ಕೇಂದ್ರದ ಬಿಜೆಪಿ ಸರ್ಕಾರ ಸೇರಿ ಬಿಜೆಪಿ ಆಡಳಿತವಿರುವ ಗುಜರಾತ್‌, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಮಾ.06): ಕೇಂದ್ರದ ಬಿಜೆಪಿ ಸರ್ಕಾರ ಸೇರಿ ಬಿಜೆಪಿ ಆಡಳಿತವಿರುವ ಗುಜರಾತ್‌, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಉದ್ದೇಶಕ್ಕೆ ಬಳಸುವ ಮೂಲಕ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಎಸ್‌ಸಿಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಬುಧವಾರ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, ನೆರೆಯ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಣ ಬಳಸಿದ್ದಾರೆ. ಅದೇ ರೀತಿ 20 ವರ್ಷಗಳಿಂದ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮ್ಯೂಸಿಯಂ, ಧಾರ್ಮಿಕ ಸ್ಥಳಗಳು ಹಾಗೂ ಗೋ ರಕ್ಷಣೆಗೆ 95.67 ಕೋಟಿ ರು. ಬಳಕೆ ಮಾಡಲಾಗಿದೆ. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಹುಟ್ಟೂರಾದ ವಾಡ ನಗರದ ಕುರಿತು ಸಾಕ್ಷ್ಯಚಿತ್ರ ಮಾಡಲು 5 ಕೋಟಿ ರು. ಬಳಕೆ ಮಾಡಲಾಗಿದೆ ಎಂದು ದಾಖಲೆ ಸಹಿತ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಹ ಬೇರೆ ಬೇರೆ ಇಲಾಖೆಗಳಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಉದ್ದೇಶಕ್ಕೆ ವೆಚ್ಚ ಮಾಡಿದೆ ಎಂದು ಅಂಕಿ-ಅಂಶಗಳೊಂದಿಗೆ ವಿವರಿಸಿದ ಅವರು, ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಿಟ್ಟ ಸುಮಾರು 1.63 ಲಕ್ಷ ಹಣ ಬೇರೆಯದಕ್ಕೆ ವೆಚ್ಚ ಮಾಡಿದೆ ಎಂದು ತಿಳಿಸಿದರು. ಯೋಜನಾ ಆಯೋಗ ವ್ಯವಸ್ಥೆ ಇದ್ದಾಗ ಕಾನೂನಿನ ಪ್ರಕಾರ ಹಣ ವೆಚ್ಚ ಮಾಡಬೇಕಿತ್ತು, ಆದರೆ ಮೋದಿ ಸರ್ಕಾರ ಬಂದ ನಂತರ ರಚಿಸಿದ ನೀತಿ ಆಯೋಗ ಈ ನಿಯಮ ತೆಗೆದ ಪರಿಣಾಮ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ದೊರೆದಿತ ಎಂದು ಆರೋಪಿಸಿದ ಪ್ರಿಯಾಂಕ್‌ ಖರ್ಗೆ, ಬುಧವಾರ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ ನಾಯಕರಿಗೆ ನಿಜವಾಗಿ ಪರಿಶಿಷ್ಟರ ಬಗ್ಗೆ ಕಾಳಜಿ, ನ್ಯಾಯ ಕೊಡಿಸುವ ಉದ್ದೇಶವಿದ್ದರೆ, ತೆಗೆದಿರುವ ನಿಯಮ ಪುನರ್‌ ಸ್ಥಾಪನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. 

ಎಚ್‌ಡಿಕೆ ವಿರುದ್ಧ ಬಿಜೆಪಿಯ ಯಾವ ಬಣ ಮಂಡ್ಯ ಚಲೋ ನಡ್ಸುತ್ತೆ?: ಸಚಿವ ಪ್ರಿಯಾಂಕ್‌ ಖರ್ಗೆ

ಪರಿಶಿಷ್ಟರ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ್ದಕ್ಕೆ ಪ್ರಧಾನಿ ಅವರಿಗೆ ಪ್ರಶ್ನಿಸಬೇಕು ಎಂದು ಆಗ್ರಹಿಸಿದರು. ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮಗಳ ಪ್ರಕರಣದಲ್ಲಿ ಶಾಸಕರ ಪುತ್ರನೇ ಎರಡನೇ ಆರೋಪಿಯಾಗಿದ್ದು, ಅವರನ್ನು ಮುಂದಿಟ್ಟುಕೊಂಡು ನಾಳೆ ಪ್ರತಿಭಟನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಈ ಹಿಂದೆ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ, ಬಿ.ಶ್ರೀರಾಮುಲು ಹಾಗೂ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಹಣ ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ಸದನದಲ್ಲೇ ಉತ್ತರ ನೀಡಿದ್ದರು ಎಂದು ಖರ್ಗೆ ಪತ್ರಿಕಾ ಹೇಳಿಕೆಗಳನ್ನು ಉಲ್ಲೇಖಿಸಿ ಬಿಜೆಪಿಗೆ ತಿರುಗೇಟು ನೀಡಿದರು.