ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ. ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು.
ಶಿವಮೊಗ್ಗ (ಏ.15): ಮುಖ್ಯಮಂತ್ರಿಗಳಾದಿಯಾಗಿ ಕಾಂಗ್ರೆಸ್‌ನವರು ಏನೇ ಪುಂಗಿ ಬಾರಿಸಿದರೂ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತಿದ್ದಾರೆ. ಆಡಳಿತ ಯಂತ್ರ ಕುಸಿದಿರುವುದು ಹಾಗೂ ಮುಖ್ಯಮಂತ್ರಿಯ ಕುರ್ಚಿಗಾಗಿ ಬೀದಿ ಕಾಳಗ ನಡೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡು ಹಿಂದುಗಳಿಗೆ ಅಪಮಾನ ಮಾಡುತ್ತಿದೆ. ಈ ಎಲ್ಲದರ ಪರಿಣಾಮ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು.
ಬಿಜೆಪಿ ಅಭಿವೃದ್ದಿ ಮಾಡಿಲ್ಲ ಎನ್ನುವ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಸವಾಲನ್ನು ಹಾಕುತ್ತೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಏನು ಅಭಿವೃದ್ಧಿ ಕಾರ್ಯಗಳಾಗಿವೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಮೈಸೂರಿಗೆ ಏನು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಬಹಿರಂಗಗೊಳಿಸಲಿ. ಈ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮೈಸೂರಿನಲ್ಲಿ ಮೈಸೂರು ಸಿಲ್ಕ್ ಸೀರೆ ಉಳಿಸಿಕೊಳ್ಳಲು ಸಿಎಂಗೆ ಆಗುತ್ತಿಲ್ಲ. ಎಂಎಸ್‌ಐಎಲ್ ಅನ್ನು ಮುಚ್ಚಿ ಅಲ್ಲೊಂದು ಸ್ಟೇಡಿಯಂ ಮಾಡಲು ಹೊರಟಿದ್ದಾರೆ. ಇವರಿಗೆ ಅಭಿವೃದ್ಧಿಯ ಮೇಲೆ ಯಾವುದೇ ಕಾಳಜಿ ಇಲ್ಲ. ಏನೇ ಭಾಷಣ ಬೀಗಿದರೂ ಮೇ 4ರಂದು ಜನ ಕೊಟ್ಟಿರುವ ಉತ್ತರ ತಿಳಿಯಲಿದೆ ಎಂದರು.
2028ಕ್ಕೆ ಮೈತ್ರಿ ಸರ್ಕಾರ ಎಂಬ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕಾಲ ನಿರ್ಧಾರ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ವರಿಷ್ಠರ ತೀರ್ಮಾನದಂತೆ ನಡೆಯುತ್ತದೆ. ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಅವರ ನಿರ್ಧಾರವನ್ನು ಪಾಲನೆ ಮಾಡುತ್ತೇವೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿಯವರ ಇಚ್ಛಾಸಕ್ತಿ- ಸಂಕಲ್ಪ ಇದು. ಮಹಿಳೆಯರು ಶೇ.50ಕ್ಕೂ ಹೆಚ್ಚು ಇದ್ದಾರೆ. ಮಹಿಳೆಯರಿಗೆ ಸಾಮಾಜಿಕ ನ್ಯಾಯದ ಜೊತೆಗೆ ರಾಜಕೀಯ ಶಕ್ತಿ ನೀಡಲು ಹೊರಟಿದ್ದಾರೆ ಎಂದರು.


