠ ಹದಿನಾಲ್ಕು ದಿನಗಳ ಮುಂಚಿತವಾಗಿ ಪರಿಷತ್ತಿನ ಕಾರ್ಯದರ್ಶಿಯವರಿಗೆ ಲಿಖಿತ ರೂಪದಲ್ಲಿ ನೋಟಿಸ್ ನೀಡಬೇಕು. ನಿಗದಿತ 14 ದಿನಗಳ ಅವಧಿ ಮುಗಿದ ನಂತರ, ಸದನ ಸಮಾವೇಶಗೊಂಡಾಗ ಈ ನಿರ್ಣಯವನ್ನು ಮಂಡಿಸಲು ಸಭೆಯ ಅನುಮತಿ ಕೋರಲಾಗುತ್ತದೆ. ಸದನವು ಒಪ್ಪಿಗೆ ನೀಡಿದಲ್ಲಿ ಮಾತ್ರ ನಿರ್ಣಯದ ಮೇಲೆ ಚರ್ಚೆ ಮತ್ತು ಮತದಾನ ಪ್ರಕ್ರಿಯೆ ನಡೆಯುತ್ತದೆ.
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಸಲೀಂ ಅಹಮದ್ ಹಾಗೂ ಉಮಾಶ್ರೀ ಅವರ ಹೆಸರುಗಳು ಮುಂಚೂಣಿಗೆ ಬಂದಿದ್ದರೂ, ಬಸವರಾಜ್ ಹೊರಟ್ಟಿ ಅವರ ಈ ಕಾನೂನಾತ್ಮಕ ನಿಲುವಿನಿಂದಾಗಿ ಮೇಲ್ಮನೆಯ ಸಭಾಪತಿ ಗಾದಿಯ ಬದಲಾವಣೆ ಪ್ರಕ್ರಿಯೆ ಅಷ್ಟು ಸುಲಭವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.


