ಬಿಜೆಪಿ ರಾಜ್ಯ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಟೀಕಿಸಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಟೀಕೆಯನ್ನು ಅವರು ಬೌದ್ಧಿಕ ದಿವಾಳಿತನ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರು (ಮಾ.7): ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ಧರಾಮಯ್ಯ ಶುಕ್ರವಾರ ರಾಜ್ಯ ಬಜೆಟ್ ಮಂಡನೆ ಮಾಡಿದರು. ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 4500 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿರುವುದನ್ನೇ ಹೈಲೈಟ್ ಮಾಡಿರುವ ವಿಪಕ್ಷ ಬಿಜೆಪಿ ಇದನ್ನು ಹಲಾಲ್ ಬಜೆಟ್, ಓಲೈಕೆ ಬಜೆಟ್ ಎಂದು ಟೀಕೆ ಮಾಡಿದೆ. 'ರಾಜ್ಯ ಬಜೆಟ್‌ಲ್ಲಿ ಮುಸ್ಲಿಮರಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಇದೊಂದು ಹಲಾಲ್ ಬಜೆಟ್, ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿದೆ' ಎಂದು ಬಿಜೆಪಿ ಟೀಕೆ ಮಾಡಿತ್ತು. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಓಲೈಸಲು ಒತ್ತು ನೀಡುವ ಬಜೆಟ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದರು.
ಇದಕ್ಕೆ ಎಕ್ಸ್‌ನಲ್ಲಿ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, 'ರಾಜ್ಯದ ಜನರೇ ಬಿಜೆಪಿಯನ್ನು ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಫುಲ್ ಟ್ವೀಟ್
'ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವು ನೀತಿಗಳು ಮತ್ತು ನಿರ್ಧಾರಗಳ ಕುರಿತು ಸರ್ಕಾರವನ್ನು ರಚನಾತ್ಮಕವಾಗಿ ಪ್ರಶ್ನಿಸುತ್ತವೆ. ನಮ್ಮ ಸರ್ಕಾರದ ಬಜೆಟ್ ನಲ್ಲಿ ರಚನಾತ್ಮಕ ಟೀಕೆಗಳಿಗೆ ಅವಕಾಶವೇ ಇಲ್ಲದಿರುವಾಗ ರಾಜ್ಯದ ಬಿಜೆಪಿ ನಾಯಕರು ಹಲಾಲ್ ಬಜೆಟ್ ಎಂಬ ಟೊಳ್ಳು ಟೀಕೆಯ ಮೊರೆ ಹೋಗಿದ್ದಾರೆ.
ಈ ಸ್ಟಿರಿಯೋಟೈಪ್ ಟೀಕೆಯ ಮೂಲಕ ಬಿಜೆಪಿಗರು ತಮ್ಮ ಬೌದ್ಧಿಕ ದಿವಾಳಿತನವನ್ನು ತಾವೇ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಮೌಲ್ಯಯುತ ರಾಜಕಾರಣಕ್ಕೆ ತಿಲಾಂಜಲಿ ಇಟ್ಟಿದ್ದಾರೆ.ಬಜೆಟ್ ಬಗ್ಗೆ ಅರ್ಥಪೂರ್ಣ ಚರ್ಚೆ ಮಾಡಲು ಸಾಮರ್ಥ್ಯವಿಲ್ಲದ ಬಿಜೆಪಿಗೆ #HalalBudget ಕೊನೆಯ ಅಸ್ತ್ರವಾಗಿದೆ. ಹಿಂದೆ ಹೀಗೆಯೇ ಹಲಾಲ್, ಜಟ್ಕಾ ಕಟ್ ಎಂಬ ವಿಭಜನಾತ್ಮಕ ರಾಜಕೀಯ ಮಾಡಿದ್ದ ಬಿಜೆಪಿಯನ್ನು ರಾಜ್ಯದ ಜನತೆ ಜಟ್ಕಾ ಕಟ್ ಮಾಡಿ ಬಿಸಾಡಿದ್ದಾರೆ, ಅಲ್ಲದೆ, ಬಿಜೆಪಿ ಪಕ್ಷವು ಬಣ ಬಡಿದಾಟದ ಹಲಾಲ್ ಕಟ್ ನಿಂದಾಗಿ ಹಲವು ತುಂಡುಗಳಾಗಿದೆ!
ಬಜೆಟ್ ಬಗ್ಗೆ ರಚನಾತ್ಮಕ ಟೀಕೆಗಳನ್ನು ಎದುರಿಸಲು ನಾವು ಸದಾ ಸಿದ್ದರಿದ್ದೇವೆ, ಚರ್ಚೆಗೆ ಮುಕ್ತವಾಗಿದ್ದೇವೆ, ಉತ್ತರಿಸಲು ತಯಾರಿದ್ದೇವೆ, ಆದರೆ ಬಿಜೆಪಿ ಚರ್ಚೆಗೆ ಸಿದ್ದವಿದೆಯೇ? ಕರ್ನಾಟಕದ ಸಮಗ್ರ ಏಳಿಗೆಗೆ, ಆರ್ಥಿಕ ಸುಸ್ಥಿರತೆಗೆ, ಸಾಮಾಜಿಕ ಉನ್ನತಿಗೆ ನಮ್ಮ ಬಜೆಟ್ ಪೂರಕವಾಗಿರುವುದನ್ನು ಸಹಿಸದ ಬಿಜೆಪಿ ಸದಾ ಕನ್ನಡಿಗರನ್ನು ಅವಮಾನಿಸುವ ರಾಜಕಾರಣದಲ್ಲಿ ತೊಡಗಿರುವುದು ದುರಂತ. ಅರ್ಥಪೂರ್ಣ ಹೊಣೆಗಾರಿಕೆ ಪ್ರದರ್ಶಿಸಬೇಕಾದ ವಿರೋಧ ಪಕ್ಷವು ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದಾಗ ರಾಜಕೀಯ ವ್ಯವಸ್ಥೆ ಮಾತ್ರವಲ್ಲ ಸಾಮಾಜಿಕ ಸ್ವಾಸ್ಥ್ಯವೂ ಕೆಡುತ್ತದೆ. ಇದಕ್ಕೆ ಬಿಜೆಪಿಯೇ ಸ್ಪಷ್ಟ ಉದಾಹರಣೆ
ಇನ್ನು ಸಿಎಂ ಸಿದ್ಧರಾಮಯ್ಯ ಕೂಡ ಹಲಾಲ್ ಬಜೆಟ್ ಎಂದಿರುವ ಬಿಜೆಪಿಯನ್ನು ಟೀಕಿಸಿದ್ದು, ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.
ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ, ಕ್ರಿಶ್ಚಿಯನ್, ಸಿಖ್ಖ್, ಜೈನರು, ಬೌದ್ಧರು ಈ ಎಲ್ಲಾ ಸಮುದಾಯಗಳು ಬರುತ್ತವೆ. ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ನೀಡಿದ್ದು ಕೇವಲ ರೂ.4,500 ಕೋಟಿ. ಇದನ್ನು ಹಲಾಲ್ ಬಜೆಟ್, ಓಲೈಕೆ ಬಜೆಟ್ ಎನ್ನುವ ಬಿಜೆಪಿ ನಾಯಕರಿಗೆ ಮಾನ – ಮರ್ಯಾದಿ ಯಾವುದೂ ಇಲ್ಲ.
ಕೇಂದ್ರದಿಂದಲೂ ಪರಿಶಿಷ್ಟರ ಹಣ ಅನ್ಯಉದ್ದೇಶಕ್ಕೆ ಬಳಕೆ: ಸಚಿವ ಪ್ರಿಯಾಂಕ್ ಖರ್ಗೆ
