ಬೈ ಎಲೆಕ್ಷನ್ ರಿಸಲ್ಟ್: ಸೋತರೂ ಗೆದ್ದ ಬಿಜೆಪಿ..!
ತೀವ್ರ ಕುತೂಹಲ ಮೂಡಿಸಿದ್ದ ಐದು ಉಪಚುನಾವಣೆಯಲ್ಲಿ ರಿಸಲ್ಟ್ ಹೊರಬಿದ್ದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. 5ರಲ್ಲಿ 4 ಸ್ಥಾನ ದೋಸ್ತಿ ಪಾಲಾಗಿದೆ. ಆದರೂ ಬಿಜೆಪಿಗೆ ಲಾಭವಾಗಿದೆ. ಹೇಗಂತೀರಾ? ಇಲ್ಲಿದೆ ವಿವರ.
ಬೆಂಗಳೂರು, (ನ.7): ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ಐದು ಉಪಚುನಾವಣೆಯಲ್ಲಿ ಕೇವಲ ಮೈತ್ರಿ ಸರ್ಕಾರ ಗೆದ್ದಿಲ್ಲ. ಬದಲಾಗಿ ಬಿಜೆಪಿಗೂ ಸಹ ಜಯ ಸಿಕ್ಕಂತಾಗಿದೆ.
ಹೌದು...ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪ ಸಮರದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ.
5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? ಫುಲ್ ಡಿಟೇಲ್ಸ್
ಒಂದು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಮೂಲಕ ಸಂಭಾವ್ಯ ಮುಖಭಂಗದಿಂದ ಪಾರಾಗಿದೆ. ಈ ಮೂಲಕ ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ನಡುವೆ ಆಗಬಹುದಾದ ಮೈತ್ರಿಗೆ ಬಲ ಬಂದಿದೆ. ಅಲ್ಲದೆ ಮೈತ್ರಿ ಸರ್ಕಾರದ ನಾಯಕರೇ ಹೇಳಿದಂತೆ ಮಹಾಘಟಬಂಧನಕ್ಕೆ ಮುನ್ನುಡಿಯೂ ಆಗಿದೆ.
ಕರ್ನಾಟಕ ಬೈ ಎಲೆಕ್ಷನ್: ಆರಂಭದಿಂದ ಅಂತ್ಯದವರೆಗೆ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ, ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆ ಕ್ಷೇತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಶ್ರೀರಾಮುಲು ಹಾಗೂ ಸಚಿವ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಬಳ್ಳಾರಿ, ಮಂಡ್ಯದ ಲೋಕಸಭೆ ಸ್ಥಾನಗಳಿಗೆ ನ. 3ರಂದು ಮತದಾನ ನಡೆದಿತ್ತು.
ನಿನ್ನೆ (ನ.6) ಪ್ರಕಟವಾದ ಫಲಿತಾಂಶದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಮೈತ್ರಿಕೂಟ 4 ಮತ್ತು ಬಿಜೆಪಿ ಕೇವಲ ಒಂದು ಕ್ಷೇತ್ರವನ್ನು ಗೆದ್ದಿದೆ. ಮೂಲಕ ಮೈತ್ರಿಕೂಟ ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ.
5ರಲ್ಲಿ ಮೈತ್ರಿ 4 ಗೆದ್ದರೂ ಬಿಜೆಪಿಗೆ ಮುನ್ನಡೆ:
ಬಿಜೆಪಿ ಕೇವಲ ಒಂದರಲ್ಲಿ ಗೆದ್ದರೂ ಮತಗಳಿಕೆಯಲ್ಲಿ ದಾಖಲೆ ಬರೆದಿದೆ. ರಾಮನಗರದಲ್ಲಿ ಬಿಜೆಪಿ ಎಂದೂ ಐದು ಸಾವಿರ ಮತಗಳನ್ನು ಪಡೆದ ಉದಾಹರಣೆಗಳಿರಲಿಲ್ಲ.
ಆದರೆ, ಉಪಚುನಾವಣೆಯಲ್ಲಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದರೂ ಸಹ ಬಿಜೆಪಿ 15 ಸಾವಿರಕ್ಕೂ ಹೆಚ್ಚು ಮತ ಪಡೆದಿದೆ. ಹಾಗೆಯೇ ಮಂಡ್ಯದ ಇತಿಹಾಸದಲ್ಲಿ ಎರಡು ಲಕ್ಷ ಮತಗಳ ಮುಖವನ್ನು ಈ ವರೆಗೆ ನೋಡಿರದ ಬಿಜೆಪಿ ಈ ಉಪ ಚುನಾವಣೆಯಲ್ಲಿ ಡಾ. ಸಿದ್ದರಾಮಯ್ಯ ಅವರು ಬರೋಬ್ಬರಿ 2,44404 ಮತಗಳಿಸಿ ಗಮನ ಸೆಳೆದಿದ್ದಾರೆ.
ಬಿಜೆಪಿಗೆ ನಷ್ಟವಾಗಿದ್ದು ಒಂದೇ ಕ್ಷೇತ್ರ:
ಹೌದು, ಐದರಲ್ಲಿ ಒಂದನ್ನ ಗೆದ್ದಿರುವ ಬಿಜೆಪಿ ತನ್ನ ಆಡಳಿತವಿದ್ದ ಒಂದು ಕ್ಷೇತ್ರದಲ್ಲಿ ಪರಾಭವಗೊಂಡಿದೆ ಅಷ್ಟೇ. ಹೇಗೆ ಎನ್ನುವುದನ್ನ ನೋಡಿದ್ರೆ ಕಳೆದು ಚುನಾವಣೆಯಲ್ಲಿ ರಾಮನಗರದಲ್ಲಿ ಜೆಡಿಎಸ್ ಇತ್ತು. ಈ ಬಾರಿಯೂ ಜೆಡಿಎಸ್ ಆಗಿದೆ.
ಇನ್ನು ಜಮಖಂಡಿಯಲ್ಲಿ ಕಳೆದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಾಲಾಗಿತ್ತು. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರವನ್ನ ನೋಡಿದ್ರೆ ಜೆಡಿಎಸ್ ಅಭ್ಯರ್ಥಿ ಸಿಎಸ್ ಪುಟ್ಟರಾಜು ಗೆದ್ದಿದ್ದರು. ಈ ಬಾರಿಯೂ ಜೆಡಿಎಸ್ ಕ್ಯಾಂಡಿಡೇಟ್ ಗೆದ್ದಿದೆ. ಶಿವಮೊಗ್ಗ ಅದು ಬಿಜೆಪಿ ಭದ್ರಕೋಟೆಯಾಗಿದ್ದು, ಅದನ್ನ ಮರಳಿ ಪಡೆದಿದೆ.
ಕೊನೆಯದಾಗಿ ಶ್ರೀರಾಮುಲು ಅವರಿಂದ ತೆರವಾಗಿದ್ದ ಸ್ಥಾನವನ್ನು ಮರಳಿ ಪಡೆದುಕೊಳ್ಳವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕಸಿದುಕೊಂಡಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷ ವಿರುದ್ಧ ಮತಗಳಿಕೆಯಲ್ಲಿ ದಾಖಲೆ ಬರೆದಿದ್ದು, ತನ್ನ ತೆಕ್ಕೆಯಲ್ಲಿದ್ದ ಒಂದು ಕ್ಷೇತ್ರದಲ್ಲಿ ನಷ್ಟ ಅನುಭವಿಸಿದೆ ಅಷ್ಟೇ.