ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕೇರಳ ಪ್ರಚಾರಕ್ಕೂ ತೆರಳಲಿರುವ ಅವರು, ಅಸ್ಸಾಂನಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಮೂರನೇ ಎರಡರಷ್ಟು ಬಹುಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮಾ.31) ಉಪಚುನಾವಣೆ ಪ್ರಚಾರದಲ್ಲಿ ಮಂಗಳವಾರ ಮತ್ತು ಬುಧವಾರ ಪಾಲ್ಗೊಳ್ಳುತ್ತಿದ್ದು, ಮಂಗಳವಾರ ದಾವಣಗೆರೆ ಮತ್ತು ಬುದವಾರ ಬಾಗಲಕೋಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಪ್ರಚಾರಕ್ಕೆ ಸೋಮವಾರವೇ ಹೋಗಬೇಕಿತ್ತು. ಮುಖ್ಯಮಂತ್ರಿ ಅವರು ಬಾಗಲಕೋಟೆಗೆ ತೆರಳಿದ್ದಾರೆ. ನಾನು ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಂಗಳವಾರ ದಾವಣಗೆರೆಗೆ ಹೋಗುತ್ತಿದ್ದು, ಕೆಲ ಸಭೆಗಳಲ್ಲಿ ಪಾಲ್ಗೊಳ್ಳುತ್ತೇವೆ. ಬುಧವಾರ ಬಾಗಲಕೋಟೆಗೆ ತೆರಳುತ್ತೇನೆ. ನಂತರ ಎರಡೂ ಕ್ಷೇತ್ರಗಳಿಗೆ ತೆರಳಿ ಮತ್ತೊಂದು ಸುತ್ತು ಪ್ರಚಾರ ಮಾಡುತ್ತೇನೆ. ಏ. 5 ಮತ್ತು 6ರಂದು ಕೇರಳ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ ಎಂದರು.
ಅಸ್ಸಾಂನಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆ ಕುರಿತು ಪ್ರತಿಕ್ರಿಯಿಸಿ, ನಾವು ನುಡಿದಂತೆ ನಡೆಯುತ್ತೇವೆ. ಅಸ್ಸಾಂಗಾಗಿ ಭೂಮಿ ಹಕ್ಕು, ₹25 ಲಕ್ಷ ವರೆಗೆ ಆರೋಗ್ಯ ಕಾರ್ಯಕ್ರಮ ಘೋಷಿಸಲಾಗಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಮಾತ್ರ ಮಾಸಿಕ ₹1200 ಸಹಾಯಧನ ನೀಡುತ್ತಿದೆ. ನಾವು ಎಲ್ಲ ಫಲಾನುಭವಿಗಳಿಗೂ ಯೋಜನೆ ನಿಡಲಿದ್ದೇವೆ. ಅಸ್ಸಾಂ ಮಾತ್ರವಲ್ಲ ದೇಶದ ಯಾವುದೇ ರಾಜ್ಯದಲ್ಲಾದರೂ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಸ್ಸಾಂ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸುತ್ತೇವೆ. ಅಮಿತ್ ಶಾ ಅವರು ಮೂರನೇ ಎರಡಷ್ಟು ಬಹುಮತ ಪಡೆಯುವುದಾಗಿ ಹೇಳಿದ್ದಾರೆ. ಆದರೆ, ನಾನು ಹೇಳುತ್ತಿದ್ದೇನೆ ನಾವು ಮೂರನೇ ಎರಡರಷ್ಟು ಬಹುಮತ ಗೆಲ್ಲುವುದು ಖಚಿತ ಎಂದರು.


